ಕೊಪ್ಪಳ: ಗ್ರಾಮಸ್ಥರ ನಡುವೆ ನಡೆದ ಕಲಹಕ್ಕೆ ಹತ್ಯೆ ಆಗಿರಬೇಕು ಎಂದು ಪೊಲೀಸರು ಅನುಮಾನ ಹೊಂದಿದ್ದ ಪ್ರಕರಣ ಪತಿಪತ್ನಿ ಕಲಹವೆಂದು ನಂತರ ತಿಳಿದುಬಂದಿದೆ. ಪತಿ-ಪತ್ನಿಯರ ನಡುವೆ ಉಂಟಾದ ಜಗಳ ತಾರಕಕ್ಕೇರಿ ಪತಿಯ ಮರಣಕ್ಕೆ ಕಾರಣವಾದ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಸಂಭವಿಸಿದೆ. ಸಿದ್ದಲಿಂಗಪ್ಪ ಎಂಬ ವ್ಯಕ್ತಿ ಶಿಲ್ಪಾಳನ್ನು ಎರಡನೇ ಮದುವೆಯಾಗಿದ್ದು ಇಬ್ಬರೂ ಸುಖವಾಗಿ ಸಂಸಾರ ನಡೆಸುತ್ತಿದ್ದರು. ಇಬ್ಬರು ಮಕ್ಕಳು ಕೂಡ ಇದ್ದರು. ಜೀವನೋಪಾಯಕ್ಕಾಗಿ ಸುಮಾರು ಐದು ವರ್ಷಗಳಿಂದ ಇಬ್ಬರೂ ಹೊಟೇಲ್ ನಡೆಸುತ್ತಿದ್ದರು. ಆದರೆ, ಇತ್ತೀಚೆಗೆ ಶಿಲ್ಪಾ ವರ್ತನೆಯನ್ನು ಕಂಡು ಸಿದ್ದಲಿಂಗಪ್ಪ ಆಕೆಯನ್ನು ಅನುಮಾನಿಸಿದ್ದ. ಅನ್ಯ ವ್ಯಕ್ತಿಯ ಜೊತೆ ಸಲುಗೆಯಿಂದ ಮಾತನಾಡುತ್ತಿದ್ದ ಆಕೆಯ ನಡವಳಿಕೆ ಸಿದ್ದಲಿಂಗಪ್ಪ ಅನುಮಾನಕ್ಕೆ ಕಾರಣವಾಗಿತ್ತು.
ಈ ವಿಚಾರವಾಗಿ ಶಿಲ್ಪಾ ಹಾಗೂ ಸಿದ್ದಲಿಂಗಪ್ಪ ಆಗಾಗ್ಗೆ ಜೋರು ಗಲಾಟೆಯಾಗುತ್ತಿತ್ತು. ಶಿಲ್ಪಾ ವರ್ತನೆಯಿಂದ ಕೊಪಗೊಂಡು ಸಿದ್ದಲಿಂಗಪ್ಪ ಆಕೆಯ ಮೊಬೈಲ್ ಸಿಮ್ ಕಾರ್ಡ್ ಕಸಿದುಕೊಂಡಿದ್ದ. ಈ ಘಟನೆಯಿಂದ ಕೋಪಗೊಂಡ ಏಪ್ರಿಲ್ 12ರ ರಾತ್ರಿ ಸಿದ್ದಲಿಂಗಪ್ಪ ಮಲಗಿದ್ದಾಗ ಮಚ್ಚಿನಿಂದ ಆತನನ್ನು ಹತ್ಯೆ ಮಾಡಿದ್ದಾಳೆ.
ಮರುದಿನ ಬೆಳಗ್ಗೆ ಈ ಘಟನೆ ಮನೆಯವರ ಗಮನಕ್ಕೆ ಬಂದು ತಕ್ಷಣ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ. ಕೆಲ ವರ್ಷಗಳ ಹಿಂದೆ ಸಿದ್ದಲಿಂಗಪ್ಪ ಹಾಗೂ ಗ್ರಾಮದ ಕೆಲವರ ನಡುವೆ ಕಲಹ ಉಂಟಾಗಿತ್ತು. ಪೊಲೀಸರು ಮೊದಲ ಹಂತದಲ್ಲಿ ಸಿದ್ದಲಿಂಗಪ್ಪ ಕೊಲೆಯ ಹಿಂದೆ ಗ್ರಾಮದವರ ಕೈವಾಡ ಇರಬಹುದು ಎಂದು ಶಂಕಿಸಿದ್ದರು. ಆದರೆ, ಶಿಲ್ಪಾಳನ್ನು ಮತ್ತೊಮ್ಮೆ ವಿಚಾರಣೆ ಮಾಡಿದಾಗ ಸತ್ಯಾಂಶ ತಿಳಿದು ಬಂದಿದೆ.
ಸಿಮ್ ಕಸಿದುಕೊಂಡ ಕಾರಣಕ್ಕೆ ಪತಿಯನ್ನು ಹತ್ಯೆ ಮಾಡಲಾಗಿದೆ ಎಂದು ಶಿಲ್ಪಾ ಖುದ್ದಾಗಿ ತಪ್ಪು ಒಪ್ಪಿಕೊಂಡಿದ್ದಾಳೆ. ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.
ಮಗನನ್ನು ಕಳೆದುಕೊಂಡ ದುಃಖದಲ್ಲಿ ಸಿದ್ದಲಿಂಗಪ್ಪ ವೃದ್ಧ ತಂದೆ-ತಾಯಿ ಪೊಲೀಸ್ ಠಾಣೆಯ ಎದುರು ಕಣ್ಣೀರು ಹಾಕಿದ್ದಾರೆ. ಹಾಗೂ, ಪತಿ-ಪತ್ನಿಯ ಜಗಳದ ನಡುವೆ ಇಬ್ಬರು ಪುಟ್ಟ ಮಕ್ಕಳು ಅನಾಥರಾಗಿರುವುದು ವಿಷಾದದ ಸಂಗತಿ.