ಚಿತ್ರದುರ್ಗ: ಹೆಡ್ ಬುಷ್ ಸಿನಿಮಾದಲ್ಲಿ (Head Bush) ವೀರಗಾಸೆಗೆ ಅವಮಾನ ಮಾಡಿರುವುದರಿಂದ ಬಹುಸಂಖ್ಯಾತ ಹಿಂದುಗಳ ಭಾವನೆಗೆ ಧಕ್ಕೆಯಾಗಿದೆ. ಹೀಗಾಗಿ ಚಿತ್ರ ತಂಡದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲೆಯ ಹಿರಿಯೂರು ಟೌನ್ ಠಾಣೆಗೆ ವಿಶ್ವ ಹಿಂದು ಪರಿಷತ್, ಭಜರಂಗದಳ ಕಾರ್ಯಕರ್ತರು ಬುಧವಾರ ದೂರು ಸಲ್ಲಿಸಿದ್ದಾರೆ.
ಸಿನಿಮಾದಲ್ಲಿ ಅಂಡರ್‌ವರ್ಲ್ಡ್ ಡಾನ್ ಜಯರಾಜ್ ಪಾತ್ರಧಾರಿ ಡಾಲಿ ಧನಂಜಯ್ ವೀರಗಾಸೆ ಕಲಾವಿದರನ್ನು ಹೊಡೆದು, ಕಾಲಿನಿಂದ ಒದ್ದು ಅಪಮಾನ ಮಾಡಿದ್ದಾರೆ. ಹೀಗಾಗಿ ಚಿತ್ರತಂಡದ ವಿರುದ್ಧ ಎಫ್ಐಆರ್ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಹಿಂದು ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ | Head Bush Movie | ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರಿತ್ತ ವೀರಗಾಸೆ ಕಲಾವಿದರು, ವೀರಶೈವ ಪುರೋಹಿತರು; ಪ್ರದರ್ಶನ ಸ್ಥಗಿತಕ್ಕೆ ಆಗ್ರಹ
ಡಾಲಿ ಧನಂಜಯ್ ಅಭಿನಯದ ಹೆಡ್ ಬುಷ್ ಸಿನಿಮಾದಲ್ಲಿ ವೀರಗಾಸೆಗೆ ಅಪಮಾನ ಮಾಡಲಾಗಿದೆ. ಆ ದೃಶ್ಯಕ್ಕೆ ಕತ್ತರಿ ಹಾಕಬೇಕು ಎಂಬ ಆಗ್ರಹ ಎಲ್ಲೆಡೆ ಕೇಳಿಬಂದ್ದಿದ್ದು, ಚಿತ್ರವನ್ನು ಬಾಯ್ಕಾಟ್ ಮಾಡಬೇಕು ಎಂಬ ಅಭಿಯಾನವು ಸಾಮಾಜಿಕ ಜಾಲತಾಣಗಳಲ್ಲೂ ಪ್ರಾರಂಭವಾಗಿದೆ. ಅದೇ ರೀತಿ ಚಿತ್ರತಂಡದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವೀರಶೈವ ಪುರೋಹಿತ ಮಹಾಸಭಾ ಹಾಗೂ ರಾಜ್ಯ ಕಲಾವಿದರ ಒಕ್ಕೂಟ ಒತ್ತಾಯ ಮಾಡಿದೆ.
ಕ್ಷಮೆಯಾಚನೆ ಮಾಡಿರುವ ಡಾಲಿ ಧನಂಜಯ
ಈಗಾಗಲೇ ವಿವಾದದ ಬಗ್ಗೆ ಚಿತ್ರ ತಂಡ ಕ್ಷಮೆಯಾಚಿಸಿದೆ. ಅವಮಾನ ಆಗುವಂಥದ್ದನ್ನು ಖಂಡಿತ ನಾವು ಮಾಡಿಲ್ಲ. ನಾವು ಯಾವುದೇ ರೀತಿಯಲ್ಲಿ ತಪ್ಪು ಮಾಡಿಲ್ಲ. ನಾವು ಯಾರನ್ನೂ ನೋಯಿಸುವ ಉದ್ದೇಶದಿಂದ ಸಿನಿಮಾ ಮಾಡಿಲ್ಲ. ದೇವರ ಬಗ್ಗೆ, ವೀರಗಾಸೆ ಹಾಗೂ ಕರಗದ ಬಗ್ಗೆ ನಮಗೂ ಅಪಾರವಾದ ಅಭಿಮಾನ, ಭಕ್ತಿ ಇದೆ ಎಂದು ನಟ ಧನಂಜಯ್ ಹೇಳಿದ್ದಾರೆ.
ಇದನ್ನೂ ಓದಿ | Head Bush Movie | ʻನಾವು ಯಾರನ್ನೂ ನೋಯಿಸುವ ಉದ್ದೇಶದಿಂದ ಸಿನಿಮಾ ಮಾಡಿಲ್ಲʼ: ಕ್ಷಮೆ ಕೇಳಿದ ʻಹೆಡ್ ಬುಷ್ʼ ತಂಡ!