Site icon Vistara News

Honey bee attack | ಅಂಕೋಲಾದಲ್ಲಿ ಮತ್ತೆ ಎರಡು ಕಡೆ ಜೇನು ದಾಳಿ: ವಿದ್ಯಾರ್ಥಿ, ಉಪನ್ಯಾಸಕರ ಸಹಿತ ಐವರು ಆಸ್ಪತ್ರೆಗೆ

Honey bee attack

ಕಾರವಾರ: ಅಂಕೋಲಾ ತಾಲೂಕಿನ ಎರಡು ಕಡೆ ಜೇನು ದಾಳಿ ನಡೆಸಿದ ಪರಿಣಾಮ ಐವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿನ ಜಮಗೋಡ ರೈಲ್ವೆ ನಿಲ್ದಾಣದ ಬಳಿ ನಾಲ್ವರ ಮೇಲೆ ಜೇನು ದಾಳಿ ಮಾಡಿದೆ. ಅಜ್ಜಿಕಟ್ಟಾದಲ್ಲಿ ಒಬ್ಬನ ಮೇಲೆ ಜೇನು ದಾಳಿ ನಡೆಸಿದೆ.

ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಲಾನ್ಸ್ ಫರ್ನಾಂಡೀಸ್, ಡಿಪ್ಲೋಮಾ ವಿದ್ಯಾರ್ಥಿ ಡಿ ಜೆ ಎಲೀಶ, ಚಂದುಮಠದ ನಿವಾಸಿಗಳಾದ ಗೋಪಾಲ ಗೌಡ, ಶಶಿಕಲಾ ಗೋಪಾಲ ಗೌಡ ಮತ್ತು ಪುರ್ಲಕ್ಕಿಬೇಣದ ಬೊಮ್ಮಯ್ಯ ಬೀರಾ ಆಗೇರ ಇವರೇ ಜೇನು ಕಡಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾದವರು.

ಪಟ್ಟಣದ ವ್ಯಾಪ್ತಿಯಲ್ಲಿ ಇತ್ತೀಚೆಗೆ ಜೇನು ಕಡಿತದ ಪ್ರಕರಣಗಳು ಹೆಚ್ಚಾಗತೊಡಗಿವೆ. ಪದೇಪದೆ ಜೇನು ದಾಳಿಯಿಂದಾಗಿ ಇಲ್ಲಿನ ಸಾರ್ವಜನಿಕರು ಭಯಭೀತರಾಗಿದ್ದಾರೆ. ಕೆಲವು ದಿನಗಳ ಹಿಂದೆ ಚಲನಚಿತ್ರ ಚಿತ್ರೀಕರಣ ತಂಡದವರ ಮೇಲೆ ಜೇನು ದಾಳಿ ನಡೆಸಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲದೇ ಅಲ್ಲಲ್ಲಿ ಒಂದೆರಡು ಜನ ಜೇನು ಕಡಿತಕ್ಕೊಳಗಾಗುತ್ತಲೇ ಇದ್ದಾರೆ.

ಕಳೆದ ವರ್ಷ ಪೊಲೀಸ್ ಹವಾಲ್ದಾರ ಓರ್ವರು ಜೇನು ಕಡಿತದಿಂದ ಪ್ರಾಣವನ್ನೇ ಕಳೆದುಕೊಂಡ ಘಟನೆ ಜನಮಾನಸದಿಂದ ಮರೆಯಾಗುವ ಮುನ್ನವೇ ಈಗ ಮತ್ತೆ ಮತ್ತೆ ಜೇನು ಕಡಿತದ ಪ್ರಕರಣಗಳು ಕೇಳಿ ಬರುತ್ತಿರುವುದು ಜನರಲ್ಲಿ ಆತಂಕವುಂಟುಮಾಡಿದೆ. ಅರಣ್ಯ ಇಲಾಖೆಯವರು ತಾತ್ಕಾಲಿಕವಾಗಿ ಜೇನನ್ನು ಅಲ್ಲಿಂದ ಓಡಿಸಿದರೂ ಅವು ಮತ್ತೆ ಎಲ್ಲಿಯಾದರೂ ಗೂಡು ಕಟ್ಟಿಕೊಂಡು ಮತ್ತೊಂದು ದಾಳಿಗೆ ಸಜ್ಜಾಗುತ್ತದೆ. ಪಟ್ಟಣದ ವ್ಯಾಪ್ತಿಯಲ್ಲಿ ಕಂಡುಬರುವ ಜೇನುಗೂಡುಗಳನ್ನು ಶಾಶ್ವತವಾಗಿ ತೆರವುಗೊಳಿಸಿದರೆ ಉತ್ತಮ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Honey Bee attack | ಮಾಗಡಿ ಸರ್ಕಾರಿ ಸಂಕೀರ್ಣದಲ್ಲಿ 50ಕ್ಕೂ ಹೆಚ್ಚು ಮಂದಿ ಮೇಲೆ ಹೆಜ್ಜೇನು ದಾಳಿ; ನಾಲ್ವರು ಆಸ್ಪತ್ರೆಗೆ ದಾಖಲು

Exit mobile version