ಗಂಗಾವತಿ: ಕೊಪ್ಪಳ ಜಿಲ್ಲೆಯ ಗಂಗಾವತಿ ಮೂಲಕ ತಮ್ಮ ರಾಜಕೀಯದ ಎರಡನೇ ಇನ್ನಿಂಗ್ಸ್ ಶುರು ಮಾಡಲು ಮುಂದಾಗಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ (Janardana Reddy) ಅವರು ಗಂಗಾವತಿಯಲ್ಲಿ ಖರೀದಿರುವ ಮನೆಗಳ ಗೃಹ ಪ್ರವೇಶ ಬುಧವಾರ ಅವರ ಅನುಪಸ್ಥಿತಿಯಲ್ಲಿ ನೆರವೇರಿತು. ರೆಡ್ಡಿ ಅವರು ಪ್ರಮುಖ ಕಾರ್ಯ ನಿಮಿತ್ತ ದೆಹಲಿಗೆ ಹೋಗಿರುವುದರಿಂದ ಅವರ ಪತ್ನಿ ಅರುಣಾ ಲಕ್ಷ್ಮಿ ಅವರು ಪೂಜೆ ನೆರವೇರಿಸಿದರು.
ಡಿ. ೧೮ಕ್ಕೆ ರೆಡ್ಡಿ ಬರ್ತಾರೆ, ಎಲ್ಲವನ್ನೂ ಹೇಳ್ತಾರೆ
ಎಲ್ಲಾ ಪೂಜಾ ಕಾರ್ಯಗಳನ್ನು ಅತ್ಯಂತ ಸುಲಲಿತವಾಗಿ ನೆರವೇರಿಸಿದ ಅರುಣಾ ಲಕ್ಷ್ಮಿ ಅವರು ಜನಾರ್ದನ ರೆಡ್ಡಿ ರಾಜಕೀಯದ ನಡೆ ಹಾಗೂ ಸ್ಪರ್ಧೆ ಕುರಿತಂತೆ ಮಾತ್ರ ಯಾವುದೇ ಮಾತು ಆಡಲಿಲ್ಲ. ಇದೇ ಡಿಸೆಂಬರ್ 18ಕ್ಕೆ ಗಂಗಾವತಿಗೆ ಜನಾರ್ದನ ರೆಡ್ಡಿ ಅವರು ಆಗಮಿಸಿ ಎಲ್ಲ ವನ್ನೂ ಹೇಳುತ್ತಾರೆ ಎಂದು ಹೇಳುವ ಮೂಲಕ ಕುತೂಹಲವನ್ನು ಹೆಚ್ಚಿಸಿದ್ದಾರೆ.
ʻʻಜನಾರ್ದನ ರೆಡ್ಡಿ ಅವರಿಗೆ ಜನರೇ ತಂದೆ ತಾಯಿ. ಅವರಿಗೆ 14 ವರ್ಷ ವನವಾಸವಿತ್ತು. ಅನೇಕ ಕಷ್ಟಗಳನ್ನು ಎದುರಿಸಿದ್ದಾರೆ. ಈಗ ಬಳ್ಳಾರಿಯಿಂದ ಹತ್ತಿರ ಎನ್ನುವ ಕಾರಣಕ್ಕೆ ಗಂಗಾವತಿಯಲ್ಲಿ ಮನೆ ಮಾಡಿದ್ದಾರೆ. ರಾಜಕೀಯ ಕುರಿತು ಮುಂದಿನ ವಾರ ವಿವರಿಸಲಿದ್ದಾರೆ. 14 ವರ್ಷದ ನಂತರ ಈಗ ಜನಸೇವೆ ಮಾಡಬೇಕು ಎಂದಿದ್ದಾರೆ. ಗಂಗಾವತಿ, ಸಿಂಧನೂರಿನಿಂದ ಸ್ಪರ್ಧೆಯಾ ಎಂಬುದರ ಬಗ್ಗೆ ಅವರೇ ವಿವರಿಸಲಿದ್ದಾರೆ. ರಾಜಕಾರಣದ ಬಗ್ಗೆ ಅವರೇ ಮಾತನಾಡಲಿದ್ದಾರೆʼʼ ಎಂದು ಹೇಳಿದರು ಅರುಣಾ ಲಕ್ಷ್ಮೀ.
ಎಲ್ಲಿದೆ ಮನೆ?
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕನಕಗಿರಿ ರಸ್ತೆಯಲ್ಲಿ ಜನಾರ್ದನ ರೆಡ್ಡಿ ಮನೆ ಖರೀದಿ ಮಾಡಿದ್ದಾರೆ. ನೂತನ ಮನೆಯ ಪ್ರವೇಶ ಸಮಾರಂಭಕ್ಕೆ ಆಪ್ತರಿಗಷ್ಟೇ ಆಹ್ವಾನ ಕೊಟ್ಟಿದ್ದಾರೆ. ಮನೆಯನ್ನು ಭರ್ಜರಿಯಾಗಿ ಅಲಂಕಾರ ಮಾಡಲಾಗಿತ್ತು. ಡಿ.18ರಿಂದ ಅವರು ಗಂಗಾವತಿಯ ಈ ಮನೆಗೆ ಬಂದು ನೆಲೆಸಲಿದ್ದಾರೆ.
ಇದನ್ನೂ ಓದಿ | Janardhan Reddy | ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಮೂಲಕ ಜನಾರ್ದನ ರೆಡ್ಡಿ ರಾಜಕೀಯ ಮರು ಪ್ರವೇಶ?