ಬೆಂಗಳೂರು: ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ ಕುದುರೆ ರೇಸ್ ಆಯೋಜನೆಗೆ ಅನುಮತಿ ನೀಡಿ ಏಕಸದಸ್ಯ ಪೀಠ ನೀಡಿದ್ದ ಮಧ್ಯಂತರ ಆದೇಶಕ್ಕೆ ತಡೆ ನೀಡಿ ಹೈಕೋರ್ಟ್‌ನ ವಿಭಾಗೀಯ ಪೀಠ ಆದೇಶ ನೀಡಿದ್ದು, ಇದರಿಂದ ಸದ್ಯಕ್ಕೆ ರೇಸ್ ಪಂದ್ಯಾವಳಿ (Horse Racing) ಹಾಗೂ ಬೆಟ್ಟಿಂಗ್ ಸ್ಥಗಿತಗೊಳ್ಳಲಿದೆ.
ಸಿಜೆ ಎನ್.ವಿ. ಅಂಜಾರಿಯಾ, ನ್ಯಾ.ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ಪೀಠ ಆದೇಶ ನೀಡಿದೆ. ಇದರಿಂದ ಇಂದಿನಿಂದ ಆರಂಭವಾಗಬೇಕಿದ್ದ ರೇಸ್ ಪಂದ್ಯಾವಳಿಗಳು ತಾತ್ಕಾಲಿಕವಾಗಿ ಅಮಾನತುಗೊಂಡಂತಾಗಿದೆ.
ಕುದುರೆ ರೇಸ್ ಆಯೋಜನೆಗೆ ಅನುಮತಿ ನಿರಾಕರಿಸಿ ರಾಜ್ಯ ಸರ್ಕಾರ 2024ರ ಜೂ.6ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಬೆಂಗಳೂರು ಟರ್ಫ್ ಕ್ಲಬ್ ಲಿಮಿಟೆಡ್ (ಬಿಟಿಸಿ), ಕರ್ನಾಟಕ ಟ್ರೈನರ್ಸ್ ಅಸೋಸಿಯೇಷನ್ಸ್, ಕರ್ನಾಟಕ ರೇಸ್ ಕುದುರೆ ಮಾಲೀಕರ ಸಂಘ, ಕರ್ನಾಟಕ ಜಾಕಿಗಳ ಸಂಘ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಮಾರ್ಚ್ ತಿಂಗಳಲ್ಲಿ ಆನ್ ಕೋರ್ಸ್ ಮತ್ತು ಆಫ್ ಕೋರ್ಸ್ ಕುದುರೆ ಪಂದ್ಯ ಮತ್ತು ಬೆಟ್ಟಿಂಗ್ ಚಟುವಟಿಕೆಗಳನ್ನು ನಡೆಸಲು ಸರ್ಕಾರ ನೀಡಿದ್ದ ಪರವಾನಗಿಯ ಷರತ್ತಿನಂತೆ ಕುದುರೆ ಪಂದ್ಯ ಆಯೋಜಿಸಬಹುದು ಎಂದು ಮಧ್ಯಂತರ ಆದೇಶ ನೀಡಿತ್ತು. ಇದಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ತಡೆ ನೀಡಿದೆ.
ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ 2024ರ ಏಪ್ರಿಲ್‌ನಿಂದ ಆಗಸ್ಟ್‌ವರೆಗೆ ಆನ್ ಕೋರ್ಸ್-ಆಫ್ ಕೋರ್ಸ್ ಕುದುರೆ ಪಂದ್ಯಗಳು ಹಾಗೂ ಬೆಟ್ಟಿಂಗ್ ಚಟುವಟಿಕೆ ನಡೆಸಲು ಅನುಮತಿ ನೀಡುವಂತೆ ಕೋರಿ ಬಿಟಿಸಿ 2024ರ ಮಾ.21ರಂದು ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿತ್ತು. ಆದರೆ, ಸರ್ಕಾರದಿಂದ ಕುದುರೆ ರೇಸ್ ಪಂದ್ಯಾವಳಿ ಆಯೋಜನೆಗೆ ಅನುಮತಿ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಬಿಟಿಸಿ ಮತ್ತಿತರರು ಹೈಕೋರ್ಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿಗಳನ್ನು ಪರಿಗಣಿಸಿ ನಿರ್ಧಾರ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಜೂ.6ರವರೆಗೆ ಕಾಲಾವಕಾಶ ನೀಡಿ ಹೈಕೋರ್ಟ್ ಮೇ 21 ಹಾಗೂ 23ರಂದು