Site icon Vistara News

Hosapete Railway station : ಹೊಸಪೇಟೆಯಲ್ಲಿ ನಿಂತೇ ಈಗ ಹಂಪಿಯನ್ನೂ ನೋಡ್ಬೋದು, ಹೇಗಂತೀರಾ?

Hospete railway station

#image_title

ಪಾಂಡುರಂಗ ಜಂತ್ಲಿ, ವಿಸ್ತಾರ ನ್ಯೂಸ್‌, ಹೊಸಪೇಟೆ
ನೀವು ಈಗ ಹೊಸಪೇಟೆಗೆ ಬಂತು ನಿಂತರೆ ಸಾಕು, ನಿಮಗೆ ಹಂಪಿಯ ಝಲಕ್‌ ಕಾಣಿಸುತ್ತದೆ! ಅಲ್ಲಿನ ಬಹುತೇಕ ವಿಶೇಷಗಳನ್ನು ನೀವು ಇಲ್ಲಿಂದಲೇ ನೋಡಬಹುದು! ಹೇಗಂತೀರಾ? ವಿಭಿನ್ನವಾಗಿ ಅಭಿವೃದ್ಧಿಪಡಿಸಲಾದ ಹೊಸಪೇಟೆಯ ರೈಲು ನಿಲ್ದಾಣ (Hosapete Railway station) ಹಂಪಿಯನ್ನೇ ಮರು ಸೃಷ್ಟಿ ಮಾಡಿದಂತಿದೆ!

ಇಲ್ಲಿಗೆ ಬಂದರೆ ಹಂಪಿಗೆ ಬಂದಂತೇ ಕಾಣಿಸುತ್ತದೆ…!

ಹೌದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಹುಬ್ಬಳ್ಳಿಯಲ್ಲೇ ನಿಂತು ವರ್ಚ್ಯುವಲ್‌ ಆಗಿ ಉದ್ಘಾಟನೆ ಮಾಡಿದ ಹೊಸಪೇಟೆ ರೈಲ್ವೇ ಸ್ಟೇಷನ್‌ ಐತಿಹಾಸಿಕ ಕೇಂದ್ರದಂತೆ ಕಾಣುತ್ತಿದೆ. ಇದು ಪ್ರವಾಸಿ ಮತ್ತು ಪ್ರಯಾಣಿಕ ಸ್ನೇಹಿಯಾಗಿ ಅಭಿವೃದ್ಧಿಪಡಿಸಲಾದ ರೈಲು ನಿಲ್ದಾಣವಾಗಿದ್ದು, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶವನ್ನು ಹೊಂದಿದೆ.

ವಿಜಯ ನಗರ ಸಾಮ್ರಾಜ್ಯ ಕಾಲದ ನಾಣ್ಯಗಳ ಪ್ರದರ್ಶನ

ಈ ನವೀಕೃತ ರೈಲು ನಿಲ್ದಾಣವನ್ನು ಯಾವ ಕಡೆಯಿಂದ ನೋಡಿದರೂ ಹಂಪಿಯ ಹಂಪಿ ಸ್ಮಾರಕಗಳೇ ಕಾಣುತ್ತವೆ. ಕೇಂದ್ರ ರೈಲ್ವೇ ಸಚಿವಾಲಯ ಮತ್ತು ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಸಹಭಾಗಿತ್ವದಲ್ಲಿ ಮೇಲ್ದರ್ಜೆಗೇರಿಸಿರುವ ರೈಲು ನಿಲ್ದಾಣ ಎಲ್ಲರ ಗಮನ ಸೆಳೆಯುತ್ತಿದೆ. ದೇಶ, ವಿದೇಶಗಳಿಂದ ಬರುವ ಪ್ರವಾಸಿಗರಿಗೆ ಹಂಪಿಯ ಸ್ಮಾರಕಗಳ ಪರಿಚಯ ಹೊಸಪೇಟೆಯ ರೈಲು ನಿಲ್ದಾಣದಿಂದಲೇ ಆರಂಭವಾಗಲಿದೆ.

