Site icon Vistara News

ಹು-ಧಾರವಾಡ ಮೇಯರ್‌, ಉಪಮೇಯರ್‌ ಚುನಾವಣೆಗೆ ಪಾಲಿಕೆಯಲ್ಲಿ ಜಾಗವೇ ಇಲ್ಲ!

ಹುಬ್ಬಳ್ಳಿ ಪಾಲಿಕೆ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್‌, ಉಪಮೇಯರ್‌ ಚುನಾವಣೆ ಮೇ 28ಕ್ಕೆ ನಿಗದಿಯಾಗಿದೆ. ಆದರೆ ಎಲೆಕ್ಷನ್‌ ನಡೆಸಲು ಪಾಲಿಕೆ ಕಚೇರಿಯಲ್ಲಿ ಸ್ಥಳದ ಅಭಾವವಿರುವುದರಿಂದ ಸೂಕ್ತ ಜಾಗಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ.

ಈ ಬಾರಿ ಪಾಲಿಕೆ ಸದಸ್ಯರ ಸಂಖ್ಯೆ 67ರಿಂದ 82ಕ್ಕೆ ಏರಿಕೆಯಾಗಿದೆ. ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆಯ ಹಾಲಿ ಸಭಾಂಗಣದಲ್ಲಿ 76 ಮಂದಿ ಮಾತ್ರ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಇದೆ. ಹೀಗಾಗಿ ಪಾಲಿಕೆ ಆಯುಕ್ತರು ಹಾಗೂ ಸಿಬ್ಬಂದಿ ಚುನಾವಣೆ ನಡೆಸುವ ಸ್ಥಳಕ್ಕಾಗಿ ಹುಡುಕುತ್ತಿದ್ದಾರೆ.

ಚುನಾವಣೆಯಲ್ಲಿ ಬಿಜೆಪಿ 39, ಕಾಂಗ್ರೆಸ್‌ 33, ಪಕ್ಷೇತರರು 6, ಎಐಎಂಐಎಂ 3, ಜೆಡಿಎಸ್‌ನ ಒಬ್ಬ ಸದಸ್ಯ ಜಯ ಗಳಿಸಿದ್ದಾರೆ. ಇವರ ಜತೆಗೆ ಮತದಾನದಲ್ಲಿ ಸಂಸದರು, ಶಾಸಕರು ಭಾಗವಹಿಸುವುದರಿಂದ ಪಾಲಿಕೆ ಹಾಲಿ ಸಭಾಂಗಣದಲ್ಲಿ ಇವರಿಗೆಲ್ಲ ಆಸನ ವ್ಯವಸ್ಥೆ ಕಲ್ಪಿಸುವುದೇ ಸಮಸ್ಯೆಯಾಗಿದೆ. ಆದ್ದರಿಂದ ಪಾಲಿಕೆ ಕಚೇರಿ ಅಥವಾ ಕನ್ನಡ ಭವನದಲ್ಲಿ ಚುನಾವಣೆ ನಡೆಸಬೇಕೆ ಎನ್ನುವ ಕುರಿತು ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ.

ಈ ಬಗ್ಗೆ ಪಾಲಿಕೆ ಆಯುಕ್ತ ಡಾ.ಬಿ.ಗೋಪಾಲಕೃಷ್ಣ ಪ್ರತಿಕ್ರಿಯಿಸಿ, ಚುನಾವಣೆಯನ್ನು ಕನ್ನಡ ಭವನ ಅಥವಾ ಪಾಲಿಕೆ ಸಭಾ ಭವನದಲ್ಲಿ ನಡೆಸಬೇಕು ಎಂಬುದರ ಕುರಿತು ಪಾಲಿಕೆ ಆಡಳಿತಾಧಿಕಾರಿ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಎಲೆಕ್ಷನ್‌ಗೆ ಆಕ್ಷೇಪ: ಪಾಲಿಕೆ ಮೀಸಲಾತಿ ಹಾಗೂ ವಾರ್ಡ್‌ ವಿಂಗಡಣೆ ವಿಷಯ ಕೋರ್ಟ್ ನಲ್ಲಿ ವಿಚಾರಣೆಯಲ್ಲಿರುವಾಗಲೇ ಮೇಯರ್‌, ಉಪಮೇಯರ್‌ ಚುನಾವಣೆ ನಿಗದಿಪಡಿಸಿರುವುದಲಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಚುನಾವಣೆ ಅಸಂವಿಧಾನಿಕವಾಗಿ ನಡೆದಿದ್ದು, ಮೀಸಲಾತಿಯು ಸಮರ್ಪಕವಾಗಿ ನಿಗದಿಪಡಿಸಿಲ್ಲ. ಈ ನಡುವೆ ಪ್ರಾದೇಶಿಕ ಆಯುಕ್ತರು ಚುನಾವಣೆಗೆ ದಿನಾಂಕ ನಿಗದಿ ಮಾಡಿರುವುದು ಸರಿಯಲ್ಲ. ಈ ಸಂಬಂಧ ಮೇ 25ರಂದು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಅರ್ಜಿದಾರರಾದ ಕಿರಣ್‌ ಸಾಮ್ರಾಣಿ, ಅಲ್ತಾಫ್‌ ಕಿತ್ತೂರ ತಿಳಿಸಿದ್ದಾರೆ.

ಇದನ್ನು ಓದಿ| ಸಂತೋಷ್‌ ಆತ್ಮಹತ್ಯೆ: ಎಲೆಕ್ಷನ್‌ ವರ್ಷದಲ್ಲಿ BJPಗೆ ಟೆನ್ಷನ್‌, “ಕೈ”ಗೆ ಅಸ್ತ್ರ

Exit mobile version