ಬೆಂಗಳೂರು: ಕರ್ನಾಟಕದಲ್ಲಿ ಸ್ಪಷ್ಟ ಬಹುಮತ ಪಡೆದಿರುವ ಕಾಂಗ್ರೆಸ್‌ಗೆ ಮುಖ್ಯಮಂತ್ರಿ (Karnataka CM) ಆಯ್ಕೆಯ ವಿಚಾರವೇ ಕಗ್ಗಂಟಾಗಿದೆ. ಮುಖ್ಯಮಂತ್ರಿ ಆಯ್ಕೆಗೆ ಕಾಂಗ್ರೆಸ್ ನಾಯಕರು ಕಸರತ್ತು ನಡೆಸುತ್ತಿದ್ದು, ಶಾಸಕಾಂಗ ಪಕ್ಷದ ಸಭೆಯನ್ನು ಕೂಡ ನಡೆಸಿದ್ದಾರೆ. ಇನ್ನು, ಎಐಸಿಸಿ ಅಧ್ಯಕ್ಷರೇ ನೂತನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಬೇಕು ಎಂದು ಶಾಸಕಾಂಗ ಸಭೆಯಲ್ಲಿ ತೀರ್ಮಾನಿಸಿದ್ದರೂ, ಶಾಸಕರ ಅಂತಿಮ ತೀರ್ಮಾನವನ್ನು ಹೈಕಮಾಂಡ್‌ಗೆ ಕಳುಹಿಸುವ ಪ್ರಕ್ರಿಯೆ ಬಾಕಿ ಇದೆ.
ಹೈಕಮಾಂಡ್‌ಗೆ ಕರ್ನಾಟಕದ ಶಾಸಕರ ಅಭಿಪ್ರಾಯವನ್ನು ರಾಜ್ಯಕ್ಕೆ ಆಗಮಿಸಿರುವ ವೀಕ್ಷಕರು, ರಾಜ್ಯ ಕಾಂಗ್ರೆಸ್ ಉಸ್ತುವಾರ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ತಿಳಿಸಬೇಕಾಗಿದೆ. ಇದಕ್ಕಾಗಿ, ಭಾನುವಾರ ರಾತ್ರಿಯೇ ಕಾಂಗ್ರೆಸ್ ಶಾಸಕರಿಗೆ ಔತಣಕೂಟ ಏರ್ಪಡಿಸಿ ಮಾಹಿತಿ ಸಂಗ್ರಹಿಸಲಾಗಿದೆ. ಔತಣಕೂಟದಲ್ಲಿ ಸುರ್ಜೇವಾಲಾ ಹಾಗೂ ವೀಕ್ಷಕರು ಸೇರಿ ಶಾಸಕರ ವೈಯಕ್ತಿಕ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಸಿದ್ದರಾಮಯ್ಯ ಅವರೋ, ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗಬೇಕೋ ಎಂಬುದನ್ನು ಸುರ್ಜೇವಾಲಾ ಹಾಗೂ ವೀಕ್ಷಕರು ಅರಿಯಲಿದ್ದಾರೆ.
ಇದನ್ನೂ ಓದಿ: Karnataka CM: ರಾಜ್ಯದ ಸಿಎಂ ಆಯ್ಕೆ ನಿರ್ಧಾರ ದೆಹಲಿ ಅಂಗಳಕ್ಕೆ; ಖರ್ಗೆಗೆ ಹೊಣೆ, ಯಾರಿಗೆ ಶುಭ ಸೋಮವಾರ?
ಕಾಂಗ್ರೆಸ್‌ನ ಪ್ರತಿಯೊಬ್ಬ ಶಾಸಕರ ಮಾಹಿತಿ ಸಂಗ್ರಹಿಸಿದ ಬಳಿಕ ಸೋಮವಾರ ಬೆಳಗ್ಗೆ ಕಾಂಗ್ರೆಸ್ ವೀಕ್ಷಕರು ಸಭೆ ನಡೆಸಲಿದ್ದಾರೆ. ಸಭೆಯ ಬಳಿಕ ಶಾಸಕರ ಅಭಿಪ್ರಾಯವನ್ನು ಹೈಕಮಾಂಡ್‌ಗೆ ರವಾನಿಸಲಿದ್ದಾರೆ. ಇದಾದ ಬಳಿಕ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಯಾರು ಎಂಬುದನ್ನು ಘೋಷಿಸಲಿದ್ದಾರೆ ಎಂದು ತಿಳಿದುಬಂದಿದೆ.