Site icon Vistara News

Hospital Waste: ಕಂಡಕಂಡಲ್ಲಿ ವೈದ್ಯಕೀಯ ತ್ಯಾಜ್ಯ ಬಿಸಾಡಿದ ವಿನಾಯಕ ಆಸ್ಪತ್ರೆ; ಪುರಸಭೆಯಿಂದ ನೋಟಿಸ್‌ ಜಾರಿ

ವಿನಾಯಕ ಆಸ್ಪತ್ರೆ

#image_title

ಚಿತ್ರದುರ್ಗ: ಪರಿಸರದ ಸಂರಕ್ಷಣೆಗಾಗಿ ಎಲ್ಲೆಡೆ ಕಾರ್ಯಕ್ರಮ ನಡೆಯುತ್ತಿದೆ. ಅದರಲ್ಲಿಯೂ ಹೊಸದುರ್ಗ ಪುರಸಭೆಗೆ ಸ್ವಚ್ಛತೆಗಾಗಿಯೇ 3 ಬಾರಿ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಆದರೆ, ಜನಾರೋಗ್ಯದ ಕಾಳಜಿ ಇರುವ ವೈದ್ಯರೇ ತಮ್ಮ ಆಸ್ಪತ್ರೆ ತ್ಯಾಜ್ಯಗಳನ್ನು ಪಟ್ಟಣದ ಹೊರ ವಲಯದಲ್ಲಿರುವ ಪುರಸಭೆ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಬೇಕಾಬಿಟ್ಟಿಯಾಗಿ ಸುರಿದಿರುವ ಘಟನೆ ಮಂಗಳವಾರ ನಡೆದಿದೆ.

ಪಟ್ಟಣದ ವಿನಾಯಕ ಆಸ್ಪತ್ರೆಯವರು ಸಿರೆಂಜ್‌ಗಳು, ನೀಡಲ್ಸ್‌ಗಳು, ಡ್ರಿಪ್‌ ಮತ್ತು ಔಷಧಿ ಬಾಟಲ್‌ಗಳು, 4 ರಿಂದ 5 ಗರ್ಭಕೋಶ ಬಳ್ಳಿಗಳು, ಗ್ಲುಕೋಸ್ ಹಾಗೂ ಬ್ಲಡ್ ಕಾಟನ್, ಉಪಯೋಗಿಸಿದ ಗ್ಲೌಸ್, ರಕ್ತಸಿಕ್ತ ಹತ್ತಿಗಳು, ಡೈಪರ್‌ಗಳು, ಬ್ಯಾಂಡೇಜ್‌, ಖಾಲಿ ಔಷಧಿ ಬಾಕ್ಸ್‌ಗಳು ಸೇರಿದಂತೆ ಇನ್ನಿತರೆ ವೈದ್ಯಕೀಯ ತ್ಯಾಜ್ಯಗಳನ್ನು ಸುರಿದು ಹೋದ ಹಿನ್ನೆಲೆಯಲ್ಲಿ ಪುರಸಭೆ ಪೌರಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಗೆ ಮಾದರಿಯಾಗಿರವ ಪುರಸಭೆಯ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ವೈಜ್ಞಾನಿಕವಾಗಿ ಕಸವಿಂಗಡಣೆ ಮಾಡುವ ಕೆಲಸವನ್ನು ನಾವು ನಿರಂತರವಾಗಿ ಮಾಡುತ್ತಿದ್ದೇವೆ. ಆದರೆ ಇಲ್ಲಿ ಬಿದ್ದಿರುವ ಸಿರೆಂಜ್‌ಗಳಿಂದ ನಮ್ಮ ಕಾಲಿಗೆ ಅಥವಾ ಕೈಗೆ ಚುಚ್ಚಿ ಆರೋಗ್ಯ ಹದಗೆಟ್ಟರೆ ಯಾರು ಹೊಣೆ ಎಂದು ಪೌರಕಾರ್ಮಿಕ ಸಿಬ್ಬಂದಿ ಆಸ್ಪತ್ರೆ ವಿರುದ್ಧ ಕಿಡಿಕಾರಿದ್ದಾರೆ.

