ಮಂಗಳೂರು: ಮಂಗಳೂರಿನ ಉಳ್ಳಾಲದ ಒಂಬತ್ತುಕೆರೆಯಲ್ಲಿ ಜೇನುಹುಳುಗಳು (Honeybee Attack) ದಾಳಿ ಮಾಡಿದ ಘಟನೆ ನಡೆದಿದೆ. ಯುವಕರೆಲ್ಲರೂ ಸೇರಿ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿದ್ದರು. ಎಲ್ಲವೂ ಚೆನ್ನಾಗಿಯೇ ನಡೆಯುತ್ತಿತ್ತು. ಈ ವೇಳೆ ಬ್ಯಾಟ್ಸ್‌ಮ್ಯಾನ್ ಹೊಡೆದ ಬಾಲ್ ನೇರವಾಗಿ ಮರದಲ್ಲಿದ್ದ ಜೇನುಗೂಡಿಗೆ ತಗುಲಿದೆ.
ಮರದಲ್ಲಿದ್ದ ಜೇನುಗೂಡಿನಿಂದ ಜೇನುಹುಳುಗಳು ಚೆಲ್ಲಾಪಿಲ್ಲಿಯಾಗಿವೆ. ನಂತರ ಮೈದಾನದಲ್ಲಿ ಸೇರಿದ್ದ ಯುವಕರ ಮೇಲೆ ದಾಳಿ ಮಾಡಿದೆ. ಜೇನು ಹುಳು ದಾಳಿಗೆ ಕ್ರಿಕೆಟ್ ಆಡುತ್ತಿದ್ದ ಯುವಕರು ದಿಕ್ಕಾಪಾಲಾಗಿ ಓಡಿದ್ದಾರೆ. ಜೇನುನೊಣ ದಾಳಿಗೆ ಯುವಕರು ತಪ್ಪಿಸಿಕೊಂಡಿ ಓಡುತ್ತಿದ್ದ ವಿಡಿಯೋ ವೈರಲ್ ಆಗಿದೆ.
ಸದ್ಯ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಜೇನು ಹುಳು ದಾಳಿಗೆ ಕ್ರಿಕೆಟ್ ಟೂರ್ನಿಯೇ ರದ್ದು ಮಾಡಲಾಗಿದೆ ಎನ್ನಲಾಗಿದೆ.
ಶಿವಮೊಗ್ಗದಲ್ಲಿ 13 ಅಡಿ ಉದ್ದದ ಕಾಳಿಂಬ ಸರ್ಪ ಪತ್ತೆ
ಶಿವಮೊಗ್ಗ ಜಿಲ್ಲೆಯ ಆಡಿನ ಕೊಟ್ಟಿಗೆ ಗ್ರಾಮದಲ್ಲಿ 13 ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆಯಾಗಿದೆ. ಆಡಿನಕೊಟ್ಟಿಗೆ ಕೂಡ್ಲುಕೊಪ್ಪ ಸ್ವಾಮಿ ಎಂಬುವವರ ಮನೆಯ ಹಿಂಭಾಗ ಸೇರಿಕೊಂಡ ಕಾಳಿಂಗ ಸರ್ಪವನ್ನು ಉರಗ ತಜ್ಞ ಬೆಳ್ಳೂರು ನಾಗರಾಜ್ ರಕ್ಷಿಸಿದ್ದಾರೆ. ಸುಮಾರು 9 ಕೆಜಿಗೂ ಹೆಚ್ಚು ತೂಕವಿರುವ ಕಾಳಿಂಗ ಸರ್ಪವನ್ನು ಸ್ಥಳೀಯ ಅರಣ್ಯ ಸಿಬ್ಬಂದಿ ನೆರವಿನಿಂದ ಅರಣ್ಯಕ್ಕೆ ಬಿಟ್ಟಿದ್ದಾರೆ.
ನಾಯಿಗಳು ಬೇಟಿಯಾಡಿದ ಜಿಂಕೆಯ ಮಾಂಸ ಕಡಿಯುವಾಗ ಸಿಕ್ಕಬಿದ್ದ
ಮೈಸೂರಿನ ನಂಜನಗೂಡು ತಾಲೂಕಿನ ಕೊತ್ತನಹಳ್ಳಿ ಗ್ರಾಮದ ಓಂಕಾರ್ ಅರಣ್ಯ ಪ್ರದೇಶದಲ್ಲಿ ಜಿಂಕೆಯೊಂದು ಬಂದಿತ್ತು. ಜಿಂಕೆ ಕಂಡೊಡನೆ ನಾಯಿಗಳು ದಾಳಿ ಮಾಡಿ ಕೊಂದುಹಾಕಿತ್ತು. ಅದೇ ಮಾರ್ಗದಲ್ಲಿ ಬಂದಿದ್ದ ವ್ಯಕ್ತಿಯೊಬ್ಬ ನಾಯಿ ಬೇಟೆಯಾಡಿದ್ದ ಜಿಂಕೆಯ ಮಾಂಸವನ್ನು ಕತ್ತರಿಸುತ್ತಿದ್ದ.
ಮಾಂಸ ಕತ್ತರಿಸುವ ವೇಳೆ ಅರಣ್ಯಾಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಗಣೇಶ್ ಎಂಬಾತನ ಬಂಧನವಾಗಿದ್ದರೆ, ಕೃಷ್ಣ ಎಂಬಾತ ಪರಾರಿ ಆಗಿದ್ದಾನೆ. ಜಿಂಕೆ ಮಾಂಸವನ್ನು ವಶಕ್ಕೆ ಪಡೆದಿರುವ ಅರಣ್ಯ ಇಲಾಖೆ ಅಧಿಕಾರಿಗಳು ನಾಪತ್ತೆಯಾದವನಿಗಾಗಿ ಹುಡುಕಾಟ ನಡೆಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