ಬೆಳಗಾವಿ: ಅದೃಷ್ಟವಿದ್ದರೆ, ಆಯುಷ್ಯವಿದ್ದರೆ ಎಂಥಾ ಪರಿಸ್ಥಿತಿಯಲ್ಲೂ ಬದುಕಿರಬಹುದು ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಕೇವಲ ಎರಡು ಆಡಿ ಅಗಲವಿರುವ ಒಂದು ಸಣ್ಣ ಬಾವಿಯೊಳಗೆ ಆ ಕುದುರೆ (Horse falls into well) ಅದು ಹೇಗೋ ಗೊತ್ತಿಲ್ಲ. ಆದರೆ, ಆ ಪ್ರದೇಶದ ಜನರು ಮಾತ್ರ ಅತ್ಯಂತ ಸಾಹಸದಿಂದ ಅದನ್ನು ಮೇಲೆತ್ತಿ ರಕ್ಷಿಸಿದ್ದು (Horse rescued) ಭಾರಿ ಪ್ರಶಂಸೆಗೆ ಒಳಗಾಗಿದೆ.
ಈ ಘಟನೆ ನಡೆದಿರುವುದು ಬೆಳಗಾವಿ ಹೊರವಲಯ ಖಾಸಬಾಗ್‌ನ ಟೀಚರ್ಸ್ ಕಾಲೋನಿಯಲ್ಲಿ (Teachers colony). ಅಲ್ಲಿನ ಅರೆನಿರ್ಮಾಣ ಹಂತದ ಕಟ್ಟಡವೊಂದರ ಪಕ್ಕದಲ್ಲಿ ಸಣ್ಣ ಬಾವಿಯೊಂದಿದೆ. ಕೇವಲ ಹೆಚ್ಚೆಂದರೆ ಎರಡಡಿ ಅಗಲ ಇರಬಹುದು. ಆಳ ಸುಮಾರು 20 ಅಡಿ. ನವೀನ್ ಹೇರೇಕರ್ ಎಂಬುವರ ಮನೆ ಎದುರು ಇರುವ ಬಾವಿ ಇದು.
ಮಧ್ಯಾಹ್ನ ಸುಮಾರು 1.30ರ ಹೊತ್ತಿಗೆ ಒಮ್ಮಿಂದೊಮ್ಮೆಗೇ ಆ ಪ್ರದೇಶದಲ್ಲಿ ಯಾವಾಗಲೂ ಓಡಾಡುವ ಕುದುರೆ ಜೋರಾಗಿ ಅರಚುವ ಸದ್ದು ಕೇಳಿಸಿತು. ಎಲ್ಲಿಂದ ಸದ್ದು ಬರುತ್ತಿದೆ ಎಂದು ಹುಡುಕಿದರೆ ಕೊನೆಗೆ ಗೊತ್ತಾಗಿದ್ದು ಆ ಸದ್ದು ಬರುತ್ತಿರುವುದು ಆ ಪುಟ್ಟ ಬಾವಿಯಿಂದ ಎನ್ನುವುದು.
ಹೋಗಿ ನೋಡಿದರೆ ಕಪ್ಪು ಬಣ್ಣದ ಆ ಕುದುರೆ ಬಾವಿಯೊಳಗೆ ಬಿದ್ದಿದೆ. ನಿಜವೆಂದರೆ ಕುದುರೆಯೊಂದು ತಲೆ ಮೇಲೆ ಕಾಲು ಕೆಳಗಾಗಿ ಬಿದ್ದರೆ ತುಂಬಿಬಿಡುವಷ್ಟು ಸಣ್ಣ ಬಾವಿ ಅದು. ಕುದುರೆ ಬಹುಶ: ರಸ್ತೆಯಲ್ಲಿ ನಡೆದುಕೊಂಡು ಹೋಗುವ ವೇಳೆ ಅದರ ಹಿಂದಿನ ಕಾಲುಗಳು ಆಯತಪ್ಪಿ ಬಾವಿಗೆ ಬಿದ್ದಿರಬೇಕು. ಹೀಗಾಗಿ ಕಾಲು ಕೆಳಗಿತ್ತು, ತಲೆ ಮೇಲಿತ್ತು.