ಪುರಸಭೆಯಿಂದ ನೋಟಿಸ್‌ ಜಾರಿ

ಈ ಬಗ್ಗೆ ಮಾತನಾಡಿದ ಪುರಸಭೆ ಪರಿಸರ ಅಭಿಯಂತರ ತಿಮ್ಮರಾಜು, ಪಟ್ಟಣದ ಕೆಲ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳು ನಿಯಮ ಪಾಲಿಸದೇ ಬೇಕಾಬಿಟ್ಟಿಯಾಗಿ ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯುತ್ತಿದ್ದಾರೆ. ಅಲ್ಲಲ್ಲಿ ಬ್ಯಾಂಡೇಜ್‌ಗಳು, ಅವಧಿ ಮುಗಿದ ಮುಲಾಮು, ಸಿರಿಂಜ್‌ಗಳನ್ನು ಎಸೆಯುತ್ತಿದ್ದಾರೆ. ಮಂಗಳವಾರ ವಿನಾಯಕ ಆಸ್ಪತ್ರೆಯವರು ಇಲಾಖೆಯ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ತಮ್ಮ ಆಸ್ಪತ್ರೆಯ ತ್ಯಾಜ್ಯಗಳನ್ನು ಬಿಸಾಡಿ ಹೋಗಿದ್ದಾರೆ.

ನಮ್ಮ ಪೌರಕಾರ್ಮಿಕರು ನಿರಂತರವಾಗಿ ಇಲ್ಲಿ ಕೆಲಸ ಮಾಡುವುದರಿಂದ ಸೋಂಕು ತಗಲುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರದ ಆದೇಶ ಹಾಗೂ ಸುಪ್ರಿಂ ಕೋರ್ಟ್ ನಿರ್ದೇಶನದ ಪ್ರಕಾರ ಪ್ರತಿಯೊಂದು ಆಸ್ಪತ್ರೆಗಳು ತಾವು ಬಳಕೆ ಮಾಡಿ ಬಿಸಾಡುವ ತ್ಯಾಜ್ಯ ವಸ್ತುವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು ಎಂಬ ಕಾನೂನು ಮಾಡಿದೆ. ಆದರೆ, ಇಲ್ಲಿ ಯಾವುದೇ ನಿಯಮಗಳನ್ನು ಆಸ್ಪತ್ರೆಗಳು ಪಾಲಿಸುತ್ತಿಲ್ಲ. ಹೀಗಾಗಿ ಆಸ್ಪತ್ರೆಯ ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ. ಹಾಗಾಗಿ ಸಂಬಂಧಪಟ್ಟ ಆಸ್ಪತ್ರೆಗೆ ನೋಟಿಸ್ ನೀಡುವುದಾಗಿ ಹೇಳಿದರು.

ಇದನ್ನೂ ಓದಿ: Drowned in lake: ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ನೀರುಪಾಲು; ಇನ್ನಿಬ್ಬರು ಪಾರು

ತ್ಯಾಜ್ಯ ವಿಲೇವಾರಿ ಮಾಡದೇ ಎಲ್ಲೆಂದರಲ್ಲಿ ಆಸ್ಪತ್ರೆ ತ್ಯಾಜ್ಯ ಎಸೆಯುವ ಆಸ್ಪತ್ರೆಗಳ ವಿರುದ್ಧ ಕೆಪಿಎಂಇಎ ಕಾನೂನು ಅಡಿಯಲ್ಲಿ ದಾಳಿ ನಡೆಸಿ, ಆ ಆಸ್ಪತ್ರೆಯ ನೋಂದಣಿಯನ್ನೇ ರದ್ದುಪಡಿಸುವ ಅವಕಾಶ ಜಿಲ್ಲಾ ಆರೋಗ್ಯಾಧಿಕಾರಿ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗಿದೆ. ಆದರೆ ಅಧಿಕಾರಿಗಳು ತ್ಯಾಜ್ಯ ವಿಲೇವಾರಿ ಗಮನಿಸುವ ಗೋಜಿಗೆ ಹೋಗಿಲ್ಲ. ಆಸ್ಪತ್ರೆಗಳು ನಿಯಮ ಉಲ್ಲಂಘಿಸಿ, ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ಕಾರಣವಾಗಿದೆ.

Exit mobile version