ಬೆಂಗಳೂರು: ಉಗ್ರ ಚಟುವಟಿಕೆಗಳಿಗೆ ಉತ್ತೇಜನ, ಉಗ್ರರಿಗೆ ಹಣಕಾಸು ನೆರವು, ಉಗ್ರರ ಜತೆ ನಂಟು, ದೇಶದಲ್ಲಿ ಅಶಾಂತಿ ಸೃಷ್ಟಿ ಸೇರಿ ಹಲವು ಕಾರಣಗಳಿಂದ ದೇಶದಲ್ಲಿ ಪಾಪ್ಯುಲರ್ ಫ್ರಂಟ್ ಇಂಡಿಯಾ (PFI)ವನ್ನು ಕೇಂದ್ರ ಸರ್ಕಾರವು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿಯೇ ನಿಷೇಧಿಸಿದೆ. ಆದರೆ, ಕರ್ನಾಟಕದಲ್ಲಿ ಮಾತ್ರ ಪಿಎಫ್‌ಐ (PFI In Karnataka) ಸಕ್ರಿಯವಾಗಿದೆ. ಮೊದಲಿನಂತೆಯೇ ಪಿಎಫ್‌ಐ ವಿಚಾರಗಳ ಪಸರಿಸುವಿಕೆ, ತಂಡವಾಗಿ ಕಾರ್ಯನಿರ್ವಹಣೆ ಸೇರಿ ಹಲವು ವಿಧದಲ್ಲಿ ಅಸ್ತಿತ್ವದಲ್ಲಿದೆ.
ಕರ್ನಾಟಕದಲ್ಲಿ ಪಿಎಫ್‌ಐ ಚಟುವಟಿಕೆಗಳ ಕುರಿತು ಇಂಡಿಯಾ ಟುಡೇ ಮಾಧ್ಯಮ ಸಂಸ್ಥೆಯು ತನಿಖೆ ನಡೆಸಿದ್ದು, ವಿವಿಧ ಭಯಾನಕ ಮಾಹಿತಿ ಲಭ್ಯವಾಗಿದೆ. ಕೇಂದ್ರ ಸರ್ಕಾರ ನಿಷೇಧಿಸಿದರೂ ಹಿಂಬಾಗಿಲಿನ ಮೂಲಕ ಪಿಎಫ್‌ಐ ಹೇಗೆ ಕಾರ್ಯನಿರ್ವಹಿಸುತ್ತಿದೆ? ಅದರ ಮುಖಂಡರೆಲ್ಲ ಹೇಗೆ ವಿಚಾರಧಾರೆಗಳನ್ನು ಹರಡುತ್ತಿದ್ದಾರೆ? ಆನ್‌ಲೈನ್ ಹಾಗೂ ಆಫ್‌ಲೈನ್‌ನಲ್ಲಿ ಸಂಘಟನೆ ಹೇಗೆ ಸಕ್ರಿಯವಾಗಿದೆ? ಕರ್ನಾಟಕ ವಿಧಾನಸಭೆ ಚುನಾವಣೆ ಮೇಲೆ ಅದು ಬೀರುವ ಪರಿಣಾಮ ಏನು? ಚುನಾವಣೆಗೆ ಹೇಗೆ ತಯಾರಿ ನಡೆಸುತ್ತಿದೆ ಎಂಬುದು ಸೇರಿ ಹಲವು ವಿಚಾರಗಳು ಬಹಿರಂಗಗೊಂಡಿವೆ.
ಎಸ್‌ಡಿಪಿಐ ಮೂಲಕ ಕಾರ್ಯನಿರ್ವಹಣೆ
ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಿ, ಕಚೇರಿಗಳಿಗೆ ಬೀಗ ಜಡಿದು, ಆಸ್ತಿ ಜಪ್ತಿ ಮಾಡಿಕೊಂಡರೂ ಸಂಘಟನೆಯ ಚಟುವಟಿಕೆ ಮಾತ್ರ ನಿಂತಿಲ್ಲ. ಪಿಎಫ್‌ಐನ ರಾಜಕೀಯ ವಿಭಾಗವಾದ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪಕ್ಷದ ಮೂಲಕ ಪಿಎಫ್‌ಐ ಕರ್ನಾಟಕದಲ್ಲಿ ಸಕ್ರಿಯವಾಗಿದೆ ಎಂದು ತನಿಖಾ ವರದಿ ತಿಳಿಸಿದೆ. ಎಸ್‌ಡಿಪಿಐ ಒಂದು ರಾಜಕೀಯ ಪಕ್ಷವಾಗಿದ್ದು, ಇದನ್ನು ನಿಷೇಧಿಸಿಲ್ಲ. ಇದರ ಮೂಲಕವೇ ಪಿಎಫ್‌ಐನಲ್ಲಿ ಕೈಗೊಳ್ಳುತ್ತಿದ್ದ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.
ಪಿಎಫ್‌ಐ ಚಿಕ್ಕಮಗಳೂರು ಜಿಲ್ಲಾಧ್ಯಕ್ಷನಾಗಿದ್ದ ಚಾಂದ್ ಪಾಷಾ ಈ ಕುರಿತು ತನಿಖಾ ವರದಿಗಾರನ ಜತೆ ಮಾತನಾಡಿದ್ದಾನೆ. “ನಾವು ಪಿಎಫ್‌ಐ ಸದಸ್ಯರು. ನಾವು ನಮ್ಮದೇ ಆದ ತಂಡವನ್ನು ಹಾಗೂ ಹಿತೈಷಿಗಳನ್ನು ಹೊಂದಿದ್ದೇವೆ. ನಾವು ಪ್ರತಿದಿನ ಸಂಪರ್ಕದಲ್ಲಿರುತ್ತೇವೆ. ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಬೆಂಬಲ ನೀಡಬೇಕು ಎಂಬುದು ಸೇರಿ ಹಲವು ವಿಷಯಗಳ ಕುರಿತು ಚರ್ಚಿಸುತ್ತೇವೆ. ಬಿಜೆಪಿಯನ್ನು ಸೋಲಿಸುವುದೇ ನಮ್ಮ ಗುರಿಯಾಗಿದ್ದು, ಆ ದಿಸೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಿಎಫ್‌ಐನ ಶೇ.70ರಿಂದ ಶೇ.80ರಷ್ಟು ಕಾರ್ಯಕರ್ತರು ಈಗಲೂ ಸಕ್ರಿಯರಾಗಿದ್ದಾರೆ” ಎಂದು ಹೇಳಿದ್ದಾನೆ.
