Site icon Vistara News

Suspend | ಅಮಾನತು ಆದೇಶ ನೋಡಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಅಸ್ವಸ್ಥ; ಆಸ್ಪತ್ರೆಗೆ ದಾಖಲು

Suspend

ಹುಬ್ಬಳ್ಳಿ: ನಗರದಲ್ಲಿ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಅಸ್ವಸ್ಥಗೊಂಡಿದ್ದಾರೆ. ಅಮಾನತು ಆದೇಶ ನೋಡಿ ಕಸಬಾಪೇಟೆ ಪೊಲೀಸ್ ಇನ್ಸ್‌ಪೆಕ್ಟರ್ ಆಡೆಪ್ಪ ಬನ್ನಿ ಎಂಬುವವರು ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಸ್ವಸ್ಥಗೊಂಡ ಆಡೆಪ್ಪ ಬನ್ನಿ ಅವರಿಗೆ ನಗರದ ಬಾಲಾಜಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಪೊಲೀಸ್ ಕಮಿಷನರ್ ಲಾಭೂರಾಮ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಬಿಪಿ ಹೆಚ್ಚಾಗಿ ಇನ್ಸ್‌ಪೆಕ್ಟರ್ ಅಸ್ವಸ್ಥಗೊಂಡಿ‌ದ್ದಾರೆ ಎಂದು ತಿಳಿದುಬಂದಿದೆ.

ಹುಬ್ಬಳ್ಳಿಯ ಜಂಗ್ಲಿಪೇಟೆಯಲ್ಲಿ ನವೆಂಬರ್ 12 ರಂದು ಸಂತೋಷ್ ಮುರಗೋಡ್ ಎಂಬುವವರ ಕೊಲೆ ನಡೆದಿತ್ತು. ಹಳೇ ದ್ವೇಷದ ಹಿನ್ನೆಲೆಯಲ್ಲಿ ಸಂತೋಷ್‌ನನ್ನು ರೌಡಿ ಶೀಟರ್ ಶಿವಾನಂದ ನಾಯ್ಕ ಕೊಲೆ ಮಾಡಿದ್ದ ಎನ್ನಲಾಗಿತ್ತು. ಇದಕ್ಕೂ ಮೊದಲು ಚಾಕು ಹಿಡಿದು ತಿರುಗಾಡುತ್ತಿದ್ದ ಶಿವಾನಂದ ನಾಯ್ಕ ವಿರುದ್ಧ ಕೆಲ ದಿನಗಳ ಹಿಂದೆ ಮೃತ ಸಂತೋಷ್‌, ಪೊಲೀಸರಿಗೆ ದೂರು ನೀಡಿದ್ದ. ಇದನ್ನು ನಿರ್ಲಕ್ಷ್ಯ ಮಾಡಿದ್ದರಿಂದ ಕೊಲೆಯಾಗಿದೆ ಎಂದು ಸಂಬಂಧಿಕರು ಆಕ್ರೋಶ ಹೊರಹಾಕಿದ್ದರು. ಪ್ರಕರಣದಲ್ಲಿ ಕರ್ತವ್ಯಲೋಪ ಹಿನ್ನೆಲೆಯಲ್ಲಿ ಇನ್ಸ್‌ಪೆಕ್ಟರ್‌ ಅಮಾನತುಗೊಂಡಿದ್ದರು.

ಇದನ್ನೂ ಓದಿ | Murder Case | ಪ್ರತ್ಯೇಕ ಕಡೆಗಳಲ್ಲಿ ಇಬ್ಬರು ವ್ಯಕ್ತಿಗಳ ಬರ್ಬರ ಹತ್ಯೆ

Exit mobile version