Site icon Vistara News

HSRP Number Plate : ಹಳೆ ವಾಹನಗಳಿಗೂ ಇನ್ನು HSRP ನಂಬರ್‌ ಪ್ಲೇಟ್‌ ಕಡ್ಡಾಯ; ನ. 17ರ ನಂತ್ರ ಬೀಳುತ್ತೆ ದಂಡ!

Number plates

ಬೆಂಗಳೂರು: ಮುಂದಿನ ನವೆಂಬರ್‌ 17ರಿಂದ ರಾಜ್ಯದ ಪ್ರತಿಯೊಂದು ವಾಹನಕ್ಕೂ ಅತಿ ಸುರಕ್ಷಿತ ನೋಂದಣಿ ಫಲಕ (ಹೈ ಸೆಕ್ಯುರಿಟಿ ರಿಜಿಸ್ಪ್ರೇಷನ್‌ ನಂಬರ್‌ ಪ್ಲೇಟ್‌-High Security Registration Number Plate- HSRP) ಕಡ್ಡಾಯಗೊಳಿಸಲಾಗಿದ್ದು, ಅಳವಡಿಸದೆ ಹೋದರೆ ದಂಡ ಕಟ್ಟಬೇಕಾಗುತ್ತದೆ. ಹೀಗಾಗಿ ಈಗಿನಿಂದಲೇ ನಿಮ್ಮ ವಾಹನಕ್ಕೆ ಹೊಸ ನಂಬರ್‌ ಪ್ಲೇಟ್‌ (HSRP Number Plate) ಅಳವಡಿಸಿಕೊಳ್ಳುವುದು ಉತ್ತಮ.

ರಾಜ್ಯ ಸಾರಿಗೆ ಇಲಾಖೆ ಆಗಸ್ಟ್‌ 17ರಂದು ಹೊರಡಿಸಿದ ಆದೇಶದಲ್ಲಿ ಈ ವಿಚಾರವನ್ನು ಸ್ಪಷ್ಟವಾಗಿ ತಿಳಿಸಲಾಗಿದೆ. ಎಲ್ಲ ಹಳೆಯ ವಾಹನಗಳಿಗೆ ನವೆಂಬರ್‌ನಿಂದ ಅತಿ ಸುರಕ್ಷಿತ ನಂಬರ್‌ ಪ್ಲೇಟ್‌ ಕಡ್ಡಾಯ (New number plate Compulsory) ಮಾಡಲಾಗುತ್ತದೆ. ನಂತರವೂ ನಂಬರ್‌ ಪ್ಲೇಟ್‌ ಬದಲಿಸಿಕೊಳ್ಳದಿದ್ದರೆ 500ರಿಂದ 1000 ರೂ. ದಂಡ ವಿಧಿಸಲಾಗುವುದು ಎಂದು ತಿಳಿಸಲಾಗಿದೆ.

ಆದೇಶ ಹೊಸದಲ್ಲ, ಕಡ್ಡಾಯ ಮತ್ತು ದಂಡ ಹೊಸದು

ನಿಜವೆಂದರೆ, ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸುವಂತೆ ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯವು 2001ರಲ್ಲೇ ಆದೇಶ ಹೊರಡಿಸಿತ್ತು. ಆದರೆ, ಅದನ್ನು ಕಡ್ಡಾಯ ಮಾಡಿರಲಿಲ್ಲ. 2018ರಲ್ಲಿ ಹೊರಬಂದ ಹೊಸ ಆದೇಶದಲ್ಲಿ 2019ರ ಏ.1ರ ನಂತರ ನೋಂದಣಿಯಾಗುವ ಎಲ್ಲಾ ವಾಹನಗಳಿಗೂ ಕಡ್ಡಾಯವಾಗಿ ಎಚ್‌ಎಸ್‌ಆರ್‌ಪಿ ಅಳವಡಿಸಬೇಕೆಂದು ಸೂಚಿಸಲಾಗಿತ್ತು. ಇಡೀ ದೇಶಕ್ಕೆ ಈ ಕಾನೂನು ಅನ್ವಯವಾಗುತ್ತಿದೆ.

