ರಾಯಚೂರು: ರಾಜ್ಯದಲ್ಲಿ ಎರಡು ದಿನಗಳ ಕಾಲ ಸುರಿದ ಅಕಾಲಿಕ ಮಳೆ (Rain News) ಕೃಷಿ ಮತ್ತು ಇತರ ವ್ಯವಹಾರಗಳಿಗೆ ಭಾರಿ ಹಾನಿಯನ್ನುಂಟು ಮಾಡಿದೆ. ಇದೀಗ ಅದು ಮೊದಲ ಬಲಿಯನ್ನೂ ಪಡೆದುಕೊಂಡಿದೆ.
ರಾಯಚೂರು ತಾಲ್ಲೂಕಿನ ಕುರುವಕುಲ ಗ್ರಾಮದಲ್ಲಿ ಅಕಾಲಿಕ ಮಳೆಗೆ ಮನೆಯೊಂದು ಕುಸಿದು ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಗೆ ಮನೆ ಕುಸಿದುಬಿದ್ದಿದ್ದು, ನಿರ್ಮಲಾ(13) ಎಂಬ ಬಾಲಕಿ ಪರಾಣ ಕಳೆದುಕೊಂಡಿದ್ದಾಳೆ.
ನಿರ್ಮಲಾ ಮತ್ತು ಕುಟುಂಬ ವಾಸಿಸುತ್ತಿದ್ದ ಮನೆ ಹಳೆಯದು ಮತ್ತು ಶಿಥಿಲವಾಗಿತ್ತು. ಒಮ್ಮೆಲೇ ಇಷ್ಟೊಂದು ಮಳೆ ಬರುತ್ತದೆ ಎಂಬ ನಿರೀಕ್ಷೆ ಇರಲಿಲ್ಲ. ಇದೀಗ ಮನೆಯ ಗೋಡೆ ಕುಸಿದು ಬಾಲಕಿ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ.
ಕುಸಿದ ಮನೆಯ ಅವಶೇಷಗಳಡಿ ಸಿಲುಕಿದ ನಿರ್ಮಲಾಳ ಶವವನ್ನು ಹೊರತೆಗೆಯಲಾಗಿದೆ. ಆಕೆ ತಾಯಿ ಹಾಗೂ ತಂಗಿಗೂ ಗಂಭೀರ ಗಾಯಗಳಾಗಿವೆ. ಯಾಪಲದಿನ್ನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದೆ.
ಚರಂಡಿ ಸ್ವಚ್ಛಗೊಳಿಸುತ್ತಿದ್ದ ಇಬ್ಬರು ಕಾರ್ಮಿಕರು ಸಾವು
ದಾವಣಗೆರೆ: ಚರಂಡಿ ಸ್ವಚ್ಛಗೊಳಿಸುತ್ತಿದ್ದ ಇಬ್ಬರು ಕಾರ್ಮಿಕರು ಇದ್ದಕಿದ್ದಂತೆ ಹೊಟ್ಟೆನೋವು ಉಂಟಾಗಿ ಸಾವಿಗೀಡಾದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಸವನಕೋಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಯುಗಾದಿ ಹಬ್ಬದ ಪ್ರಯುಕ್ತ ಗ್ರಾಮದ ಬೀದಿ ಬದಿಯ ಚರಂಡಿ ಸ್ವಚ್ಛಗೊಳಿಸುತ್ತಿದ್ದ ಕಾರ್ಮಿಕರು ಇದ್ದಕ್ಕಿದ್ದಂತೆ ಹೊಟ್ಟೆ ನೋವು ತಲೆದೋರಿ ಅಸ್ವಸ್ಥರಾಗಿದ್ದರು. ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸತ್ಯಪ್ಪ(50), ಮೈಲಪ್ಪ(41) ಮೃತ ಕೂಲಿಕಾರ್ಮಿಕರು.
ಬಸವನಕೋಟೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ದೂರಲಾಗಿದೆ. ಕಾರ್ಮಿಕರ ಸಾವಿನ ತನಿಖೆ ನಡೆಸಲು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ ರಾಜ ಮಾರ್ಗ ಅಂಕಣ : ನಮ್ಮೊಳಗಿನ ಸಂತಸ ಹೆಚ್ಚಿಸಲು ಇಲ್ಲಿವೆ ಮೂವತ್ತು ಸಿಂಪಲ್ ಸಲಹೆಗಳು!