Site icon Vistara News

Honey trapped! : ಪ್ರೀತಿಯ ನಾಟಕವಾಡಿ ಯುವಕನಿಂದ 40 ಲಕ್ಷ ರೂ. ಲಪಟಾಯಿಸಿದ್ದ ಬೆಳದಿಂಗಳ ಬಾಲೆ ಖೆಡ್ಡಾಕ್ಕೆ ಬಿದ್ಲು!

Honey trap

#image_title

ವಿಜಯಪುರ: ಯುವಕನೊಬ್ಬನ ಜೊತೆಗೆ ಪ್ರೀತಿಯ ನಾಟಕವಾಡಿ ಸುಮಾರು 40 ಲಕ್ಷ ರೂ. ಲಪಟಾಯಿಸಿದ್ದ ಮೊಬೈಲ್ ಗೆಳತಿ, ಬೆಳದಿಂಗಳ ಬಾಲೆ ಇದೀಗ ವಿಜಯಪುರ ಜಿಲ್ಲೆಯ ಪೊಲೀಸರ ಖೆಡ್ಡಾಗೆ ಬಿದ್ದಿದ್ದಾಳೆ. ಇದರೊಂದಿಗೆ ಜಿಲ್ಲೆಯ ಸಿಂದಗಿ ತಾಲೂಕಿನ ಬಗಲೂರು ಗ್ರಾಮದ ಯುವಕನ ಮೊಬೈಲ್ ಪ್ರೇಮ್ ಕಹಾನಿ ಮತ್ತು ದೋಖಾಕ್ಕೆ ಒಂದು ಬ್ರೇಕ್ ಹಾಕಿದ್ದಾರೆ. ಹಾಸನ ಮೂಲದ ಮೊಬೈಲ್ ಬೆಡಗಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಒಪ್ಪಿಸಲಾಗಿದ್ದು, ಸದ್ಯ ಈಕೆ ನ್ಯಾಯಾಂಗ ಬಂಧನದಲ್ಲಿದ್ದಾಳೆ.

ಪೊಲೀಸರಿಗೆ ಕಣ್ತಪ್ಪಿಸಲು ತಯಾರಾಗಿದ್ದ ಚಾಲಾಕಿ

ಈ ದೋಖಾ ಪ್ರಕರಣದಲ್ಲಿ ಯಾವಾಗ ತನ್ನ ವಿರುದ್ಧ ದೂರು ದಾಖಲಾಯಿತೋ, ಇದರಿಂದ ಬಚಾವ್ ಆಗಲು ಪ್ಲ್ಯಾನ್‌ ಮಾಡಿದ್ದಳು. ಹೇಗಿದ್ದರೂ ಲಕ್ಷಾಂತರ ರೂಪಾಯಿ ತನ್ನ ಬಳಿ ಇದೆ, ಒಂದಿಷ್ಟು ದಿನ ಪೊಲೀಸರ ಕಣ್ತಪ್ಪಿಸಿ ಇದ್ದರಾಯಿತು. ನಂತರ ಪ್ರಕರಣದ ಬಿಸಿ ತಣ್ಣಗಾದಾಗ ನಂತರ ಮತ್ತೆ ಹೊರಜಗತ್ತಿಗೆ ಬಂದರಾಯಿತು ಅಂತ ಚಾಲಾಕಿ ಹುಡುಗಿ ಪ್ಲ್ಯಾನ್‌ ಮಾಡಿದ್ದಳು. ಆದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದ ಕುಮಾರ ಅವರು ಇದ್ಯಾವುದಕ್ಕೂ ಅವಕಾಶ ನೀಡದೇ, ವಿಜಯಪುರ ಉಪವಿಭಾಗ ಡಿವೈಎಸ್ಪಿ ಸಿದ್ದೇಶ್ವರ ಹಾಗೂ ಸಿಇಎನ್ ಇನ್ಸ್ಪೆಕ್ಟರ್ ರಮೇಶ ಅವಜಿ ನೇತೃತ್ವದ ಚಾಣಾಕ್ಷ ಪೊಲೀಸರ ಟೀಮ್ ರೆಡಿ ಮಾಡಿದ್ದರು. ಅದಾಗಲೇ ಈ ತಂಡ ಹಾಸನಕ್ಕೆ ಹೋಗಿ ಪರಾರಿಯಾಗಲು ಪ್ಲ್ಯಾನ್‌ ಮಾಡಿದ್ದ ಯುವತಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸರಿಗೂ ಅಳುಕಿತ್ತು

ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಅವಜಿ ಅವರಿಗೂ ಒಂದು ಅಳುಕಿತ್ತು. ಈ ಪ್ರಕರಣ ಅದಾಗಲೇ ಮಾಧ್ಯಮಗಳಲ್ಲಿ ಪ್ರಕಟವಾಗಿದೆ, ಹೀಗಾಗಿ ಅವಳು ಕಣ್ತಪ್ಪಿಸಿಕೊಂಡು ಓಡಿ ಹೋಗಬಹುದು, ಅಥವಾ ನಮ್ಮ ಕಣ್ತಪ್ಪಿಸಬಹುದು ಎನ್ನುವ ಸಣ್ಣ ಅಳುಕಿತ್ತು. ಒಂದು ವೇಳೆ ಆಕೆ ಪರಾರಿಯಾಗಿಬಿಟ್ಟರೆ ನಮ್ಮ ಶ್ರಮ ವ್ಯರ್ಥ. ಜೊತೆಗೆ ಈ ಹುಡುಗನಿಂದ ಪಡೆದ ಹಣವನ್ನು ಆಕೆ ಇನ್ನೊಂದು ಖಾತೆಗೋ ಅಥವಾ ಬ್ಯಾಂಕ್ ನಿಂದ ಹಣ ಡ್ರಾ ಮಾಡಿಕೊಂಡರೆ ಹೇಗೆ ಎನ್ನುವ ಆತಂಕವಿತ್ತು. ಅಷ್ಟೇ ಅಲ್ಲ, ಇಂಥ ಇನ್ನೆಷ್ಟು ಹುಡುಗರ ಜೊತೆಗೆ ಅವಳು ಪ್ರೀತಿಯ ನಾಟಕವಾಡಿರಬಹುದು ಎನ್ನುವ ಒಂದು ಕುತೂಹಲ ಕೂಡಾ ಇನ್ಸ್‌ಪೆಕ್ಟರ್‌ ಅವಜಿ ನೇತೃತ್ವದ ತಂಡಕ್ಕಿತ್ತು.

ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಎಸ್ಪಿ ಅವರು, ಅಗತ್ಯ ಮಾಹಿತಿ ಹಾಗೂ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು. ಚಾಲಾಕಿ ಯುವತಿ ತಪ್ಪಿಸಿಕೊಳ್ಳುವ ಎಲ್ಲಾ ಪ್ಲ್ಯಾನ್ ಮಾಡಿದ್ದಾಗಲೇ ವಿಜಯಪುರ ಪೊಲೀಸರ ಕೈಗೆ ತಗಲಾಕಿಕೊಂಡಿದ್ದಾಳೆ. ಅವಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಪೊಲೀಸರು, ತಮ್ಮ ವಶಕ್ಕೆ ಪಡೆಯಲು ಹಾಸನಕ್ಕೆ ತೆರಳಿದ್ದಾರೆ.

ಹೇಗೆ ಶುರುವಾಯಿತು ಈ ಆನ್‌ಲೈನ್‌ ದೋಖಾ?

ಆನ್ಲೈನ್ ನಲ್ಲಿ ಪರಿಚಯವಾಗಿದ್ದ ಹಾಸನ ಮೂಲದ ಹುಡುಗಿಗೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಗಲೂರು ಗ್ರಾಮದ ಯುವಕನ ನಡುವೆ ಸಲುಗೆ ಬೆಳೆದಿತ್ತು. ಈ ಸಲುಗೆ ಪ್ರೀತಿಗೆ ತಿರುಗಿತ್ತು. ಇಬ್ಬರೂ ಒಬ್ಬರನೊಬ್ಬರು ನೋಡದೆಯೇ ಮನಸಾರೆ ಪ್ರೀತಿಸುತ್ತಿದ್ದರು. ಅವಳ ಓದಿಗಾಗಿ ಮನೆಯಲ್ಲಿ ಕೂಡಿಟ್ಟಿದ್ದ 5 ಲಕ್ಷ ನಗದು ಹಣವನ್ನು ಕೊಟ್ಟ. ಒಂದು ಫ್ಲ್ಯಾಟ್ ಮಾರಿ ಹಣ‌ ಕಳಿಸಿದ. ಆರಂಭದಲ್ಲಿ ಇದು ಪ್ರೀತಿಗಾಗಿ ಕೊಟ್ಟಿದ್ದಾದರೆ ನಂತರ ಒಂದು ರೀತಿಯ ಬ್ಲ್ಯಾಕ್‌ ಮೇಲ್‌ ಮೂಲಕ ಆಕೆ ಹಣ ಪೀಕಿಸುತ್ತಿದ್ದಳು. ಕೊನೆಗೆ ಅವನಿಗೆ ತಾನು ಆನ್‌ಲೈನ್‌ ವಂಚನೆಗೆ ಒಳಗಾಗಿದ್ದು ಗೊತ್ತಾಯಿತು.

