ಹಾವೇರಿಯ ಹಾನಗಲ್ನಲ್ಲಿ (Hangal case) ನಡೆದ ನೈತಿಕ ಪೊಲೀಸ್ಗಿರಿ ಹಾಗೂ ಸಾಮೂಹಿಕ ಅತ್ಯಾಚಾರ (Physical Abuse) ಪ್ರಕರಣವನ್ನು ಸಂತ್ರಸ್ತೆಗೆ ಹಣ ಕೊಟ್ಟು ಮುಚ್ಚಿ ಹಾಕುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಆರೋಪಿಸಿದ್ದರು.
ಹುಬ್ಬಳ್ಳಿಯಲ್ಲಿ ಮಾತಾನಾಡಿದ ಅವರು ಅಲ್ಲಿನ ಸ್ಥಳೀಯರು ಪೊಲೀಸರು ಹಾನಗಲ್ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ್ದರು. ಆ ಸಂತ್ರಸ್ತೆಗೆ ದುಡ್ಡು ಕೊಟ್ಟು ಆಮಿಷವೊಡ್ಡಿ ದೂರು ಹಿಂಪಡೆಯುವಂತೆ ಹೇಳಿದ್ದರು. ಅದೆಲ್ಲವೂ ಈಗ ಬಹಿರಂಗವಾಗಿದೆ. ಹೀಗಾಗಿ ನಾನು ಎಸ್.ಐ.ಟಿ ರಚನೆ ಮಾಡಿ ಎಂದಿದ್ದೆ. ಸಿಎಂ ಸಿದ್ದರಾಮಯ್ಯ ನಾಳೆ ಸೋಮವಾರ ಹಾವೇರಿಗೆ ಭೇಟಿ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿಯಾದರೂ ಎಸ್ಐಟಿ ತನಿಖೆಗೆ ಘೋಷಿಸುತ್ತಾರೆ ಎಂಬ ನಿರೀಕ್ಷೆ ಇದೆ ಎಂದರು.
ಕಾಂಗ್ರೆಸ್ ರಾಜಕಾರಣ
ತನಿಖೆ ನೆಪದಲ್ಲಿ ಸಂತ್ರಸ್ತೆಯನ್ನು ಶಿರಸಿಗೆ ಕರದೊಯ್ಯಲಾಗಿದೆ. ಬಿಜೆಪಿ ಮಹಿಳಾ ನಿಯೋಗ ಅಲ್ಲಿಗೆ ಭೇಟಿ ಕೊಡುತ್ತಿದೆ ಎಂದು ಈ ರೀತಿ ಮಾಡುತ್ತಿದ್ದಾರೆ. ಇದೆಲ್ಲ ರಾಜಕಾರಣವನ್ನು ಕಾಂಗ್ರೆಸ್ನವರು ಮಾಡುತ್ತಾರೆ. ಅವರಿಂದ ನಾವೇನು ಜಾಸ್ತಿ ನಿರೀಕ್ಷೆ ಮಾಡಲ್ಲ ಎಂದರು.
