Site icon Vistara News

Humanity Missing : ಯಾರೂ ಸೀಟು ಬಿಡಲಿಲ್ಲ; ಪುಟ್ಟ ಮಗುವನ್ನು ಕೈಲಿ ಹಿಡಿದು ಬಸ್ಸಿನ ಡೋರಲ್ಲೇ ಕುಳಿತ ಮಹಿಳೆ

Dangerous travel

ಕೊಪ್ಪಳ: ಇದನ್ನು ಸರ್ಕಾರ ಶಕ್ತಿ ಯೋಜನೆಯ (Shakti scheme) ದೆಸೆಯಿಂದ ತುಂಬಿ ತುಳುಕುತ್ತಿರುವ ಬಸ್‌ಗಳಿಂದಾದ ಪರಿಣಾಮ (Packed bus) ಎಂದು ಹೇಳಬೇಕೋ ಅಥವಾ ಜನರು ಮಾನವೀಯತೆಯನ್ನು, ಕನಿಷ್ಠ ಕಾಳಜಿಯನ್ನೂ ಮರೆಯುತ್ತಿರುವುದರ ನಿದರ್ಶನ ಎನ್ನಬೇಕೋ ಗೊತ್ತಿಲ್ಲ. ಆದರೆ, ಈ ಒಂದು ಘಟನೆ ಮನುಷ್ಯತ್ವ ಇರುವವರ ಮನಸ್ಸನ್ನು ಕಲಕಿದ್ದಂತೂ (Humanity Missing) ನಿಜ.

ಅದು ಕೊಪ್ಪಳ ಜಿಲ್ಲೆಯ (Koppala News) ಹುಲಿಗಿಯಿಂದ ಕೊಪ್ಪಳ ಪಟ್ಟಣಕ್ಕೆ ಬರುತ್ತಿದ್ದ ಸರ್ಕಾರಿ ಬಸ್ಸು (KSRTC Bus service). ಶಕ್ತಿ ಯೋಜನೆ ಜಾರಿಯ ಪರಿಣಾಮವೂ ಸೇರಿ ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರು ಇದ್ದರು. ಜತೆಗೆ ಪೀಕ್‌ ಟೈಮ್‌ ಆಗಿದ್ದರಿಂದ ಪುರುಷರೂ ಇದ್ದರು.

ಈ ಬಸ್ಸಿಗೆ ಕೊಪ್ಪಳಕ್ಕೆ ಬರುವ ಒಬ್ಬ ಮಹಿಳೆ ಹತ್ತಿದರು. ಅವರ ಕೈಯಲ್ಲಿ ಪುಟ್ಟ ಮಗು. ಆದರೆ, ಅವರಿಗೆ ಒಳಗೆ ಹೋಗುವುದಕ್ಕೂ ಜಾಗ ಸಿಗಲಿಲ್ಲ. ಒಳಗೆ ಹೋದವರು ಯಾರೂ ಇರುವ ಜಾಗದಿಂದ ಸರಿದು ಈ ಮಹಿಳೆಗೆ ಒಳಗೆ ಹೋಗಲು ಅವಕಾಶ ಕೊಡಲಿಲ್ಲ. ಪುಟ್ಟ ಮಗುವನ್ನು ಕೈಯಲ್ಲಿ ಹಿಡಿದುಕೊಂಡು ಹತ್ತಲೂ ಆಗದೆ ನಿಲ್ಲಲೂ ಆಗದೆ ಕಷ್ಟಪಡುತ್ತಿದ್ದ ಆ ಮಹಿಳೆಗೆ ಸೀಟು ಕೊಡಲು ಯಾರೂ ಮುಂದಾಗಲಿಲ್ಲ.

