ಚಾಮರಾಜನಗರ: ತೀವ್ರ ಜ್ವರದಿಂದ ಬಳಲುತ್ತಿದ್ದ ೯ ತಿಂಗಳ ಮಗುವಿಗೆ ಜಿಲ್ಲಾಸ್ಪತ್ರೆ ವೈದ್ಯರು ಸಮರ್ಪಕ ಚಿಕಿತ್ಸೆ ನೀಡಿಲ್ಲ. ನರ್ಸ್‌ಗಳ ಬಳಿ ಚಿಕಿತ್ಸೆ ಕೊಡಿಸಿದ್ದಾರೆ. ಈ ನಿರ್ಲಕ್ಷ್ಯದ (Hospital Negligence) ಕಾರಣದಿಂದ ತಮ್ಮ ೯ ತಿಂಗಳ ಮಗು ಮೃತಪಟ್ಟಿದೆ ಎಂದು ಆರೋಪಿಸಿ ಮಗು ಶವದೊಂದಿಗೆ ಪೋಷಕರು ಹಾಗೂ ಸಾರ್ವಜನಿಕರಿಂದ ಚಾಮರಾಜನಗರ ಜಿಲ್ಲಾಸ್ಪತ್ರೆ ಮುಂಭಾಗ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಚಾಮರಾಜನಗರ ತಾಲೂಕು ಮುಂಟಿಪಾಳ್ಯದ ಶಿವರುದ್ರಮ್ಮ ಹಾಗೂ ಅಶ್ವಥ್ ದಂಪತಿಯ ಹೆಣ್ಣು ಮಗು ಮೃತಪಟ್ಟಿದೆ. ಈ ಮಗು ತೀವ್ರ ಜ್ವರದಿಂದ ಬಳಲುತ್ತಿತ್ತು ಎನ್ನಲಾಗಿದೆ. ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದರೆ ವೈದ್ಯರು ಚಿಕಿತ್ಸೆ ನೀಡದೆ ನರ್ಸ್‌ಗಳ ಬಳಿ ಕಳುಹಿಸಿದ್ದಾರೆ. ಆ ನರ್ಸ್‌ಗಳು ಅಸಮರ್ಪಕ ರೀತಿಯಲ್ಲಿ ಚಿಕಿತ್ಸೆ ನೀಡಿದ್ದಾರೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಗುವಿನ ಆರೋಗ್ಯ ಸ್ಥಿತಿ ಗಂಭೀರವಾದ ಮೇಲೆ ಮೈಸೂರಿಗೆ ಕರೆದೊಯ್ಯುವಂತೆ ಸೂಚನೆ ನೀಡಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಗಂಭೀರ ಸ್ಥಿತಿಯಲ್ಲಿದ್ದ ಮಗು ಆಸ್ಪತ್ರೆಯಲ್ಲೇ ಮೃತಪಟ್ಟಿದೆ. ಚಿಕಿತ್ಸೆ ಕೊಡಲು ಆಗದಿದ್ದರೆ ಮೊದಲೇ ಹೇಳಬೇಕಿತ್ತಲ್ಲವೇ? ನಮ್ಮ ಮಗುವಿನ ಜೀವವನ್ನು ಏಕೆ ತೆಗೆಯಬೇಕಿತ್ತು ಎಂದು ಆಕ್ರೋಶಗೊಂಡ ಪೋಷಕರು ಗೋಳಾಡಿದ್ದಾರೆ. ಈ ವೇಳೆ ಈ ವಿಷಯ ತಿಳಿದ ಸಾರ್ವಜನಿಕರು ಸಹ ಸಿಟ್ಟಿಗೆದ್ದಿದ್ದು, ಜಿಲ್ಲಾಸ್ಪತ್ರೆ ಮುಂಭಾಗದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದ್ದಾರೆ. ಮಗುವಿನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ | ಮಂಗಳೂರು ಸ್ಫೋಟ | ಎನ್‌ಐಎ ಎಫ್‌ಐಆರ್ ದಾಖಲಿಸಿ ನಾಲ್ಕೇ ದಿನಕ್ಕೆ ಮಂಗಳೂರಲ್ಲಿ ಸ್ಫೋಟಿಸಿದ್ದ ಶಾರಿಕ್!