ವಾಟ್ಸ್‌ಆ್ಯಪ್ ಮೂಲಕ ನಿರಂತರ ಸಂಪರ್ಕ
“ಪಿಎಫ್‌ಐ ಮುಖಂಡರಾಗಿದ್ದವರ ಜತೆ ನಿರಂತರ ಸಂಪರ್ಕ ಸಾಧಿಸಲು ವಾಟ್ಸ್‌ಆ್ಯಪ್‌ಅನ್ನು ಬಳಸಲಾಗುತ್ತಿದೆ. ನಾವು ಪ್ರತಿಯೊಬ್ಬರನ್ನೂ ಭೇಟಿಯಾಗಲು ಆಗುವುದಿಲ್ಲ. ನಮ್ಮ ಪ್ರದೇಶದಲ್ಲಿ 30-50 ಮಸೀದಿಗಳಿವೆ. ಇಷ್ಟು ಮಸೀದಿಗಳ ಪೈಕಿ 10-15 ಮಸೀದಿಗಳ ಅಧ್ಯಕ್ಷರು 10-15 ವಾಟ್ಸ್‌ಆ್ಯಪ್ ಗ್ರೂಪ್‌ಗಳನ್ನು ರಚಿಸಿ, ಪ್ರತಿಯೊಬ್ಬರ ಜತೆ ಸಂಪರ್ಕ ಸಾಧಿಸುತ್ತಿದ್ದೇವೆ. ನಮಗೆ ಯಾವುದೇ ಸಮಸ್ಯೆ ಎದುರಾದರೆ, ಕೂಡಲೇ ವಾಟ್ಸ್‌ಆ್ಯಪ್‌ನಲ್ಲಿ ಚರ್ಚಿಸುತ್ತೇವೆ” ಎಂದು ಚಾಂದ್ ಪಾಷಾ ತಿಳಿಸಿದ್ದಾನೆ.
“ಪಿಎಫ್‌ಐನ ಕೆಲವು ಸದಸ್ಯರು ಎಸ್‌ಡಿಪಿಐನಲ್ಲಿದ್ದಾರೆ. ನಮ್ಮ ಪಿಎಫ್‌ಐ ತಂಡವನ್ನು ಎಸ್‌ಡಿಪಿಐ ಜತೆ ವಿಲೀನಗೊಳಿಸಿದ್ದೇವೆ. ಪಿಎಫ್‌ಐನಲ್ಲಿ ಮುಸ್ಲಿಮರು ಮಾತ್ರ ಇದ್ದರೆ, ಎಸ್‌ಡಿಪಿಐನಲ್ಲಿ ಹಿಂದುಗಳು ಹಾಗೂ ದಲಿತರು ಇದ್ದಾರೆ” ಎಂದು ಪಾಷಾ ತನಿಖಾ ವರದಿ ವೇಳೆ ಪ್ರಸ್ತಾಪಿಸಿದ್ದಾನೆ. ಇತ್ತೀಚೆಗಷ್ಟೇ ದಕ್ಷಿಣ ಕನ್ನಡದಲ್ಲಿ ಮೂಡುಬಿದಿರೆ ವಿಧಾನಸಭೆ ಕ್ಷೇತ್ರದ ಎಸ್‌ಡಿಪಿಐ ಉಸ್ತುವಾರಿ ಆಸಿಫ್ ಕೂಡ ವಿಲೀನವನ್ನು ಒಪ್ಪಿದ್ದಾನೆ.
ಪಿಎಫ್‌ಐ ಸದಸ್ಯರು, ಮಹಿಳೆಯರು ಸೇರಿ ಎಲ್ಲರನ್ನೂ ಎಸ್‌ಡಿಪಿಐ ಜತೆ ವಿಲೀನಗೊಳಿಸಲಾಗಿದೆ. ಅದರಲ್ಲೂ, ಕರ್ನಾಟಕ ವಿಧಾನಸಭೆ ಚುನಾವಣೆ ಇರುವುದರಿಂದ ಇವರೆಲ್ಲರೂ ಒಗ್ಗೂಡಿ, ಮುಸ್ಲಿಂ ಬಾಹುಳ್ಯದ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಪ್ರಚಾರ ಮಾಡುವುದು, ಆ ಕ್ಷೇತ್ರಗಳಲ್ಲಿ ಯಾವ ಅಬ್ಯರ್ಥಿಗಳಿಗೆ ಬೆಂಬಲ ನೀಡುವುದು ಸೇರಿ ಹಲವು ಚಟುವಟಿಕೆಗಳಲ್ಲಿ ಇವರು ನಿರತರಾಗಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Praveen Nettaru: ಸುಳ್ಯದ ಪಿಎಫ್‌ಐ ಕಚೇರಿ ಸೀಜ್ ಮಾಡಿದ NIA; ಇನ್ನಿದನ್ನು ಪರಭಾರೆ ಮಾಡುವಂತಿಲ್ಲ