ಬಸ್ಸಿನ ಬಾಗಿಲಲ್ಲೇ ಕುಳಿತು ಪ್ರಯಾಣಿಸಿದ ಮಹಿಳೆ

ಬಸ್ಸಿನಲ್ಲಿ ಸಾಕಷ್ಟು ಮಹಿಳೆಯರೇ ಇದ್ದರೂ ಯಾರೂ ಸೀಟು ಬಿಟ್ಟುಕೊಟ್ಟು ಆಸರೆ ಕೊಡಲಿಲ್ಲ. ಇನ್ನು ಕೆಲವರು ಒಳಗೆ ಹೋಗಿ ಹೋಗಿ ಎಂದು ಹೇಳಿದರು ಹೋಗುವ ಹಾಗಿರಲಿಲ್ಲ. ಹೋಗಿದ್ದರೂ ಮಗುವನ್ನು ಹಿಡಿದುಕೊಂಡು ಹೋದರೆ ಉಸಿರುಗಟ್ಟೀತು ಎಂದು ಆಕೆ ಬಸ್ಸಿನ ಡೋರ್‌ನಲ್ಲೇ ಕುಳಿತುಬಿಟ್ಟರು.

ಆಕೆ ಕುಳಿತಿದ್ದು ಎದುರಿನ ಬಾಗಿಲಿನಲ್ಲಿ. ಅಲ್ಲಿನ ಡೋರ್‌ನ್ನು ಮುಚ್ಚುವ ಹಾಗಿರಲಿಲ್ಲ. ಆಕೆ ಕುಳಿತ ಸ್ಥಿತಿ ಎಷ್ಟೊಂದು ಅಪಾಯಕಾರಿಯಾಗಿತ್ತು ಎಂದರೆ ಯಾವುದಾದರೂ ತಿರುವಿನಲ್ಲಿ ಆಕೆ ಮಗುವಿನ ಜತೆ ರಸ್ತೆಗೆ ಉರುಳಿಬೀಳುತ್ತಾರೋ ಎಂಬ ಆತಂಕ ನೋಡಿದವರನ್ನು ಕಾಡುತ್ತಿತ್ತು. ಅಷ್ಟಾದರೂ ಯಾರೂ ಒಳಗೆ ಸೀಟು ಬಿಟ್ಟುಕೊಡಲಿಲ್ಲ.

ಪ್ರಯಾಣಿಕರು ಮಾನವೀಯತೆ ತೋರದೆ ಇದ್ದುದರಿಂದ ಚಾಲಕ ಮತ್ತು ಕಂಡಕ್ಟರ್‌ ಕೂಡಾ ಅಸಹಾಯಕರಾದರು ಎನ್ನಲಾಗಿದೆ. ಈ ನಡುವೆ, ಬಸ್ಸಿನ ಒಳಗೆ ಬನ್ನಿ ಎಂದು ಹೇಳಿದರೂ ಆ ಮಹಿಳೆ ಬಾಗಿಲಲ್ಲೇ ಕುಳಿತರು ಎಂದು ಕೆಲವರು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಒಬ್ಬ ಮಹಿಳೆ ಒಂದು ಮಗುವನ್ನು ಕೈಯಲ್ಲಿ ಹಿಡಿದುಕೊಂಡು ಅಪಾಯಕಾರಿ ಸ್ಥಿತಿಯಲ್ಲಿ ಬಸ್ಸಿನಲ್ಲಿ ಸಾಗಿದ್ದಂತೂ ಹೌದು. ಈ ಸನ್ನಿವೇಶದ ಚಿತ್ರದ ಕೆಲವರ ಮೊಬೈಲ್‌ನಲ್ಲಿ ದಾಖಲಾಗಿದೆ.

ಇದನ್ನೂ ಓದಿ: Inhuman police | ಪುಟ್ಟ ಮಗುವಿನ ಜತೆ ಆಸ್ಪತ್ರೆಗೆ ಹೊರಟಿದ್ದ ದಂಪತಿಯ ಬೈಕ್‌ ತಡೆದು ಪೊಲೀಸ್‌ ಕಿರುಕುಳ

Exit mobile version