ದಾವಣಗೆರೆ: ಹೊನ್ನಾಳಿಯ ಚೀಲೂರು ಗ್ರಾಮದಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದವರನ್ನು ಕಾರಿನಲ್ಲಿ ಬೆನ್ನಟ್ಟಿ ಡಿಕ್ಕಿ ಹೊಡೆಸಿ ಕೊಲೆ ಮಾಡಿದ ದುಷ್ಕರ್ಮಿಗಳು ಪೊಲೀಸರ ಮುಂದೆ ಶರಣಾಗಿದ್ದಾರೆ. ಆಂಜನೇಯ ಮತ್ತು ಮಧು ಎಂಬವರು ಕೋರ್ಟ್‌ಗೆ ಹಾಜರಾಗಿ ಮರಳಿ ಬರುತ್ತಿದ್ದಾಗ ಸ್ಕಾರ್ಪಿಯೋ ವಾಹನ ಡಿಕ್ಕಿ ಹೊಡೆಸಲಾಗಿದೆ. ಬಳಿಕ ಆಂಜನೇಯನನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಆಂಜನೇಯ ಹಂದಿ ಅಣ್ಣಿ ಎಂಬಾತನನ್ನು ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದು, ಅದಕ್ಕೆ ಪ್ರತಿಯಾಗಿ ಈ ಕೊಲೆ ನಡೆದಿದೆ ಎನ್ನಲಾಗಿತ್ತು. ಅದೀಗ ನಿಜವಾಗಿದ್ದು, ಹಂದಿ ಅಣ್ಣಿಯ ಬೆಂಬಲಿಗರು ಎನ್ನಲಾದ ನಾಲ್ವರು ಪೊಲೀಸರಿಗೆ ಶರಣಾಗಿದ್ದಾರೆ.
ಶಿವಮೊಗ್ಗದ ಕುಖ್ಯಾತ ರೌಡಿ ಶೀಟರ್ ಹಂದಿ ಅಣ್ಣಿ ಎಂಬಾತನನ್ನು ಕೊಲೆ ಮಾಡಲಾಗಿತ್ತು. ಹಂದಿ ಅಣ್ಣಿ ಕೊಲೆ ಕೇಸ್‌ನಲ್ಲಿ ಮಧು ಮತ್ತು ಅಂಜನೇಯ ಅಲಿಯಾಸ್ ಅಂಜಿನಿಯನ್ನು ಬಂಧಿಸಲಾಗಿತ್ತು. ಮಧು ಮತ್ತು ಆಂಜನೇಯ ಇತ್ತೀಚೆಗೆ ಜಾಮೀನು ಪಡೆದು ಹೊರಗೆ ಬಂದಿದ್ದರು. ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮಕ್ಕೆ ಸೇರಿದ ಮಧು, ಆಂಜನೇಯ ಅವರಿಗೆ ಬುಧವಾರ ಶಿವಮೊಗ್ಗ ಕೋರ್ಟ್‌ಗೆ ಹಾಜರಾಗಬೇಕಾಗಿತ್ತು.
ಹೀಗೆ ಕೋರ್ಟ್‌ಗೆ ಹಾಜರಾಗಿ ಅವರಿಬ್ಬರು ಶಿವಮೊಗ್ಗದಿಂದ ಬೈಕ್ ಮೂಲಕ ಚೀಲೂರು ಕಡೆಗೆ ಬರುತ್ತಿದ್ದರು. ಈ ನಡುವೆ ಹಂದಿ ಅಣ್ಣಿ ಗ್ಯಾಂಗ್ ಶಿವಮೊಗ್ಗದಿಂದ ಸ್ಕಾರ್ಪಿಯೋ ಕಾರಿನಲ್ಲಿ ಫಾಲೋ ಮಾಡುತ್ತಿತ್ತು.
ಬೈಕ್ ಚೀಲೂರು ಬಳಿಯ ನಿರ್ಜನ ಪ್ರದೇಶಕ್ಕೆ ಬರುತ್ತಿದ್ದಂತೆಯೇ ಕಾರಿನಿಂದ ಡಿಕ್ಕಿ ಹೊಡೆಸಲಾಯಿತು. ಮಧು, ಆಂಜನೇಯ ಬೈಕ್‌ನಿಂದ ಕೆಳಗೆ ಬಿದ್ದ ತಕ್ಷಣ ಗ್ಯಾಂಗ್ ಮನಸೋ ಇಚ್ಛೆ ಹಲ್ಲೆ ಮಾಡಿತ್ತು. ಹಲ್ಲೆಯಿಂದ ತೀವ್ರ ಗಾಯಗೊಂಡ ಆಂಜನೇಯ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಅವನ ಜತೆಗಿದ್ದ ಮಧುಗೆ ಗಂಭೀರ ಗಾಯವಾಗಿದೆ.
ತಪ್ಪಿಸಿಕೊಳ್ಳಲಾಗದೆ ಶರಣಾದ ಗ್ಯಾಂಗ್
ಬೈಕ್‌ಗೆ ಸ್ಕಾರ್ಪಿಯೊ ಡಿಕ್ಕಿ ಹೊಡೆಸಿ ಲಾಂಗ್‌ನಿಂದ ಹಲ್ಲೆ ಮಾಡಿ ಆಂಜನೇಯನನ್ನು ಕೊಲೆ ಮಾಡಿದ ಗ್ಯಾಂಗ್ ಬಳಿಕ ಬಸ್ಸಿನಲ್ಲಿ ಪರಾರಿಯಾಗಿತ್ತು. ನಿಜವೆಂದರೆ, ಕೊಲೆ ಮಾಡಿದ ಬಳಿಕ ಹಂತಕರಿಗೆ ಕಾರು ರಿವರ್ಸ್ ತೆಗೆಯಬೇಕಾಗಿತ್ತು. ಆದರೆ, ತೆಗೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅವರು ಅದೇ ಹೊತ್ತಿಗೆ ಅಲ್ಲಿ ಬಂದ ಕೆಎಸ್ಸಾರ್ಟಿಸಿ ಬಸ್‌ನಲ್ಲಿ ಶಿಗ್ಗಾಂವಿಗೆ ಪ್ರಯಾಣ ಬೆಳೆಸಿದ್ದರು.
ಹಾವೇರಿಯ ಶಿಗ್ಗಾವಿಗೆ ತೆರಳಿದ ಆರೋಪಿಗಳು ಅಲ್ಲಿನ ಪೊಲೀಸ್ ಠಾಣೆಯಲ್ಲಿ ಶರಣಾಗತರಾಗಿದ್ದಾರೆ. ಸುನೀಲ್ ಅಲಿಯಾಸ್ ತಮಿಳ್ ಸುನೀಲ್, ಅಭಿಲಾಷ್, ವೆಂಕಟೇಶ್, ಪವನ್ ಶರಣಾಗತರಾದ ಆರೋಪಿಗಳು. ಇವರು ಹಂದಿ ಅಣ್ಣಿ ಕಡೆಯವರು ಎನ್ನಲಾಗುತ್ತಿದೆ.
ಇದನ್ನೂ ಓದಿ Dalit woman murder: ಪ್ರೀತಿಸಿ ಮದುವೆಯಾದ ಮೂರೇ ದಿನಕ್ಕೆ ದಲಿತ ಯುವತಿ ಸಾವು, ಕೊಲೆ ಶಂಕೆ