ಹೊಸಪೇಟೆ ನಿಲ್ದಾಣದ ಪೂರ್ಣ ನೋಟ

ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಯುನೆಸ್ಕೋ ವಿಶ್ವಪರಂಪರೆಯ ತಾಣವಾಗಿರುವ ವಿಜಯನಗರ ಸಾಮ್ರಾಜ್ಯದ ಹಂಪಿಯ ಸ್ಮಾರಕಗಳ ಶೈಲಿಯಲ್ಲಿ ಹೊಸಪೇಟೆ ರೈಲು ನಿಲ್ದಾಣ ಈಗಾಗಲೇ ಹೊಸ ಮೆರುಗನ್ನು ಪಡೆದು ಮಿಂಚುತ್ತಿದೆ.

ಪ್ರವಾಸೋದ್ಯಮವನ್ನು ಉಳಿಸಿ – ಬೆಳೆಸಲು ದಿಟ್ಟ ಹೆಜ್ಜೆ ಇಟ್ಟಿರುವ ಕೇಂದ್ರ ರೈಲ್ವೇ ಸಚಿವಾಲಯ ಮತ್ತು ಕೇಂದ್ರ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ 13.5 ಕೋಟಿ ರುಪಾಯಿ ವೆಚ್ಚದಲ್ಲಿ ವಿಶ್ವ ವಿಖ್ಯಾತ ಹಂಪಿ ಮಾದರಿಯಲ್ಲಿ ರೈಲು ನಿಲ್ದಾಣದ ಪ್ರವೇಶ ಮತ್ತು ನಿರ್ಗಮನ ದ್ವಾರವನ್ನು ಸ್ಮಾರಕಗಳ ಶೈಲಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಹೊಸಪೇಟೆಗೆ ಬಂದರೆ ಹಂಪಿಗೆ ಬಂದ ಅನುಭವ!

ಹಂಪಿಯ ಏನೇನು ಕಲಾಕೃತಿಗಳು ಇಲ್ಲಿವೆ?