ಇದೆಲ್ಲವೂ ಆಗಿದ್ದು ಕೇವಲ ಕೆಲವೇ ತಿಂಗಳ ಅಂತರದಲ್ಲಿ

ಬಗಲೂರು ಗ್ರಾಮದ ಪರಮೇಶ್ವರ ಎಂಬ ಯುವಕ ತನಗೆ ಮೋಸ ಆಗಿದೆ ಎಂದು ದೂರು ನೀಡಿದ್ದು ಕಳೆದ ವರ್ಷದ ನವೆಂಬರ್‌ 15ರಂದು. ಆತ ನೀಡಿದ ದೂರಿನ ಪ್ರಕಾರ, ಜೂನ್ ತಿಂಗಳ 29ರಂದು ಅವನಿಗೆ Manjula.K.R ಎಂಬ ಫೇಸ್ ಬುಕ್ ಐಡಿಯಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿರುತ್ತದೆ. ಆಗ ಈ ಯುವಕ ರಿಕ್ವೆಸ್ಟ್ ಅನ್ನು Confirm ಮಾಡುತ್ತಾನೆ. ನಂತರ ಮೆಸೆಂಜರ್ ನಲ್ಲಿ Hi ಅಂತಾ ಮೆಸೇಜ್ ಮಾಡಿ, ಇಬ್ಬರ ನಡುವೆ ಫೇಸ್ ಬುಕ್ ಮೂಲಕ ಸಂಪರ್ಕ ಬೆಳೆಯುತ್ತದೆ. ಇದನ್ನೇ ಉಪಯೋಗಿಸಿಕೊಂಡ ಆ ಯುವತಿ, ನಮ್ಮ ತಾಯಿಗೆ ಆರೋಗ್ಯ ಸರಿ ಇಲ್ಲ, ಅದಕ್ಕೆ 700/- ರೂ ಫೋನ್ ಪೇ ಮಾಡಿ ಅಂತಾ ಮನವಿ ಮಾಡುತ್ತಾಳೆ. ಇದಕ್ಕೆ ಕರಗಿದ ಆತನ ಹೃದಯ ಫೋನ್ ಪೇ ಮಾಡಿದ್ದ.

ಇದನ್ನೇ ಬಂಡವಾಳ ಮಾಡಿಕೊಂಡ ಆ ಮಹಿಳೆ ಪದೇಪದೆ ಫೋನ್ ಪೇ ಮಾಡಿ, ಯುಪಿಎಸ್ಸಿ ಪರೀಕ್ಷೆ ಬರೆಯುತ್ತಿದ್ದು ಹಣ ಕೊಡಿ ಎಂದು ಕೇಳುತ್ತಾಳೆ. ನಂಬಿದ ಈ ಯುವಕ ಇಲ್ಲಿಯವರೆಗೆ ಸುಮಾರು 40 ಲಕ್ಷ ರೂಪಾಯಿ ಅವಳಿಗೆ ಕಳಿಸಿದ್ದ. ಅದೂ ಕೂಡಾ ಒಂದು ದಿನವೂ ಅವಳ ಮುಖ ನೋಡಿಲ್ಲ, ಕನಿಷ್ಠ ಪಕ್ಷ ಒಂದು ವಿಡಿಯೊ ಕಾಲ್ ಕೂಡಾ ಮಾಡಿಲ್ಲ!

ಇದನ್ನೂ ಓದಿ : Honey trap | ಫೇಸ್‌ಬುಕ್‌ ಚೆಲುವೆಗೆ ಮರುಳಾದ ಸೂಪರ್‌ವೈಸರ್‌; ಪೊಲೀಸರ ಅತಿಥಿಯಾದ ʼಅತಿರೇಕʼ ಸುಂದರಿ!

Exit mobile version