ವಿಜಯಪುರ: ಇತ್ತೀಚೆಗೆ ಹನಿಟ್ರ್ಯಾಪ್ ಪ್ರಕರಣಗಳು (Honey trap) ಹೆಚ್ಚಾಗುತ್ತಿದ್ದು, ಯುವಕನೊಬ್ಬ ಇಂತಹದ್ದೆ ಪ್ರಕರಣದಲ್ಲಿ ಸಿಲುಕಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾನೆ. ಇಲ್ಲಿನ ಸಿಂದಗಿ ತಾಲೂಕಿನ ಬಗಲೂರು ಗ್ರಾಮದಲ್ಲಿ ಫೇಸ್‌ಬುಕ್ ಮೂಲಕ ಪರಿಚಯವಾಗಿದ್ದ ಯುವತಿಯೊಬ್ಬಳು, ಯುವಕನ ಸ್ನಾನ ಮಾಡುವ ವಿಡಿಯೊ ಇಟ್ಟುಕೊಂಡು ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದವಳನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಬಗಲೂರು ಗ್ರಾಮದ ಯುವಕ ಪರಮೇಶ್ ಹಿಪ್ಪರಗಿ ಎಂಬಾತ ಹೈದ್ರಾಬಾದ್‌ನಲ್ಲಿ ಕಟ್ಟಡ ಕಾರ್ಮಿಕರ ಸೂಪರ್‌ವೈಸರ್ ಆಗಿದ್ದವನು. ತಿಂಗಳಿಗೆ 30 ಸಾವಿರ ಸಂಬಳ ಪಡೆಯುತ್ತಿದ್ದ ಪರಮೇಶ್‌ಗೆ ಫೇಸ್‌ಬುಕ್ ಮೂಲಕ ಯುವತಿಯೊಬ್ಬಳು ಪರಿಚಯವಾಗಿದ್ದಳು. ಪರಿಚಯವು ಪ್ರೀತಿಗೆ ತಿರುಗಲು ಹೆಚ್ಚಿನ ಸಮಯ ಬೇಕಿರಲಿಲ್ಲ.
ಕೇವಲ ಫೇಸ್‌ಬುಕ್ ಫೋಟೊ ನೋಡಿಯೇ ಅವಳೊಂದಿಗೆ ಚಾಟಿಂಗ್ ಮಾಡಲು ಆರಂಭಿಸಿದ್ದ. ಇವರ ಚಾಟಿಂಗ್ ಎಷ್ಟರ ಮಟ್ಟಿಗೆ ಮುಂದುವರಿಯಿತು ಎಂದರೆ ಮದುವೆಯಾಗುವ ಹಂತಕ್ಕೂ ಹೋಯಿತು. ತಾನು ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ, ಹಣದ ಅವಶ್ಯಕತೆ ಇದೆ ಮುಂದೆ ನಾನು ಜಿಲ್ಲಾಧಿಕಾರಿ ಆಗುವೆ ಎಂದೆಲ್ಲ ನಯವಾಗಿ ಮಾತಾಡಿ, ಬರೋಬ್ಬರಿ 40 ಲಕ್ಷ ರೂಪಾಯಿ ಪಡೆದಿದ್ದಳು.
ಇವೆಲ್ಲದರ ನಡುವೆ ಹಣಕ್ಕಾಗಿ ಪದೇ ಪದೆ ಬೇಡಿಕೆ ಇಟ್ಟಾಗ ಪರಮೇಶ್‌ಗೆ ತಾನು ವಂಚಕರ ಜಾಲಕ್ಕೆ ಬಿದ್ದಿರುವುದು ತಿಳಿದಿದೆ. ಪರಮೇಶ್ ಸ್ನಾನ ಮಾಡುವ ವಿಡಿಯೊವನ್ನು ವಿಡಿಯೊ ಕಾಲ್ ಮೂಲಕ ರೆಕಾರ್ಡ್ ಮಾಡಿಕೊಂಡು, ಮತ್ತಷ್ಟು ಹಣಕ್ಕೆ ಆಕೆ ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದಳು. ಇದರಿಂದ ಬೇಸತ್ತ ಯುವಕ ಠಾಣೆ ಮೆಟ್ಟಿಲೇರಿದ್ದ, ತನಿಖೆಗಿಳಿದ ಪೊಲೀಸರು ಹಾಸನ ಮೂಲದ ಯುವತಿಯನ್ನು ಬಂಧಿಸಿದ್ದಾರೆ.
