ಬೆಂಗಳೂರು: ದುಬಾರಿ ಬೆಂಗಳೂರು ದುನಿಯಾದಲ್ಲಿ ಬಾಡಿಗೆ ಮನೆ ಪಡೆದು ಜೀವನ ಸಾಗಿಸುವುದೇ ಕಷ್ಟ. ಅಂಥದ್ದರಲ್ಲಿ ಸ್ವಂತ ಮನೆಯನ್ನು ತೆಗೆದುಕೊಳ್ಳುವುದು ಬಡ ಹಾಗೂ ಮಧ್ಯಮ ವರ್ಗದವರಿಗೆ ಕನಸಿನ ಮಾತೇ ಸರಿ. ಇಂಥವರಿಗಾಗಿಯೇ ಸರ್ಕಾರ ಈಗ ಸ್ವಂತ ಮನೆಯನ್ನು ಕಡಿಮೆ ವೆಚ್ಚದಲ್ಲಿ ನೀಡಲು ಮುಂದಾಗಿದ್ದು, 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಗೆ (Housing Scheme) ಚಾಲನೆ ನೀಡಿದೆ. ಈ ಯೋಜನೆಗೆ ಈಗ ನೋಂದಣಿ ಪ್ರಕ್ರಿಯೆಯೂ ಆರಂಭವಾಗಿದೆ.
ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಅರ್ಹತೆ ಉಳ್ಳವರು ಅಗತ್ಯ ದಾಖಲೆಗಳೊಂದಿಗೆ ತಮ್ಮ ಕನಸಿನ ಸೂರನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ಏನಿದು ಯೋಜನೆ? ಒಂದು ಮನೆಯಲ್ಲಿ ಏನೆಲ್ಲ ಇರುತ್ತದೆ? ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಬೆಂಗಳೂರು ನಗರದಲ್ಲಿ ಸರ್ಕಾರದ ವತಿಯಿಂದ ಮುಖ್ಯಮಂತ್ರಿಗಳ ಬಹುಮಹಡಿ ಬೆಂಗಳೂರು ವಸತಿ ಯೋಜನೆಯನ್ನು (1 lakh multi storeyed Bangalore housing project) ಆರಂಭಿಸಲಾಗಿದೆ. ಈಗಾಗಲೇ ವಸತಿ ಸಮುಚ್ಛಯಗಳು ನಿರ್ಮಾಣವಾಗಿವೆ. ಇದರಡಿ 2 ಬಿಎಚ್‌ಕೆ (2BHK ) ಮನೆಗಳನ್ನು ನಿರ್ಮಿಸಲಾಗಿದೆ. ಅಲ್ಲದೆ, ಇದಕ್ಕೆ ಕೇವಲ 14 ಲಕ್ಷ ರೂಪಾಯಿಯನ್ನು ನಿಗದಿ ಪಡಿಸಲಾಗಿದೆ. ಈ 2 ಬಿಎಚ್‌ಕೆ ಮನೆಯೊಂದರಲ್ಲಿ ಏನೇನಿದೆ ಎಂದು ನೋಡುವುದಾದರೆ ಎರಡು ಬೆಡ್ ರೂಮ್ ವಿತ್ ಅಟ್ಯಾಚ್ ಬಾತ್ ರೂಂ, ಒಂದು ಹಾಲ್ ಮತ್ತು ಒಂದು ಕಿಚನ್ ಇರುತ್ತದೆ.
ಮೊದಲ ಹಂತಕ್ಕೆ ಅರ್ಜಿ ಆಹ್ವಾನ
ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ 5 ತಾಲೂಕುಗಳಲ್ಲಿ ಬರುವ ಸರ್ಕಾರಿ ಜಮೀನುಗಳಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ ಅಡಿಯಲ್ಲಿ 2 ಬಿಎಚ್‌ಕೆಯ ಒಟ್ಟು 8096 ಫ್ಲಾಟ್/ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಈ ಮನೆಗಳನ್ನು ಶೇರ್ ವಾಲ್ (Shear Wall) ತಂತ್ರಜ್ಞಾನದ ಮೂಲಕ ನಿರ್ಮಿಸಲಾಗಿದೆ. ಇವುಗಳ ಪೈಕಿ ಮೊದಲ ಹಂತದಲ್ಲಿ 3138 ಫ್ಲಾಟ್/ಮನೆಗಳ ಹಂಚಿಕೆಗಾಗಿ ಆನ್‌ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಪ್ರತಿ ಮನೆ ಫ್ಲಾಟ್‌ನ ಕಾರ್ಪೆಟ್ ಏರಿಯಾ -45 25.00. (485 Sq.ft.) ಇರಲಿದೆ.
ಅರ್ಜಿ ಸಲ್ಲಿಕೆಗೆ ಈ ದಾಖಲೆಗಳು ನಿಮ್ಮ ಬಳಿ ಇರಲಿ
- ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ ಸಂಖ್ಯೆ
- ಕುಟುಂಬದ ಪಡಿತರ ಚೀಟಿ ಸಂಖ್ಯೆ
- ಕುಟುಂಬದ ಆದಾಯ ಪ್ರಮಾಣ ಪತ್ರ ಸಂಖ್ಯೆ
- ಬೆಂಗಳೂರು ನಗರ ಜಿಲ್ಲೆ, ವ್ಯಾಪ್ತಿಯಲ್ಲಿ ಕನಿಷ್ಠ 1 ವರ್ಷಕ್ಕಿಂತ ಮೇಲ್ಪಟ್ಟು ವಾಸವಾಗಿರುವ ವಾಸ ದೃಢೀಕರಣ ಪತ್ರ ಸಂಖ್ಯೆ
- ಬ್ಯಾಂಕ್ ಖಾತೆ ಸಂಖ್ಯೆ
- ದಿವ್ಯಾಂಗ ಚೇತನ ಗುರುತಿನ ಚೀಟಿ (ಸರ್ಕಾರದ ಅಧಿಕೃತ ಸಂಸ್ಥೆಯಿಂದ ನೀಡಲಾಗುವ ಗುರುತಿನ ಚೀಟಿ)
ಅರ್ಜಿ ಸಲ್ಲಿಸೋದು ಹೇಗೆ?