ಪ್ರವೇಶ ದ್ವಾರವಿದು
  1. ಹಂಪಿಯ ವಾಸ್ತುಶಿಲ್ಪದ ಮಾದರಿ ವಿನ್ಯಾಸದಲ್ಲಿ ರೈಲು ನಿಲ್ದಾಣದಲ್ಲಿ ಹಂಪಿಯಲ್ಲಿರುವ ಪ್ರಮುಖ ದೇಗುಲ, ಉಗ್ರ ನರಂಸಿಂಹ, ಕಲ್ಲಿನ ರಥ, ವಿರೂಪಾಕ್ಷೇಶ್ವ ದೇಗುಲಕ್ಕೆ ಒಳಗೆ ಹೋಗುವ ಹೆಬ್ಬಾಗಿಲಿನ ಮಾದರಿಯಲ್ಲಿ ಹೊಸಪೇಟೆ ರೈಲು ನಿಲ್ದಾಣ ಕಂಗೊಳಿಸುತ್ತಿದೆ. ಜೊತೆಗೆ ವಿವಿಧ ಸ್ಮಾರಕವನ್ನು ಹೋಲುವ ಕಟ್ಟಡಗಳು ನೋಡುಗರಿಗೆ ಹಂಪಿಯನ್ನು ಕಂಡಂತೆ ಭಾಸವಾಗುತ್ತಿದೆ.
  2. ದೇಶ, ವಿದೇಶಗಳಿಂದ ಹೊಸಪೇಟೆಗೆ ಬರುವ ಪ್ರವಾಸಿಗರು ರೈಲು ನಿಲ್ದಾಣದಲ್ಲಿ ಸ್ಮಾರಕಗಳ ಮಾದರಿಯಲ್ಲಿರುವ ಮುಖ್ಯ ಪ್ರವೇಶದ್ವಾರ ಸ್ವಾಗತಿಸುತ್ತದೆ. ಹಂಪಿಯಲ್ಲಿರುವ ಪ್ರಮುಖ ದೇವಾಲಯಗಳಲ್ಲಿ ಒಂದಾಗಿರುವ ವಿಜಯ ವಿಠ್ಠಲ ದೇಗುಲದಲ್ಲಿರುವ ಕಲ್ಲಿನ ರಥ ಹೋಲುವ ವಿನ್ಯಾಸದಲ್ಲಿ ಹೊಸಪೇಟೆ ರೈಲು ನಿಲ್ದಾಣದ ಮುಖ್ಯದ್ವಾರ ನಿರ್ಮಿಸಲಾಗಿದೆ. ಈ ದ್ವಾರದ ಮೂಲಕ ನಿಲ್ದಾಣವನ್ನು ಪ್ರವೇಶಿಸುವವರಿಗೆ ಹೊಸ ಅನುಭವ ನೀಡುತ್ತದೆ.
  3. ರೈಲು ನಿಲ್ದಾಣದ ಪ್ರವೇಶದ್ವಾರದ ಎರಡೂ ಬದಿಗಳಲ್ಲಿರುವ ಕಟ್ಟಡಗಳನ್ನು ಹಂಪಿ ವಿರೂಪಾಕ್ಷೇಶ್ವರ ದೇಗುಲವನ್ನು ಹೋಲುವಂತೆ ಅಭಿವೃದ್ಧಿಪಡಿಸಲಾಗಿದೆ.
  4. ರೈಲು ನಿಲ್ದಾಣದ ಎಡ ಮತ್ತು ಬಲ ಬದಿಯಲ್ಲಿರುವ ಮುಂಗಡ ಟಿಕೆಟ್ ಕಾಯ್ದಿರಿಸುವ ಹಾಗೂ ಕಚೇರಿಗಳಿಗೆ ತೆರಳುವ ಕಟ್ಟಡಗಳನ್ನು ವಿರೂಪಾಕ್ಷೇಶ್ವರ ದೇಗುಲ ಮಾದರಿ ಅಭಿವೃದ್ಧಿಪಡಿಸಲಾಗಿದೆ.
  5. ವಿರೂಪಾಕ್ಷ ದೇಗುಲದಂತಿರುವ ಎರಡೂ ಬದಿಯ ಕಟ್ಟಡಗಳನ್ನು ಹಂಪಿಯ ವಾಸ್ತು ಶೈಲಿಯಲ್ಲಿ ನಿರ್ಮಿಸಲಾಗಿದೆ.
  6. ರೈಲು ನಿಲ್ದಾಣದಲ್ಲಿ 14 ವಿಶ್ರಾಂತಿ ಕೊಠಡಿ ಮತ್ತು ಪ್ರಯಾಣಿಕರಿಗಾಗಿ ಒಂದು ನಿರೀಕ್ಷಣಾಲಯ ಹಾಗೂ ಒಂದು ಗಣ್ಯರ ನಿರೀಕ್ಷಣಾ ಕೊಠಡಿ, ಪ್ರವಾಸಿ ಮಾಹಿತಿ ಕೇಂದ್ರ ಹಾಗೂ ಕ್ಯಾಂಟೀನನ್ನು ರೈಲು ನಿಲ್ದಾಣದಲ್ಲಿ ನಿರ್ಮಿಸಲಾಗಿದೆ.

    ಇದನ್ನೂ ಓದಿ : Instagram Influencer: ಹಂಪಿ ಸ್ಮಾರಕಗಳ ಮೇಲೆ ನೃತ್ಯ ಪ್ರಕರಣ: ರೀಲ್ಸ್‌ ಸ್ಟಾರ್‌ ದೀಪಕ್‌ ಗೌಡ ಅರೆಸ್ಟ್‌
Exit mobile version