ತಿಪಟೂರು (ತುಮಕೂರು): ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ಅವರ ಜನಪ್ರಿಯತೆ, ವರ್ಚಸ್ಸು ಸಭೆ ಸಮಾರಂಭಗಳಲ್ಲಿ ಎದ್ದು ಕಾಣುತ್ತಿದೆ.
ಬಿಜೆಪಿಯ ಯಾವುದೇ ಕಾರ್ಯಕ್ರಮದಲ್ಲೂ ಬಿ.ವೈ.ವಿಜಯೇಂದ್ರ ಅವರ ಹೆಸರು ಹೇಳುತ್ತಲೇ ಜನ ಜೈಕಾರ ಹಾಕುತ್ತಿದ್ದಾರೆ. ಜಯಘೋಷ ಮೊಳಗಿಸುವ ಮೂಲಕ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ತುಮಕೂರು ಜಿಲ್ಲೆ ತಿಪಟೂರಿನಲ್ಲಿ ಭಾನುವಾರ ಆಯೋಜಿಸಿದ್ದ ಗುರು ಸಿದ್ದರಾಮೇಶ್ವರರ ಜಯಂತಿ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಜಯೇಂದ್ರ ಅವರ ಹೆಸರು ಹೇಳುತ್ತಲೇ ಜನ ಜೈಕಾರ ಹಾಕಿದ್ದಾರೆ.
ಜಯಂತ್ಯುತ್ಸವದಲ್ಲಿ ಪಾಲ್ಗೊಂಡ ಬಸವರಾಜ ಬೊಮ್ಮಾಯಿ ಅವರು ಭಾಷಣ ಮಾಡಿದರು. ಇದೇ ವೇಳೆ ಬೊಮ್ಮಾಯಿ ಅವರು ಬಿ.ವೈ.ವಿಜಯೇಂದ್ರ ಅವರ ಹೆಸರು ಪ್ರಸ್ತಾಪಿಸಿದರು. ಆಗ ವಿಜಯೇಂದ್ರ ಅವರ ಅಭಿಮಾನಿಗಳು ಜೈಕಾರಗಳು, ಶಿಳ್ಳೆಗಳ ಮೂಲಕ ಅಭಿಮಾನ ವ್ಯಕ್ತಪಡಿಸಿದರು.
ಗಲಾಟೆ ಮಾಡಬೇಡಿ, ತಿಪಟೂರಿನಿಂದ ಚುನಾವಣೆಗೆ ನಿಲ್ಲಬೇಕಾಗುತ್ತದೆ ಎಂದ ವಿಜಯೇಂದ್ರ!
ಇದಾದ ಬಳಿಕ ವಿಜಯೇಂದ್ರ ಅವರು ಭಾಷಣ ಮಾಡಲು ವೇದಿಕೆಗೆ ಆಗಮಿಸಬೇಕು ಎಂದು ನಿರೂಪಕಿ ಮನವಿ ಮಾಡಿದರು. ಆಗಲೂ ಜನರ ಕರತಾಡನ ಮುಗಿಲುಮುಟ್ಟಿತ್ತು. ಗಲಾಟೆ ಮಾಡದಂತೆ ಮನವಿ ಮಾಡಿದ ವಿಜಯೇಂದ್ರ, “ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಲ್ಲೇ ವೇದಿಕೆ ಮೇಲಿದ್ದಾರೆ. ನೀವು ಹೀಗೆಯೇ ಗಲಾಟೆ ಮಾಡಿದರೆ ಬಿ ಸಿ ನಾಗೇಶ್ ಅವರನ್ನು ಸೈಡ್‌ಗೆ ಸರಿಸಿ ತಿಪಟೂರಿನಿಂದಲೇ ಸ್ಪರ್ಧಿಸಬೇಕಾಗುತ್ತದೆ” ಎಂದು ತಮಾಷೆ ಮಾಡಿದರು. ಆಗ ಜನರ ಜೈಕಾರ ಮತ್ತಷ್ಟು ಜೋರಾಯಿತು.
ಅಮಿತ್ ಶಾ ಎದುರೂ ಹೀಗೆಯೇ ಆಗಿತ್ತು
ಕಳೆದ ವರ್ಷದ ಡಿಸೆಂಬರ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕಕ್ಕೆ ಭೇಟಿ ನೀಡಿದಾಗಲೂ ಹೀಗೆಯೇ ಆಗಿತ್ತು. ಅಮಿತ್ ಶಾ ಅವರು ವಿಜಯೇಂದ್ರ ಅವರ ಹೆಸರು ಹೇಳುತ್ತಲೇ ಜನ ಜೈಕಾರ ಕೂಗಿದ್ದರು. ಡಿಸೆಂಬರ್ 31ರಂದು ಮಂಡ್ಯದಲ್ಲಿ ನಡೆದ ಬಿಜೆಪಿ ಜನಸಂಕಲ್ಪ ಸಮಾವೇಶದಲ್ಲಿ ಅಮಿತ್ ಶಾ ಅವರ ಎದುರೇ ವಿಜಯೇಂದ್ರ ಅವರ ಪರ ಜನ ಜಯಘೋಷ ಮೊಳಗಿಸಿದ್ದರು.
ಇದನ್ನೂ ಓದಿ | BY Vijayendra | ಅಮಿತ್ ಶಾ ಅವರು ವಿಜಯೇಂದ್ರ ಹೆಸರು ಹೇಳುತ್ತಲೇ ಜೈಕಾರ ಹಾಕಿದ ಜನ