ಹೀಗಿರುತ್ತದೆ ಹೊಸ ನಂಬರ್‌ ಪ್ಲೇಟ್‌

ಇದರ ಪ್ರಕಾರ, 2019ರ ಏ.1ರಿಂದ ಹೊಸ ವಾಹನಗಳಿಗೆ ಶೋ ರೂಂಗಳಲ್ಲೇ ಎಚ್‌ಎಸ್‌ಆರ್‌ಪಿ ಅಳವಡಿಸಲಾಗುತ್ತಿದೆ. ಹಳೆ ವಾಹನಗಳಿಗೆ HSRP ಕಡ್ಡಾಯವಲ್ಲದೆ ಇದ್ದರೂ ಸಾಕಷ್ಟು ಮಂದಿ ತಮ್ಮ ವಾಹನಗಳ ನಂಬರ್‌ ಪ್ಲೇಟ್‌ ಬದಲಿಸಿದ್ದಾರೆ. ಆದರೆ, ಬಹುಪಾಲು ಮಾಡಿಸಿಕೊಂಡಿಲ್ಲ.

ರಾಜ್ಯಲ್ಲಿರುವ ಹಳೆ ವಾಹನಗಳ (2019ರ ಏಪ್ರಿಲ್‌ 1ಕ್ಕೆ ಹಿಂದಿನದ್ದು) ಪೈಕಿ 2 ಕೋಟಿ ವಾಹನಗಳಲ್ಲಿ ಹಳೆ ನಂಬರ್‌ ಪ್ಲೇಟ್‌ ಇದೆ. ಅವುಗಳ ಪೈಕಿ ಶೇಕಡಾ 70 ದ್ವಿಚಕ್ರ ವಾಹನಗಳು. ಇದೀಗ ಆ ಹಳೆ ವಾಹನಗಳ ನೋಂದಣಿ ಫಲಕಗಳನ್ನು ಬದಲಿಸಿ ಕಡ್ಡಾಯವಾಗಿ ಎಚ್‌ಎಸ್‌ಆರ್‌ಪಿ ಅಳವಡಿಸಬೇಕೆಂದು ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದೆ.

ರಾಜ್ಯದಲ್ಲಿ 2019ರ ಏ.1 ಕ್ಕೂ ಮುನ್ನ ನೋಂದಣಿಯಾದ ಎಲ್ಲಾ ಹಳೆ ವಾಹನಗಳಿಗೆ ನ.17ರೊಳಗೆ ಕಡ್ಡಾಯವಾಗಿ ಎಚ್‌ಎಸ್‌ಆರ್‌ಪಿ ಪ್ಲೇಟ್‌ ಅಳವಡಿಸಬೇಕು. ಇಲ್ಲದಿದ್ದರೆ ವಾಹನ ಮಾಲೀಕರಿಗೆ 500ರಿಂದ 1 ಸಾವಿರ ರೂ.ವರೆಗೆ ದಂಡ ವಿಧಿಸಲಾಗುತ್ತದೆ ಎಂದು ಸಾರಿಗೆ ಇಲಾಖೆ ಆಯುಕ್ತರು ಎ.ಎಂ.ಯೋಗೀಶ್‌ ತಿಳಿಸಿದ್ದಾರೆ.

HSRP ನಂಬರ್‌ ಪ್ಲೇಟ್‌ ಮಾಡಿಸುವುದು ಎಲ್ಲಿ?