ಜೋರಾಗಿ ಅರಚುತ್ತಿದ್ದ ಕುದುರೆಯನ್ನು ಹೇಗಪ್ಪಾ ಮೇಲೆ ತೆಗೆಯುವುದು ಎಂದು ಯೋಜಿಸಿದ ಸ್ಥಳೀಯರು ತಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದರು. ಅಗ್ನಿಶಾಮಕ, ಎಸ್‌ಡಿಆರ್‌ಎಫ್ ಸಿಬ್ಬಂದಿ ಧಾವಿಸಿ ಬಂದರು. ಅವರೇನೂ ಬಂದರು. ಆದರೆ, ಒಳಗಿನಿಂದ ಕುದುರೆಯನ್ನು ಮೇಲೆತ್ತುವುದು ಹೇಗೆ?
ಯಾಕೆಂದರೆ 20 ಅಡಿಯ ಅತ್ಯಂತ ಇರುಕಿನ ಬಾವಿಯಲ್ಲಿ ಸಿಕ್ಕಿಬಿದ್ದಿರುವ ಕುದುರೆಯನ್ನು ಮೇಲೆತ್ತುವುದು ಸುಲಭವ ವಿಷಯವಾಗಿರಲಿಲ್ಲ. ಕೆಲವರು ಬೋರ್‌ವೆಲ್‌ನಲ್ಲಿ ಸಿಕ್ಕಿಬಿದ್ದ ಮಕ್ಕಳನ್ನು ರಕ್ಷಿಸಲು ಬಳಸುವ ತಂತ್ರ ಬಳಸಬಹುದು ಎಂದರು. ಅಂದರೆ ದೂರದಿಂದಲೇ ಆಳವಾದ ದೊಡ್ಡ ಗುಂಡಿಯನ್ನು ತೋಡುತ್ತಾ ಬಂದು ಬಾವಿಯವರೆಗೆ ಕುಳಿ ಮಾಡುವುದು, ಬಳಿಕ ಬಾವಿಯ ಸಿಮೆಂಟ್ ಗೋಡೆಯನ್ನು ಒಡೆದು ಕುದುರೆಯನ್ನು ಮೇಲೆ ತರುವುದು ಎಂದೆಲ್ಲ ಮಾತನಾಡಿಕೊಂಡರು. ಆದರೆ, ಅದೆಲ್ಲ ಕಷ್ಟ ಎಂಬ ಮಾತು ಬಂತು.
ಕೊನೆಗೆ ಒಂದು ಯೋಚನೆ ಹೊಳೆಯಿತು. ಅದೇನೆಂದರೆ, ಬಾವಿಯೊಳಗೆ ಇರುವ ಜಾಗದಲ್ಲಿ ಒಂದು ಸಣ್ಣ ಏಣಿಯನ್ನು ಇಳಿಸಿ, ಅದರಲ್ಲಿ ಯಾರಾದರೂ ಕೆಳಗಿಳಿದು ಕುದುರೆಯ ದೇಹಕ್ಕೆ ಹಗ್ಗವನ್ನು ಕಟ್ಟಿ, ಬಳಿಕ ಅದನ್ನು ಮೆಲ್ಲಗೆ ಮೇಲೆಳೆಯುವುದು ಎಂದು ತೀರ್ಮಾನಿಸಲಾಯಿತು.
ಕೊನೆಗೆ ಇದೇ ತಂತ್ರವನ್ನು ಬಳಸಿ ಅತ್ಯಂತ ಜಾಗರೂಕವಾಗಿ ಮೇಲೆತ್ತಲಾಯಿತು. ಮೇಲೆ ಬಂದ ಬಳಿಕ ಸ್ವಲ್ಪ ಹೊತ್ತು ಹಾಗೇ ಬಿದ್ದು ಕೊಂಡಿದ್ದ ಕುದುರೆ ಬಳಿಕ ಸಾವರಿಸಿಕೊಂಡಿತು. ಅದೃಷ್ಟವಶಾತ್ ಕುದುರೆಗೆ ಘಾತಕವಾಗುವ ಯಾವುದೇ ಸಮಸ್ಯೆ ಆಗಿರಲಿಲ್ಲ.
ಇದೇ ವೇಳೆ ಬಾವಿಗೆ ಸೂಕ್ತ ಸುರಕ್ಷಾ ಕ್ರಮ ಅನುಸರಿಸಲು ಮನೆ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ. ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಕೂಡಾ ಬಂದಿದ್ದರು.
ಇದನ್ನೂ ಓದಿ : Elephant attack: ಆಪರೇಷನ್ ಎಲಿಫೆಂಟ್: ಆರು ಮಂದಿಯನ್ನು ಬಲಿ ಪಡೆದಿದ್ದ ಜೋಡಿ ಕಾಡಾನೆ ಕೊನೆಗೂ ಸೆರೆ