ಬೆಂಗಳೂರು: ದೀಪಾವಳಿ ಹಬ್ಬದ (Deepavali) ಸಂದರ್ಭದಲ್ಲಿ ಪ್ರಯಾಣಿಕರಿಗೆ ಖಾಸಗಿ ಬಸ್ ದರ ಏರಿಕೆಯ ಬಿಸಿ ತಟ್ಟಿದೆ. ಸಾರಿಗೆ ಇಲಾಖೆಯ ಎಚ್ಚರಿಕೆಯ ನಡುವೆ ಹಬ್ಬದ ದಿನಗಳಲ್ಲಿ ಖಾಸಗಿ ಬಸ್ ಟಿಕೆಟ್ ದರಗಳಲ್ಲಿ ಭಾರಿ ಏರಿಕೆಯಾಗಿದೆ. ಆ ಮೂಲಕ ಖಾಸಗಿ ಬಸ್ ದರ ಈಗ ವಿಮಾನದಷ್ಟೇ ದುಬಾರಿಯಾಗಿದೆ.
ದೀಪಾವಳಿಗೆ 5 ದಿನ ರಜೆ ಹಿನ್ನೆಲೆಯಲ್ಲಿ ಖಾಸಗಿ ಬಸ್ ದರಗಳಲ್ಲಿ ಯದ್ವಾತದ್ವ ಏರಿಸಲಾಗಿದೆ ಎನ್ನಲಾಗಿದೆ. ಇದರಿಂದ ದಾಖಲೆಯ ಮಟ್ಟದಲ್ಲಿ ಬಸ್ ದರ ಏರಿಕೆಯಾಗಿದೆ. ಖಾಸಗಿ ಬಸ್ ಏಜೆನ್ಸಿ ವೆಬ್‌ಸೈಟ್‌ನಲ್ಲಿ ಅ.23ನೇ ದಿನಾಂಕದಂದು ಬೆಂಗಳೂರಿನಿಂದ ಹುಬ್ಬಳ್ಳಿ ಎಸಿ ಸ್ಲೀಪರ್ ಬಸ್ ಟಿಕೆಟ್ ದರ 5 ಸಾವಿರ ರೂಪಾಯಿ ಇದ್ದರೆ, ವಿಮಾನದಲ್ಲಿ 4849 ರೂಪಾಯಿ ಇದೆ. ಒಂದು ಲೆಕ್ಕದಲ್ಲಿ ವಿಮಾನಕ್ಕಿಂತ ಬಸ್ ದರವೇ ದುಬಾರಿ ಎನ್ನುವಂತಾಗಿದೆ.
ಇದನ್ನೂ ಓದಿ | Amul Milk Price Hike | ಮತ್ತೆ ಹಾಲಿನ ದರ ಹೆಚ್ಚಳ ಮಾಡಿದ ಅಮುಲ್; ದೀಪಾವಳಿ ಎದುರಲ್ಲಿ ಗ್ರಾಹಕರಿಗೆ ಇನ್ನಷ್ಟು ಹೊರೆ
ಸಾರಿಗೆ ಇಲಾಖೆಯಿಂದ ದುಬಾರಿ ದರ ನಿಗದಿಪಡಿಸಿದ ಟ್ರಾವೆಲ್ ಏಜೆನ್ಸಿಗಳ ಮೇಲೆ ದಾಳಿ ಮಾಡಲು ಯೋಜನೆ ರೂಪಿಸಿದ್ದು, ಗುರುವಾರದಿಂದ ಟ್ರಾವೆಲ್ ಏಜೆನ್ಸಿಗಳಲ್ಲಿ ದರ ಸಾರಿಗೆ ಇಲಾಖೆ ಅಧಿಕಾರಿಗಳು ದರ ಪರಿಶೀಲನೆ ನಡೆಸಲಿದ್ದಾರೆ ಎನ್ನಲಾಗಿದೆ. ಪ್ರತಿ ಬಾರಿಯೂ ಹಬ್ಬಗಳು ಬಂತೆಂದರೆ ಖಾಸಗಿ ಬಸ್‌ಗಳು ಟಿಕೆಟ್ ದರವನ್ನು ಎರಡು, ಮೂರು, ಕೆಲವೊಮ್ಮೆ ನಾಲ್ಕು ಪಟ್ಟು ಹೆಚ್ಚಿಸುವುದು ಸಾಮಾನ್ಯವೇ ಆಗಿ ಬಿಟ್ಟಿದೆ. ಈ ಬಗ್ಗೆ ಸಾಲು ಸಾಲು ದೂರುಗಳು ಸಾರಿಗೆ ಇಲಾಖೆಗೆ ಬರುತ್ತಲೇ ಇವೆ.
ಈ ಹಿಂದೆ ದಸರಾ ಸಮಯದಲ್ಲೂ ಬಸ್ ಟಿಕೆಟ್ ದರಗಳಲ್ಲಿ ಶೇ.30ರಷ್ಟು ಏರಿಕೆ ಮಾಡುವುದಾಗಿ ಖಾಸಗಿ ಬಸ್ ಮಾಲೀಕರು ಪಟ್ಟು ಹಿಡಿದಿದ್ದರು. ಅದರಂತೆ ಕೆಲವೆಡೆ ಟಿಕೆಟ್ ದರಗಳಲ್ಲಿ ಏರಿಕೆಯೂ ಆಗಿತ್ತು. ಆದ್ದರಿಂದ ಖಾಸಗಿ ಬಸ್ ಏಜೆನ್ಸಿಗಳ ಮೇಲೆ ಸಾರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ದರ ಪರಿಶೀಲನೆ ನಡೆಸಿದ್ದರು. ಈಗ ದೀಪಾವಳಿ ಸಂದರ್ಭದಲ್ಲೂ ದರ ಏರಿಕೆ ಹಿನ್ನೆಲೆಯಲ್ಲಿ ಹೆಚ್ಚಿನ ದರ ವಸೂಲಿ ಮಾಡದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ.
ಇದನ್ನೂ ಓದಿ | Smartphone| ದೀಪಾವಳಿ ಬಳಿಕ ಸ್ಮಾರ್ಟ್‌ಫೋನ್ ದರದಲ್ಲಿ ಏರಿಕೆ ನಿರೀಕ್ಷೆ