  1. ಹಳೆ ವಾಹನಗಳ ಮಾಲೀಕರು ವಾಹನಗಳ ಅಧಿಕೃತ ಡೀಲರ್‌ಗಳು ಅಥವಾ ಶೋ ರೂಂಗಳ ಮೂಲಕ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ಗೆ ಮುಂಗಡವಾಗಿ ಕೋರಿಕೆ ಸಲ್ಲಿಸಿ ಹಣ ಪಾವತಿಸಬೇಕಾಗುತ್ತದೆ.
  2. ನಾಲ್ಕು ಚಕ್ರಗಳ ವಾಹನಕ್ಕೆ ಎಚ್‌ಎಸ್‌ಆರ್‌ಪಿ ಪ್ಲೇಟ್‌ ಬೆಲೆಯು 400 ರಿಂದ 500 ರೂ.ವರೆಗೆ ಬೆಲೆ ಇರಲಿದೆ. ದ್ವಿಚಕ್ರ ವಾಹನಗಳಿಗೆ 250 ರಿಂದ 300 ರೂ. ಇರುತ್ತದೆ.
  3. ವಾಹನ ಉತ್ಪಾದಕ ಕಂಪೆನಿಗಳು ಎಚ್‌ಎಸ್‌ಆರ್‌ಪಿ ಪ್ಲೇಟ್‌ಗಳನ್ನು ಶೋ ರೂಂಗಳಿಗೆ ಪೂರೈಸಲು ಅಧಿಕೃತ HSRP ತಯಾರಕರೊಂದಿಗೆ ಒಪ್ಪಂದ ಮಾಡಿಕೊಂಡಿವೆ. ಹಳೆ ವಾಹನಗಳಿಗೂ ಸಹ ಅಧಿಕೃತ ಎಚ್‌ಎಸ್‌ಆರ್‌ಪಿ ತಯಾರಕರು ಪ್ಲೇಟ್‌ಗಳನ್ನು ಪೂರೈಸುತ್ತಾರೆ.
  4. HSRP ತಯಾರಕರಿಂದ ಬಂದಿರುವ ನಂಬರ್‌ಪ್ಲೇಟ್‌ಗಳನ್ನು ಶೋರೂಂಗಳಲ್ಲಿ ಅಳವಡಿಸಲಾಗುತ್ತದೆ.
  5. ಇದು ಹೈಸೆಕ್ಯುರಿಟಿ ನಂಬರ್‌ ಪ್ಲೇಟ್‌ ಆಗಿರುವುದರಿಂದ ಶೋರೂಂ ಸಿಬ್ಬಂದಿ ಅಥವಾ ವಾಹನ ತಯಾರಕ ಕಂಪೆನಿಯವರು ವಾಹನ್‌ ಪೋರ್ಟಲ್‌ನಲ್ಲಿ ಲೇಸರ್‌ ಕೋಡಿಂಗ್‌ ನವೀಕರಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
  6. ನೋಂದಣಿ ಪ್ರಮಾಣಪತ್ರ ಮತ್ತು ಕಾರ್ಯಕ್ಷಮತೆ ಪ್ರಮಾಣಪತ್ರ (ಎಫ್‌.ಸಿ.) ಹೊಂದಿರದ ವಾಹನಗಳು ಹಾಗೂ ಮಿತಿ ಮೀರಿದ ರಸ್ತೆ ತೆರಿಗೆ ಹೊಂದಿರುವ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸಲಾಗದು.
HSRP Number plates

ಎಚ್‌ಎಸ್‌ಆರ್‌ಪಿ ಯಾಕೆ ಮತ್ತು ವಿಶೇಷತೆ ಏನು?

  1. HSRP ನೋಂದಣಿ ಫಲಕಗಳು ಅತ್ಯಂತ ಸುರಕ್ಷಿತವಾಗಿದ್ದು ಇವುಗಳನ್ನು ಬದಲಿಸುವುದು, ವಿರೂಪಗೊಳಿಸುವುದು ಸಾಧ್ಯವಿಲ್ಲ.
  2. ನಂಬರ್‌ ಪ್ಲೇಟ್‌ನ ಒಂದು ಬದಿಯಲ್ಲಿ ನೀಲಿ ಬಣ್ಣದ ಚಕ್ರವನ್ನು ಹೋಲುವ ಹಾಲೋಗ್ರಾಮ್‌ ಇರುತ್ತದೆ. ಇದರ ಕೆಳಗಡೆ 10 ನಂಬರಿನ ವಿಶಿಷ್ಟ ಗುರುತಿನ ಸಂಖ್ಯೆ ಇರುತ್ತದೆ. ಅಂಕಿಗಳ ಮೇಲೆ ಆಂಗ್ಲಭಾಷೆಯಲ್ಲಿ ‘ಇಂಡಿಯಾ’ ಎಂಬ ಪದ ಹಲವೆಡೆ ಇರುತ್ತದೆ.
  3. ಸುರಕ್ಷಿತ ನಂಬರ್‌ ಪ್ಲೇಟ್‌ನಲ್ಲಿ ನಂಬರ್‌ ಪ್ಲೇಟ್‌ ನಕಲು ಮಾಡುವುದು ಸಾಧ್ಯವಿಲ್ಲ.
  4. ವಾಹನಗಳ ಕಳವು, ಅವುಗಳನ್ನು ಬಳಸಿ ಅಪರಾಧ ಚಟುವಟಿಕೆ ಮಾಡಿದಾಗ ಪರಿಶೀಲಿಸಲು ಎಚ್‌ಎಸ್‌ಆರ್‌ಪಿ ಸಹಕಾರಿಯಾಗಲಿದೆ.
  5. ರಸ್ತೆಗಳಲ್ಲಿ ಸಂಚರಿಸುವ ಎಲ್ಲಾ ವಾಹನಗಳನ್ನು ಗುರುತಿಸಲು ಸಹಕಾರಿ.
  6. ನೋಂದಣಿ ಫಲಕಗಳಲ್ಲಿ ಏಕರೂಪತೆ ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತವೆ.
Exit mobile version