ಕಾರವಾರ: ಅವರಿಬ್ಬರೂ ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿದ್ದ ಜೋಡಿ. ಇವರ ಪ್ರೀತಿಗೆ ಸಾಕ್ಷಿಯಾಗಿ ಇಬ್ಬರು ಮಕ್ಕಳು ಸಹ ಇದ್ದು ಆರು ವರ್ಷಗಳ ಕಾಲ ಜತೆಯಾಗಿ ಸಂಸಾರ ನಡೆಸಿದ್ದರು. ಆದರೆ ಅದೊಂದು ದಿನ ಕೆಲಸಕ್ಕೆಂದು ತೆರಳಿದ್ದ ಪತಿ ಮನೆಗೂ ವಾಪಸಾಗದೆ, ಸಂಪರ್ಕಕ್ಕೂ ಸಿಗದೇ ನಾಪತ್ತೆ (Missing Case) ಆಗಿದ್ದಾರೆ. ಪತಿ ಕಾಣೆಯಾಗಿದ್ದಾಗಿ ಪತ್ನಿ ದೂರು ನೀಡಿ ವರ್ಷ ಕಳೆಯುತ್ತಾ ಬಂದರೂ ಸುಳಿವು ಮಾತ್ರ ಸಿಕ್ಕಿಲ್ಲ. ಈಗ ಮಹಿಳೆಗೆ ದಿಕ್ಕೇ ತೋಚದಂತಾಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನ ಆಗದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗೆ ದೂರು ನೀಡಲಾಗಿದೆ.
ಕಂಕುಳಲ್ಲೊಂದು, ಕೈಯಲ್ಲೊಂದು ಮಗುವನ್ನು ಹಿಡಿದು ಕಣ್ಣೀರಿಡುತ್ತಿರುವ ಮಹಿಳೆ ಹೆಸರು ರೇಷ್ಮಾ. ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬೈತಖೋಲ ನಿವಾಸಿಯಾಗಿರುವ ರೇಷ್ಮಾ ಅವರು, ಅಂಕೋಲಾ ತಾಲೂಕಿನ ಹಾರವಾಡ ನಿವಾಸಿ ಮನೋಜ್ ಪೆಡ್ನೇಕರ್ ಎಂಬುವವರನ್ನು ಪ್ರೀತಿಸಿ 2016ರಲ್ಲಿ ವಿವಾಹ ಆಗಿದ್ದರು. ಮನೋಜ್ ಕಾರವಾರ ತಾಲೂಕಿನ ಅರಗಾ ಗ್ರಾಮದಲ್ಲಿರುವ ಕದಂಬ ನೌಕಾನೆಲೆಯಲ್ಲಿ ಸ್ಕಿಲ್ಡ್ ವರ್ಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇವರಿಗೆ ಎರಡು ಹೆಣ್ಣುಮಕ್ಕಳು ಇದ್ದಾರೆ.
ಜಿಲ್ಲಾಧಿಕಾರಿಗಳ ಮೊರೆ
ಆರು ವರ್ಷಗಳ ಕಾಲ ಚೆನ್ನಾಗಿಯೇ ಸಂಸಾರ ಮಾಡಿಕೊಂಡಿದ್ದ ಮನೋಜ್ ಕಳೆದ 2022ರ ಜೂನ್ ತಿಂಗಳಲ್ಲಿ ಕೆಲಸಕ್ಕೆಂದು ಮನೆಯಿಂದ ಹೋದವರು ಮತ್ತೆ ವಾಪಸ್ ಬಂದಿರಲಿಲ್ಲ. ಈ ಸಂಬಂಧ ಪತಿಯನ್ನು ಹುಡುಕಿಕೊಡುವಂತೆ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ರೇಷ್ಮಾ ದೂರು ದಾಖಲಿಸಿದ್ದರಾದರೂ ವರ್ಷ ಕಳೆಯುತ್ತಾ ಬಂದರೂ ಇದುವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಹೀಗಾಗಿ ಪತಿಯನ್ನು ಹುಡುಕಿಸಿಕೊಂಡುವಂತೆ ಇದೀಗ ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ.
ನಾಪತ್ತೆಯಾಗುವ ಮುನ್ನ ಪತಿ ಮನೋಜ್ ಜತೆ ರೇಷ್ಮಾ ಅನ್ಯೋನ್ಯವಾಗಿ ಸಂಸಾರ ಮಾಡಿಕೊಂಡಿದ್ದು, ಅತ್ತೆ ಹಾಗೂ ನಾದಿನಿಯೊಂದಿಗೆ ಸ್ವಂತ ಮನೆಯಲ್ಲಿ ವಾಸವಾಗಿದ್ದರು. ಆದರೆ, ಸಾಲದ ಸಮಸ್ಯೆಯಿದೆ ಎನ್ನುವ ಕಾರಣ ನೀಡಿ ಮನೋಜ್ ಇದ್ದ ಮನೆಯನ್ನೂ ಮಾರಾಟ ಮಾಡಿದ್ದು, ಬಾಡಿಗೆ ಮನೆಯಲ್ಲಿ ಸಂಸಾರ ನಡೆಸುತ್ತಿದ್ದಾಗಲೇ ರೇಷ್ಮಾ ಎರಡನೇ ಮಗುವಿಗೆ ಜನ್ಮ ನೀಡಿದ್ದರು. ಮಗು ಜನಿಸಿದ ಆರು ತಿಂಗಳವರೆಗೆ ಜತೆಗಿದ್ದ ಮನೋಜ್ ನಂತರ ಕಣ್ಮರೆಯಾಗಿದ್ದು, ಯಾವುದೇ ಸಂಪರ್ಕಕ್ಕೂ ಲಭ್ಯವಾಗಿಲ್ಲ.
ಇದನ್ನೂ ಓದಿ: Weather Report: ಇನ್ನೂ 5 ದಿನ ಇದೆ ಮಳೆ ಕಾಟ; ಜಾಗ್ರತೆ ತಪ್ಪದಿರಿ
ನೌಕಾನೆಲೆ ಎದುರು ಧರಣಿ ಎಚ್ಚರಿಕೆ
ಇತ್ತ ಮನೋಜ್ ನಾಪತ್ತೆಯಾದ ಬಳಿಕ ಜೀವನ ಸಾಗಿಸಲು ರೇಷ್ಮಾ ಕೆಲಸಕ್ಕೆ ಸೇರಿದ್ದು ಅತ್ತೆ ಮನೆಯವರೂ ಈಕೆಯೊಂದಿಗೆ ಮಾತನಾಡುತ್ತಿಲ್ಲ. ಹೀಗಾಗಿ ಜೀವನ ನಡೆಸುವುದೇ ಕಷ್ಟವಾಗಿದ್ದು, ಪತಿಯನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ. ಇನ್ನು ವಾಟಾಳ್ ಪಕ್ಷದ ಜಿಲ್ಲಾಧ್ಯಕ್ಷ ರಾಘು ಎಂಬುವವರು ರೇಷ್ಮಾ ನೆರವಿಗೆ ಬಂದಿದ್ದು, ಮನೋಜ್‌ನನ್ನು 8 ದಿನದಲ್ಲಿ ಪತ್ತೆ ಮಾಡದಿದ್ದಲ್ಲಿ ನೌಕಾನೆಲೆ ಎದುರು ಧರಣಿ ಕೂರುವುದಾಗಿ ಎಚ್ಚರಿಕೆ ನೀಡಿದ್ದಾರೆ.