ಇದನ್ನೂ ಓದಿ: Physical Abuse : ರೇಪ್ ಕೇಸ್ನಲ್ಲಿ ಕಾಂಗ್ರೆಸ್ ರಾಜಕಾರಣ; ಸಂತ್ರಸ್ತೆಯೇ ಕಿಡ್ನ್ಯಾಪ್ ಎಂದ ಬಿಜೆಪಿ
ಸಿಎಂ ಅವ್ರ ಹೆಸರಿನಲ್ಲಿರುವ ರಾಮನನ್ನೇ ಕಡೆಗಣಿಸಿದ್ರು
ಇನ್ನು ರಾಮ ಮಂದಿರ ವಿಚಾರದಲ್ಲಿ ಸಿಎಂ ಯೂಟರ್ನ್ ಹೊಡೆದಿರುವ ಕುರಿತು ಮಾತನಾಡಿದ ಬೊಮ್ಮಾಯಿ, ಸಿಎಂ ಸಿದ್ದರಾಮಯ್ಯಗೆ ತಡವಾಗಿಯಾದರೂ ಬುದ್ಧಿ ಬಂದಿದೆ. ಅವರ ಹೆಸರಲ್ಲಿಯೇ ರಾಮ ಇದ್ದಾನೆ. ಅಧಿಕಾರದ ರಾಜಕಾರಣಕ್ಕಾಗಿ ತಮ್ಮ ಹೆಸರಿನಲ್ಲಿರುವ ರಾಮನನ್ನೇ ಅವರು ಕಡೆಗಣಿಸಿದರು. ಕೊನೆಗೂ ಅವರಿಗೆ ಜ್ಞಾನೋದಯವಾಗಿದೆ. ಜನವರಿ 22ರ ನಂತರ ಅಯೋಧ್ಯೆಗೆ ಹೋಗುವುದಾಗಿ ಹೇಳಿದರು. ನಂತರ ಈಗ ಹೋಗಲ್ಲ ಅಂತಿದ್ದಾರೆ. ಅವರ ಆತ್ಮಸಾಕ್ಷಿ ಹೋಗಬೇಕಂತಿದೆ. ಆದರೆ ಹೈಕಮಾಂಡ್ ಬೇಡವೆನ್ನುತ್ತಿದೆ. ಸಿದ್ದರಾಮಯ್ಯ ಗೊಂದಲದಲ್ಲಿ ಸಿಲುಕಿಕೊಂಡಿದ್ದಾರೆ. ಅವರ ಗೊಂದಲಕ್ಕೆ ಇದೇ ಸಾಕ್ಷಿ ಎಂದು ಕಾಲೆಳೆದರು.
ಏನಿದು ಹಾನಗಲ್ ಪ್ರಕರಣ?
ಶಿರಸಿ ಮೂಲದ ಸಮರೀನಾ ಬಾನು ಎಂಬಾಕೆ ತನಗೆ ಪರಿಚಯಸ್ಥನಾಗಿದ್ದ ಸೋಮಶೇಖರ್ ಎಂಬಾತನ ಜತೆ ಜನವರಿ 8ರಂದು ಮಧ್ಯಾಹ್ನದಂದು ಹಾನಗಲ್ಲ ಸಮೀಪದ ಖಾಸಗಿ ಹೋಟೆಲ್ನಲ್ಲಿ ತಂಗಿದ್ದಳು. ಆಗ ಆಟೋ ಚಾಲಕ ನೀಡಿದ ಮಾಹಿತಿ ಮೇರೆಗೆ ಐದಾರು ಪುಂಡ -ಪೋಕರಿಗಳು ಏಕಾಏಕಿ ಹೋಟೆಲ್ಗೆ ನುಗ್ಗಿದ್ದರು. ರೂಮಿನ ಬಾಗಿಲು ತಟ್ಟಿದ ಪುಂಡರು, ತೆರೆಯುತ್ತಿದ್ದಂತೆ ಏಕಾಏಕಿ ಏಳಕ್ಕೂ ಅಧಿಕ ಮುಸ್ಲಿಂ ಯುವಕರ ಗುಂಪು ಅಕ್ರಮವಾಗಿ ಪ್ರವೇಶಿಸಿದ್ದರು. ಸಂತ್ರಸ್ತೆ ಹಾಗೂ ಸೋಮಶೇಖರ್ ಮೇಲೆ ಹಲ್ಲೆ ಮಾಡಿದ್ದರು. ಅಲ್ಲಿಂದ ಕಾರಲ್ಲಿ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ಸಂತ್ರಸ್ತೆ ಆರೋಪ ಮಾಡಿದ್ದಾಳೆ. ಮೊದಮೊದಲು ಈ ಪ್ರಕರಣವನ್ನು ನೈತಿಕ ಪೊಲೀಸ್ಗಿರಿ ಎನ್ನಲಾಗಿತ್ತು. ತದನಂತರ ಸಂತ್ರಸ್ತೆ ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಆರೋಪಿಸಿದ್ದಾಳೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