ಆದೇಶಿಸಿತ್ತು. ಅದರಂತೆ, ಬಿಟಿಸಿಯ ಮನವಿ ಪರಿಶೀಲಿಸಿದ್ದ ರಾಜ್ಯ ಸರ್ಕಾರ, ತೆರಿಗೆ ವಂಚನೆ ಹಾಗೂ ಬೆಟ್ಟಿಂಗ್ ಅಕ್ರಮ ಸೇರಿ ವಿವಿಧ ಅವ್ಯವಹಾರಗಳನ್ನು ಮುಂದಿಟ್ಟುಕೊಂಡು ಕುದುರೆ ಪಂದ್ಯ ಆಯೋಜಿಸಲು ಅನುಮತಿ ನಿರಾಕರಿಸಿ ಜೂ.6ರಂದು ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ತಿದ್ದುಪಡಿ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ | Parking Complex: ಬೆಂಗಳೂರಿನಲ್ಲಿ ಸುಸಜ್ಜಿತ ಪಾರ್ಕಿಂಗ್ ಕಾಂಪ್ಲೆಕ್ಸ್; ಶುಲ್ಕದ ಕುರಿತ ಮಾಹಿತಿ ಇಲ್ಲಿದೆ
ಭೂ ಕಬಳಿಕೆ; ರೋಹಿಣಿ ಸಿಂಧೂರಿ ಸೇರಿ 6 ಮಂದಿ ವಿರುದ್ಧ ಬಾಲಿವುಡ್ ಖ್ಯಾತ ಗಾಯಕ ದೂರು
ಬೆಂಗಳೂರು: ಭೂ ಕಬಳಿಕೆ (Land Grabbing) ಮಾಡಿದ್ದಾರೆ ಎಂದು ಆರೋಪಿಸಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಸೇರಿ 6 ಮಂದಿ ವಿರುದ್ಧ ಬಾಲಿವುಡ್‌ನ ಖ್ಯಾತ ಗಾಯಕ ಲಕ್ಕಿ ಅಲಿ(Lucky Ali), ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಯಲಹಂಕ ನ್ಯೂ ಟೌನ್ ಬಳಿ, ಟ್ರಸ್ಟ್‌ಗೆ ಸೇರಿರುವ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಲಕ್ಕಿ ಅಲಿ ಆರೋಪಿಸಿದ್ದು, ಈ ಬಗ್ಗೆ ದೂರಿನ ಪ್ರತಿಯನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ, ಸಹಾಯಕ ಪೊಲೀಸ್ ಕಮಿಷನರ್ ಮಂಜುನಾಥ್, ಯಲಹಂಕ ನ್ಯೂ ಟೌನ್ ಪಿಎಸ್‌ಐ, ತಾಲೂಕು ಸರ್ವೇಯರ್ ಮನೋಹರ್, ಸುಧೀರ್ ರೆಡ್ಡಿ ಹಾಗೂ ಮಧಸೂಧನ್ ರೆಡ್ಡಿ ಸೇರಿ ಮಂದಿ ವಿರುದ್ಧ ದೂರು ದಾಖಲಾಗಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ 2022ರಲ್ಲಿಯೂ ಲಕ್ಕಿ ಅಲಿ ದೂರು ಸಲ್ಲಿಸಿದ್ದರು. ತಮ್ಮ ಟ್ರಸ್ಟ್ ಜಮೀನನ್ನು ಸುಧೀರ್ ರೆಡ್ಡಿ ಹಾಗೂ ಮಧುಸೂಧನ್ ರೆಡ್ಡಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಇದಕ್ಕೆ ರೋಹಿಣಿ ಸಿಂಧೂರಿ ಸಹಕಾರ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಯಲಹಂಕ ನ್ಯೂಟೌನ್ ಬಳಿ ಲಕ್ಕಿ ಅಲಿ ಟ್ರಸ್ಟ್ ಇದ್ದು, ಭೂ ಕಬಳಿಕೆಯಲ್ಲಿ ಯಲಹಂಕ ನ್ಯೂ ಟೌನ್ ಠಾಣೆಯ ಎಸಿಪಿ ಮಂಜುನಾಥ್, ತಾಲೂಕು ಸರ್ವೇ ಅಧಿಕಾರಿ ಮನೋಹನ್ ಶಾಮೀಲಾಗಿದ್ದಾರೆ ಎಂದು ದೂರು ನೀಡಿದ್ದಾರೆ. ರೋಹಿಣಿ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಲೋಕಾಯುಕ್ತಕ್ಕೆ ಗಾಯಕ ಮನವಿ ಮಾಡಿದ್ದಾರೆ.