Site icon Vistara News

ಬಾಡಿಗೆದಾರರ ಟಾರ್ಚರ್‌ಗೆ ಮನೆ ಮಾಲೀಕರು ಬಲಿ; ಮಗಳು ಆತ್ಮಹತ್ಯೆ, ತಾಯಿಗೆ ಹೃದಯಾಘಾತ!

Harassment of tenants

ಹಾಸನ: ಸಾಮಾನ್ಯವಾಗಿ ಬಾಡಿಗೆದಾರರಿಗೆ ಮನೆ ಮಾಲೀಕರಿಂದ ಕಿರುಕುಳದ (Harassment of tenants) ಆರೋಪಗಳು ಕೇಳಿ ಬರುತ್ತವೆ. ಆದರೆ ಈ ಪ್ರಕರಣದಲ್ಲಿ ಉಲ್ಟಾ, ಬಾಡಿಗೆದಾರರ ಕಿರುಕುಳಕ್ಕೆ ಮನೆ ಮಾಲೀಕರೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನದಲ್ಲಿ ನಡೆದಿದೆ. ಮಗಳ ಆತ್ಮಹತ್ಯೆ ಸುದ್ದಿ ಕೇಳಿ ಆಕೆಯ ತಾಯಿಯೂ ಆಘಾತದಿಂದ (Heart attack) ಮೃತಪಟ್ಟಿದ್ದಾರೆ.

ಹಾಸನ ನಗರದ ಹೊರವಲದಲ್ಲಿರುವ ದಾಸರಕೊಪ್ಪಲು ಬಡಾವಣೆಯಲ್ಲಿ ಈ ದುರ್ಘಟನೆ ನಡೆದಿದೆ. ಬಾಡಿಗೆದಾರರ ಕಿರುಕುಳಕ್ಕೆ ಬೇಸತ್ತು ಕಳೆದ ಎರಡು ದಿನಗಳ ಹಿಂದೆ ಮನೆಯ ಒಡತಿ ಲಲಿತಮ್ಮ ಎಂಬುವವರು ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಬುಧವಾರ ಮೃತಪಟ್ಟರು. ಈ ಸಾವಿನ ಸುದ್ದಿಯ ಆಘಾತದಿಂದ ಲಲಿತಮ್ಮ ತಾಯಿ ಲಕ್ಷಮ್ಮ(75) ಕೂಡ ಜೀವಬಿಟ್ಟಿದ್ದಾರೆ.

ಈ ಬಗ್ಗೆ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ. ದಾಸರಕೊಪ್ಪಲಿನಲ್ಲಿ ಲಲಿತಮ್ಮ ಹಾಗೂ ನಾಗರಾಜ್ ದಂಪತಿ ಮನೆ ಹೊಂದಿದ್ದರು. ಮೇಲ್ಬಾಗದ ಮನೆಗಳನ್ನು ಬಾಡಿಗೆ ಹಾಗೂ ಭೋಗ್ಯಕ್ಕೆ ನೀಡಿದ್ದರು. ಎರಡು ವರ್ಷಗಳ ಹಿಂದೆ ಉದ್ದೂರು ಕೊಪ್ಪಲು ಗ್ರಾಮದ ಸುಧಾರಾಣಿ, ನಟರಾಜ್ ದಂಪತಿಗೆ ಐದು ಲಕ್ಷಕ್ಕೆ ಮೂರು ವರ್ಷದ ಅವಧಿಗೆ ಭೋಗ್ಯಕ್ಕೆ ನೀಡಿದ್ದರು. ಲಲಿತಾ ಅವರೊಂದಿಗೆ ವಿನಾ ಕಾರಣ ಸುಧಾರಾಣಿ ಹಾಗೂ ನಟರಾಜ್ ಕ್ಯಾತೆ ತೆಗೆದು ಜಗಳವಾಡುತ್ತಿದ್ದರು ಎಂದು ಲಲಿತಮ್ಮ ಪತಿ ನಾಗರಾಜು ದೂರು ದಾಖಲಿಸಿದ್ದಾರೆ.

