ಬೆಂಗಳೂರು: ಇಲ್ಲಿನ ಹೊಸಕೆರೆ ಹಳ್ಳಿಯ (Hosakere Halli lake) ಐತಿಹಾಸಿಕ ಕೆರೆಯನ್ನು ಮುಚ್ಚಿ ರಸ್ತೆ ನಿರ್ಮಿಸಲು ಹೋದ ಪಾಲಿಕೆಗೆ ವಿರೋಧಗಳು ವ್ಯಕ್ತವಾಗಿವೆ. ಜೀವಂತ ಕೆರೆಯನ್ನು ಬಗೆದು ಕೆರೆಯೊಳಗೆ ಬೃಹತ್ ರಸ್ತೆ ನಿರ್ಮಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೊರಟಿತ್ತು. ಆದರೆ ಯಾವಾಗ ಈ ಅಕ್ರಮದ ಕುರಿತು ವಿರೋಧ ವ್ಯಕ್ತವಾಯಿತೋ ಈಗ ಕಾಮಗಾರಿಯಿಂದ ಹಿಂದೆ ಸರಿದಿದೆ.
ಸುಮಾರು 47 ಎಕರೆ ವಿಸ್ತೀರ್ಣ ಇರುವ ಈ ಕೆರೆ ಬರೋಬ್ಬರಿ 500 ವರ್ಷಗಳ ಇತಿಹಾಸ ಹೊಂದಿದೆ. ಆದರೆ ಪಾಲಿಕೆ ಅಧಿಕಾರಿಗಳು ಖಾಸಗಿಯವರ ಅನುಕೂಲಕ್ಕೆ ರಸ್ತೆ ಮಾಡುತ್ತಿರುವುದಾಗಿ ಸ್ಥಳೀಯರು ಆರೋಪ ಮಾಡಿದ್ದರು. ಕೆರೆ ನಾಶ ಮಾಡುತ್ತಿರುವುದು ತಿಳಿಯುತ್ತಿದ್ದಂತೆ ಎಲ್ಲೆಡೆ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಗುರುವಾರ ಬಿಬಿಎಂಪಿ ಪ್ರಾಜೆಕ್ಟ್ ವಿಭಾಗದ ವಿಶೇಷ ಆಯುಕ್ತ ರವೀಂದ್ರ ಅವರು ಖುದ್ದು ಕೆರೆ ಕಾಮಗಾರಿ ಪರಿಶೀಲನೆಗೆ ಮುಂದಾದರು.
ಈ ವೇಳೆ ಕೆರೆಯೊಳಗೆ ರಸ್ತೆ ನಿರ್ಮಿಸುವುದು ಸರಿಯೇ ಎಂಬ ಮಾಧ್ಯಮದವರು ಪ್ರಶ್ನೆ ಕೇಳಿದಾಗ ವಿಶೇಷ ಆಯುಕ್ತರ ಬಳಿ ಉತ್ತರವೇ ಇರಲಿಲ್ಲ. ಏನೋ ತಪ್ಪಾಗಿದೆ, ಕೆರೆಯಲ್ಲಿ ಹೂಳು ಎತ್ತಲು ತಾತ್ಕಾಲಿಕ ರಸ್ತೆಯನ್ನಷ್ಟೇ ನಿರ್ಮಿಸಲಾಗಿತ್ತು. ಇದರಿಂದ ಗೊಂದಲ ಉಂಟಾಗಿದೆ ಅಷ್ಟೇ. ಈಗ ತಕ್ಷಣ ಈ ರಸ್ತೆ ತೆರವು ಮಾಡಲು ಹಿರಿಯ ಅಧಿಕಾರಿಗಳಿಗೆ ಆದೇಶ ಮಾಡಲಾಗಿದೆ ಎಂದರು.
ಇದನ್ನೂ ಓದಿ: Modi in Karnataka : ದಾವಣಗೆರೆ ಸಮಾವೇಶದಲ್ಲಿ ಪೆಂಡಾಲ್‌ನೊಳಗೇ ನಡೆಯಲಿದೆ ನರೇಂದ್ರ ಮೋದಿ ರೋಡ್ ಶೋ!
ಇನ್ನು ರಸ್ತೆಯನ್ನು ಹಿಟಾಚಿ ಬಳಸಿ ತೆರವುಗೊಳಿಸಲಾಯಿತು. ಆದಷ್ಟು ಶೀಘ್ರವಾಗಿ ಕೆರೆ ರಿಪೇರಿ ಮಾಡಿ ಮತ್ತೆ ಕೆರೆಯಲ್ಲಿ ನೀರು ನಿಲ್ಲುವಂತೆ ಮಾಡುವುದಾಗಿ ಬಿಬಿಎಂಪಿ ಅಧಿಕಾರಿಗಳು ಆಶ್ವಾಸನೆಯನ್ನೂ ಕೊಟ್ಟಿದ್ದಾರೆ. ಅಲ್ಲದೇ ಕೆರೆ ರಿಪೇರಿಗಾಗಿ 9 ಕೋಟಿ ಮೀಸಲಿಟ್ಟಿದ್ದು, ಕೆರೆಯನ್ನು ಕೆರೆಯಾಗಿಯೇ ಉಳಿಸುತ್ತೇವೆ ಎಂಬ ಮಾತನ್ನು ಹೇಳಿದ್ದಾರೆ.
ರಾಜ್ಯದ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