ಬೆಂಗಳೂರು: ರಾಜ್ಯದ ಗಮನ ಸೆಳೆದಿದ್ದ ಬಾಲಕಿ ಭಾರ್ಗವಿ ನಾಪತ್ತೆ ಪ್ರಕರಣವು ಸುಖಾಂತ್ಯ ಕಂಡಿದೆ. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ನಿಂದ ನಾಪತ್ತೆಯಾಗಿ, ಮಂಗಳೂರಿಗೆ ತೆರಳಿ, ಅಲ್ಲಿಂದ ಗೋವಾಗೆ ಹೋಗಿದ್ದ ಬಾಲಕಿಯನ್ನು ಮಹಾಲಕ್ಷ್ಮೀ ಲೇಔಟ್ ಪೊಲೀಸರು ಗೋವಾ ಪೊಲೀಸರ ನೆರವಿನಿಂದ ಪತ್ತೆಹಚ್ಚಿದ್ದಾರೆ. ಆದರೆ, ಬಾಲಕಿಯ ಮೊಬೈಲ್ ಸ್ವಿಚ್ಡ್ ಆಫ್ ಇದ್ದರೂ ಆಕೆಯನ್ನು ಪತ್ತೆಹಚ್ಚಿದ್ದು ಗಮನ ಸೆಳೆದಿದೆ.
ಅಕ್ಟೋಬರ್ ೧೬ರಂದು ಬಾಲಕಿ ನಾಪತ್ತೆಯಾಗಿದ್ದಳು. ಒಂಬತ್ತನೇ ತರಗತಿ ಓದುತ್ತಿರುವ ಭಾರ್ಗವಿಯು ಮಿಡ್ಟರ್ಮ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದ ಕಾರಣ ಸೂಸೈಡ್ ನೋಟ್ ಬರೆದಿಟ್ಟು ಮನೆ ತೊರೆದಿದ್ದಳು. ಇದರಿಂದ ಆತಂಕಕ್ಕೀಡಾದ ಪೋಷಕರು ಪೊಲೀಸರ ಮೇಲೆ ಒತ್ತಡ ಹೇರಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಆಕೆಯ ಫೋಟೊಗಳನ್ನು ಶೇರ್ ಮಾಡಲಾಗಿತ್ತು. ಆಕೆ ಮಂಗಳೂರಿನಲ್ಲಿ ತಿರುಗಾಡಿದ ಸಿಸಿಟಿವಿ ದೃಶ್ಯಾವಳಿಗಳೂ ಲಭ್ಯವಾಗಿದ್ದವು. ಹೀಗಿದ್ದರೂ, ಆಕೆಯ ಮೊಬೈಲ್ ಸ್ವಿಚ್ಡ್ ಆಫ್ ಆದ ಕಾರಣ ಪೊಲೀಸರಿಗೆ ಪತ್ತೆಹಚ್ಚುವುದು ಸವಾಲಾಗಿ ಪರಿಣಮಿಸಿತ್ತು. ಆದರೂ, ತಂತ್ರಜ್ಞಾನದ ನೆರವಿನಿಂದ ಆಕೆಯನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನೆರವಿಗೆ ಬಂದ ಜಿಮೇಲ್ ಅಕೌಂಟ್
ಗೋವಾಗೆ ತೆರಳಿದ್ದ ಬಾಲಕಿಯ ಪತ್ತೆಗೆ ಜಿಮೇಲ್ ಅಕೌಂಟ್ ನೆರವಿಗೆ ಬಂದಿದೆ. ಭಾರ್ಗವಿ ಹಾಗೂ ಆಕೆಯ ತಾಯಿಯು ಒಂದೇ ಜಿಮೇಲ್ ಅಕೌಂಟ್ ಬಳಸುತ್ತಿದ್ದ ಕಾರಣ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಜಿಪಿಎಸ್ ಟ್ರ್ಯಾಕ್ ಮಾಡುವ ಮೂಲಕ ಪತ್ತೆಹಚ್ಚಿದ್ದಾರೆ. ಜಿಪಿಎಸ್ ಟ್ರ್ಯಾಕ್ ಮಾಡಿದಾಗ ಬಾಲಕಿಯು ಗೋವಾದಲ್ಲಿರುವುದು ತಿಳಿದಿದೆ. ಆಗ ಪೊಲೀಸರು ಈ ಬಗ್ಗೆ ಗೋವಾ ಪೊಲೀಸರನ್ನು ಸಂಪರ್ಕಿಸಿ, ಅವರಿಗೆ ಭಾರ್ಗವಿಯ ಫೋಟೊ ಕಳುಹಿಸಿ, ಕೊನೆಗೆ ಅವರ ನೆರವಿನಿಂದ ಪತ್ತೆ ಹಚ್ಚಿದ್ದಾರೆ.
ಗೋವಾಗೆ ತೆರಳಿದ ಪೋಷಕರು, ಪೊಲೀಸರು
ಬಾಲಕಿಯ ಕುರಿತು ಮಾಹಿತಿ ಲಭ್ಯವಾಗುತ್ತಲೇ ಮಹಾಲಕ್ಷ್ಮೀ ಪೊಲೀಸರು ಗೋವಾಗೆ ತೆರಳಿದ್ದಾರೆ. ಪೋಷಕರು ಕೂಡ ವಿಮಾನ ಹತ್ತಿ ಗೋವಾಗೆ ಹೊರಟಿದ್ದಾರೆ. ಗುರುವಾರ (ಅ.೨೦) ಮಧ್ಯಾಹ್ನ ಬಾಲಕಿಯನ್ನು ಬೆಂಗಳೂರಿಗೆ ಕರೆತರಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ | ಬೆಂಗಳೂರಿನಲ್ಲಿ ನಾಪತ್ತೆಯಾಗಿದ್ದ ಬಾಲಕಿ ಭಾರ್ಗವಿ ಗೋವಾದಲ್ಲಿ ಪತ್ತೆ, ನಿಟ್ಟುಸಿರು ಬಿಟ್ಟ ಪೋಷಕರು