ಕೇವಲ ಜಗಳ ಮಾತ್ರವಲ್ಲದೆ ಒಮ್ಮೆ ಲಲಿತಮ್ಮ ಅವರ ಮೇಲೆ ಹಲ್ಲೆಯನ್ನೂ ಮಾಡಿದ್ದರು ಎನ್ನಲಾಗಿದೆ. ಜೂ‌ನ್ 16ರಂದು ಸರ ಕದ್ದ ಕಳ್ಳಿ ಎಂದು ಸುಧಾರಾಣಿ ಹಾಗೂ ನಟರಾಜ್ ಜಗಳ ತೆಗೆದು ಬಾಯಿಗೆ ಬಂದಂತೆ ಬೈದಿದ್ದರು. ಇದರಿಂದ ಮನನೊಂದ ಲಲಿತಮ್ಮ ಮನೆ ಬಿಟ್ಟು ಹೋಗಿದ್ದರು. ಜೂನ್ 17 ರಂದು ತಮ್ಮ ಜಮೀನಿನಲ್ಲಿ ಕಳೆ ನಾಶಕ ಸೇವಿಸಿ ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದರು.

ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಜೂನ್ 20 ರಂದು ಲಲಿತಮ್ಮ ಮೃತಪಟ್ಟಿದ್ದರು. ತಾಯಿ ಲಕ್ಷಮ್ಮ ಮಗಳು ವಿಷ ಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಆಸ್ಪತ್ರೆಗೆ ಬಂದು ನೋಡಿಕೊಂಡು ಹೋಗಿದ್ದರು. ಹುಷಾರಾಗುತ್ತಾಳೆ ಎಂಬ ನಿರೀಕ್ಷೆಯಲ್ಲಿದ್ದ ಲಕ್ಷಮ್ಮಗೆ ಮಗಳ ಸಾವಿನ ಸುದ್ದಿ ಅಘಾತವನ್ನುಂಟು ಮಾಡಿದೆ. ಮಗಳ ಸಾವಿನ ಸುದ್ದಿ ಕೇಳುತ್ತಿದ್ದಂತೆ ಹೃದಯಾಘಾತದಿಂದ ತಾಯಿಯೂ ಕೂಡಾ ಮೃತಪಟ್ಟಿದ್ದಾರೆ.

ಇದನ್ನೂ ಓದಿ: Nrupathunga University: ನೃಪತುಂಗ ವಿವಿಗೆ ವಿಲೀನವಾಗುತ್ತಾ ಆರ್‌ಸಿ ಕಾಲೇಜು?

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಲಲಿತಮ್ಮ ಮಾತನಾಡಿ ಬಾಡಿಗೆದಾರರು ಗಲಾಟೆ ಮಾಡಿದ್ದರು ಎಂದು ಆರೋಪಿಸಿದ್ದಾರೆ. ಆ ವಿಡಿಯೋ ಆಧಾರದ ಮೇಲೆಯೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ತಾಯಿ- ಮಗಳ ಇಬ್ಬರ ಸಾವಿಗೂ ಬಾಡಿಗೆದಾರರಾದ ಸುಧಾರಾಣಿ – ನಟರಾಜ್ ಅವರೇ ಕಾರಣ ಎಂದು ಲಲಿತಮ್ಮ ಪತಿ ನಾಗರಾಜು ಪೊಲೀಸ್ ಠಾಣೆಗೆ‌ ದೂರು ನೀಡಿದ್ದಾರೆ. ಸಾವಿನ ಸುದ್ದಿ ಕೇಳುತ್ತಿದ್ದಂತೆ ಬಾಡಿಗೆದಾರ ದಂಪತಿ ತಲೆಮರೆಸಿಕೊಂಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version