ಫೇಸ್‌ಬುಕ್ ಅಪರಿಚಿತರ ಬಗ್ಗೆ ಇರಲಿ ಎಚ್ಚರ
ಮೋಸ ಹೋದ ಯುವಕ ನೀಡಿರುವ ದೂರಿನ ಪ್ರಕಾರ, ಜೂನ್ ತಿಂಗಳ 29ರಂದು Manjula.K.R ಎಂಬ ಫೇಸ್‌ಬುಕ್ ಐಡಿಯಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿದ್ದು, ರಿಕ್ವೆಸ್ಟ್ ಅನ್ನು ಯುವಕ Confirm ಮಾಡಿದ್ದಾನೆ. ನಂತರ ಮೆಸೆಂಜರ್‌ನಲ್ಲಿ Hi ಎಂದು ಮೆಸೇಜ್ ಮಾಡಿ, ಇಬ್ಬರ ನಡುವೆ ಫೇಸ್‌ಬುಕ್ ಮೂಲಕ ಸಂಪರ್ಕ ಬೆಳೆದಿದೆ.
ಇದನ್ನು ಉಪಯೋಗಿಸಿಕೊಂಡ ಆ ಯುವತಿ, ಮೊದಮೊದಲು ನಮ್ಮ ತಾಯಿಗೆ ಆರೋಗ್ಯ ಸರಿ ಇಲ್ಲ, ಅದಕ್ಕೆ 700/- ರೂ ಫೋನ್ ಪೇ ಮಾಡಿ ಎಂದು ಮನವಿ ಮಾಡಿದ್ದಾಳೆ. ಮೊದಲ ಸಲ ಹಣ ವರ್ಗಾವಣೆ ಆಗಿದ್ದೇ ತಡ ಪದೇ ಪದೆ ಫೋನ್ ಪೇ ಮಾಡಿ, ಯುಪಿಎಸ್ಸಿ ಪರೀಕ್ಷೆ ಬರೆಯುತ್ತಿದ್ದು, ಹಣ ನೀಡುವಂತೆ ಕೇಳಿದ್ದಾಳೆ. ಯುವತಿಯನ್ನು ನಂಬಿದ ಪರಮೇಶ್ ಇಲ್ಲಿಯವರೆಗೆ ಸುಮಾರು 40 ಲಕ್ಷಕ್ಕೂ ಅಧಿಕ ಹಣವನ್ನು ಆನ್‌ಲೈನ್ ಮೂಲಕ ಕಳಿಸಿದ್ದಾನೆ. ವಿಚಿತ್ರ ಎಂದರೆ ಈ ತನಕ ಆಕೆಯನ್ನು ಭೇಟಿಯಾಗಿಲ್ಲ. ಕನಿಷ್ಠ ಪಕ್ಷ ವಿಡಿಯೊ ಕಾಲ್‌ನಲ್ಲಿಯೂ ಮುಖವನ್ನು ನೋಡಿಲ್ಲ.
ವಿಶೇಷ ತಂಡ ರಚಿಸಿದ ಪೊಲೀಸರು
ಯಾವಾಗ ಇದು ಆನ್‌ಲೈನ್ ಲವ್ ದೋಖಾ ಎಂದು ತಿಳಿಯಿಯೋ ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್‌ಪಿ ಆನಂದಕುಮಾರ ವಿಶೇಷ ತಂಡವೊಂದನ್ನು ರಚಿಸಿ, ಆರೋಪಿ ಮಂಜುಳಾಳನ್ನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ದಾಸರಹಳ್ಳಿ ಗ್ರಾಮದಿಂದ ಕರೆ ತಂದಿದ್ದಾರೆ.