ಅರ್ಜಿಯನ್ನು ಸಲ್ಲಿಸಲು ಕರ್ನಾಟಕ ಸರ್ಕಾರದ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ಮಂಡಳಿಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕು. ಅದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.
ಬಳಿಕ ನಿಮಗೆ ನಿಮ್ಮ ಕನಸಿನ ಮನೆ ಬೇಕೆ ಎಂಬ ಆಯ್ಕೆ ಕಾಣಿಸುತ್ತದೆ. ಅಲ್ಲಿ ಅರ್ಜಿ ಸಲ್ಲಿಸಿ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ನಂತರ ನಿಮ್ಮ ವಿಧಾನಸಭಾ ಕ್ಷೇತ್ರ ಹಾಗೂ ಪ್ರದೇಶವನ್ನು ಆಯ್ಕೆ ಮಾಡಬೇಕು. ಅಲ್ಲಿ ತಾಲೂಕು, ಹೋಬಳಿ ಹೀಗೆ ಕೇಳಲಾದ ಎಲ್ಲ ವಿವರಗಳನ್ನು ಆಯ್ಕೆ ಮಾಡಬೇಕು.
ಹೀಗೆ ಎಲ್ಲ ವಿವರಗಳನ್ನು ಆಯ್ಕೆ ಮಾಡಿದ ಮೇಲೆ ನಿಮ್ಮ ಅರ್ಜಿಯನ್ನು ಸಲ್ಲಿಸಬಹುದು. ನೀವು ಈ ವೇಳೆ ಒಂದು ಲಕ್ಷ ರೂಪಾಯಿಯನ್ನು ಪಾವತಿಸಿ ಫ್ಲಾಟ್ ಅನ್ನು ಬುಕ್ ಕೂಡ ಮಾಡಬಹುದಾಗಿದೆ.
3 ಹಂತದಲ್ಲಿ ಹಣ ಪಾವತಿ
ಫ್ಲಾಟ್ /ಮನೆಯನ್ನು ಪಡೆಯಲು ಅರ್ಹತೆ ಹೊಂದಿದವರು ಮೂರು ಹಂತದಲ್ಲಿ ಹಣವನ್ನು ಪಾವತಿ ಮಾಡಬೇಕು. ಅಲ್ಲದೆ, ಇದಕ್ಕೆ ಕಾಲಮಿತಿಯನ್ನು ಸಹ ನಿಗದಿಪಡಿಸಲಾಗಿದೆ.
2 ಬಿಎಚ್‌ಕೆ ಮನೆಯ ಒಟ್ಟು ವೆಚ್ಚ 14 ಲಕ್ಷ:
ಅರ್ಹತೆ ಪರಿಶೀಲಿಸಿ ನೀವು ಈ ಸೌಲಭ್ಯವನ್ನು ಪಡೆಯಲು ಅರ್ಹರಿದ್ದೀರಿ ಎಂದು ಖಾತ್ರಿಯಾಗುತ್ತಿದ್ದಂತೆ ಮೊದಲ ಕಂತಿನಲ್ಲಿ 3 ಲಕ್ಷ ರೂಪಾಯಿಯನ್ನು ಪಾವತಿ ಮಾಡಬೇಕು. ಇನ್ನು ನೀವು ಫ್ಲಾಟ್ ಆಯ್ಕೆ ಮಾಡಿದ 30 ದಿನಗಳೊಳಗೆ ಎರಡನೇ ಕಂತಿನ ಹಣವಾದ 5 ಲಕ್ಷ ರೂಪಾಯಿಯನ್ನು ಪಾವತಿಸಬೇಕು. ಮೂರನೇ ಕಂತಿನ ಭಾಗವಾದ 6 ಲಕ್ಷ ರೂಪಾಯಿಯನ್ನು ಹಣವನ್ನು ಫ್ಲಾಟ್ ನೋಂದಣಿ ಮಾಡಿಕೊಳ್ಳುವಾಗ ಪಾವತಿ ಮಾಡಬೇಕು ಎಂಬ ನಿಯಮ ಇದೆ.
ಇದನ್ನೂ ಓದಿ: Congress Karnataka: ಮನೆ ಮನೆಗೆ 4.30 ಕೋಟಿ ಗ್ಯಾರಂಟಿ ಕಾರ್ಡ್; ಲೋಕಸಭೆ ಎಲೆಕ್ಷನ್‌ಗೆ ಸುರ್ಜೇವಾಲ ಸರಣಿ ಟಾಸ್ಕ್!
ಹೆಚ್ಚಿನ ವಿವರಕ್ಕೆ “ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ, 8/9ನೇ ಮಹಡಿ, ಇ ಬ್ಲಾಕ್, ಕ.ಮಂ, ಕಟ್ಟಡ, ಕೆಂಪೇಗೌಡ ರಸ್ತೆ, ಬೆಂಗಳೂರು- 560009” ಇಲ್ಲಿಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು. ಇಲ್ಲವೇ ದೂರವಾಣಿ ಸಂಖ್ಯೆ 91-080-23118888ಗೆ ಸಂಪರ್ಕಿಸಬಹುದು.