ಈಕೆಯ ಎಲ್ಲ ಖರ್ತಾನಕ್ ಕೆಲಸಗಳಿಗೆ ಮಂಜುಳಾ ಪತಿಯು ಬೆಂಬಲ ಇರುವುದು ತಿಳಿದು ಬಂದಿದೆ. ಪೋಲಿಸರು ಬಂದ ಮಾಹಿತಿ ತಿಳಿದ ಮಂಜುಳಾ ಗಂಡ ಪರಾರಿ ಆಗಿದ್ದಾನೆ. ಈ ಮಂಜುಳಾಗೆ ಮಕ್ಕಳು ಇದ್ದು, ಈಕೆ ಫೇಸ್‌ಬುಕ್‌ನಲ್ಲಿ ಹಾಕಿರುವ ಫೋಟೊ ಬೇರೆಯವರದ್ದು. ಅಂದವಾದ ಮಾಡಲ್‌ಗಳ ಫೋಟೊ ಹಾಕಿಕೊಂಡು ವಂಚನೆ ಮಾಡಿರುವುದು ಗೊತ್ತಾಗಿದೆ. ಇದೇ ರೀತಿ ಬೇರೆಯವರಿಗೂ ವಂಚಿಸಿದ್ದಾಳಾ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕಾರು ಬಂಗಾರ ಖರೀದಿಸಿದ್ದ ಚೆಲುವೆ
ಪರಮೇಶ್ ನೀಡಿದ ಹಣದಲ್ಲಿ ಮಂಜುಳಾ 100 ಗ್ರಾಂ ಬಂಗಾರ, ಒಂದು ಹುಂಡೈ ಕಾರ್, ಬೈಕ್ ಖರೀದಿ ಮಾಡಿದ್ದಾಳೆ. ಜತೆಗೆ ಊರಲ್ಲಿ ಮನೆಯನ್ನು ಕಟ್ಟಿಸಿದ್ದಂತೆ. ಮಂಜುಳಾ ಈ ಮೋಸದಾಟಕ್ಕೆ ಸಂಪೂರ್ಣವಾಗಿ ಬೆಂಬಲವಾಗಿ ನಿಂತಿದ್ದು ಈಕೆಯ ಗಂಡ. ಈತ ಕೂಡಾ ತಲೆಮರೆಸಿಕೊಂಡಿದ್ದು, ಈತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಮಂಜುಳಾ ಮುಖವನ್ನು ನೋಡದೇ ಲಕ್ಷಾಂತರ ಹಣ ಕಳೆದುಕೊಂಡ ಯುವಕ ಈಗ ತಲೆಯ ಮೇಲೆ ಕೈ ಇಟ್ಟು ಕುಳಿತುಕೊಳ್ಳುವಂತಾಗಿದೆ. ಜನರು ಇಂತಹ ವಂಚಕರಿಂದ ಎಚ್ಚರದಿಂದ ಇರುವಂತೆ ಪೊಲೀಸರು ಎಚ್ಚರಿಸಿದ್ದಾರೆ. ಪ್ರಕರಣ ಭೇದಿಸಿದ ಪೋಲಿಸರ ತಂಡಕ್ಕೆ ಎಸ್‌ಪಿ ಆನಂದಕುಮಾರ ಪ್ರಶಂಸನಾ ಪತ್ರ ನೀಡುವುದರ ಜತೆಗೆ ಶ್ಲಾಘಿಸಿದ್ದಾರೆ.
ಇದನ್ನೂ ಓದಿ | ಮಂಗಳೂರು ಸ್ಫೋಟ | ಶಾರಿಕ್ ಹೊರಟಿದ್ದೆಲ್ಲಿಗೆ? ಟಾರ್ಗೆಟ್ ಯಾವುದು? ಎನ್‌ಐಎ ಎಫ್‌ಐಆರ್‌ನಲ್ಲಿ ಸಿಗದ ಸ್ಪಷ್ಟ ಸುಳಿವು