ತುಮಕೂರು: ಇದೊಂದು ವಿಚಿತ್ರ ಪ್ರಕರಣವಾಗಿದ್ದು, ದೇವರ ಮಾತು ಕೇಳಿದ ಪತಿಯೊಬ್ಬ ಹೆಂಡತಿಗೆ ವಿಚ್ಛೇದನ ನೀಡಲು ಮುಂದಾಗಿದ್ದ. ಆದರೆ, ಇಂತಹ ನಂಬಿಕೆ ಬಿಟ್ಟು ಮತ್ತೆ ಒಂದಾಗುವಂತೆ ನ್ಯಾಯಾಧೀಶರು ಬುದ್ಧಿ ಮಾತು ಹೇಳಿದ್ದರಿಂದ ಪುನಃ ಆಕೆ ಜತೆ ಒಂದಾಗಿರುವ ಪ್ರಸಂಗ ಜಿಲ್ಲೆಯ ಚಿಕ್ಕನಾಯಕನಹಳ್ಳಿ ನಡೆದಿದೆ.
ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಹೋಬಳಿಯ ಮಂಜುನಾಥ್ ಹಾಗೂ ಪಾರ್ವತಮ್ಮ ಐದಾರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ಮಧ್ಯೆ ಪತಿಯು ಯಾವುದೋ ದೇವರ ಮೊರೆಹೋಗಿದ್ದಾನೆ. ಆಗ ದೇವರು ಕೊಟ್ಟ ಸಂದೇಶದ ಅನುಸಾರ ಈತ ಹೆಂಡತಿಗೆ ವಿಚ್ಛೇದನ ನೀಡಲು ಮುಂದಾಗಿದ್ದ.
ಈ ಹಿನ್ನೆಲೆಯಲ್ಲಿ ಮಂಜುನಾಥ್ ಚಿಕ್ಕನಾಯಕನಹಳ್ಳಿ ನ್ಯಾಯಾಲಯದಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದ. ವಿಚಾರಣೆ ನಡೆಸಿದ ಹಿರಿಯ ಸಿವಿಲ್ ನ್ಯಾಯಾಧೀಶರಾದ ವೆಂಕಟೇಶಪ್ಪನವರ ಅವರು ದಂಪತಿಯನ್ನು ಕರೆದು ಸಮಸ್ಯೆಯನ್ನು ವಿಚಾರಿಸಿದ್ದಾರೆ. ಬಳಿಕ ದೇವರ ಹೇಳಿಕೆ ಮೇರೆಗೆ ಈ ನಿರ್ಧಾರಕ್ಕೆ ಬಂದಿರುವುದಾಗಿ ಮಂಜುನಾಥ್ ಹೇಳಿದ್ದಾರೆ. ಆಗ ನ್ಯಾಯಾಧೀಶರು, ಮೂಢನಂಬಿಕೆ ಒಳ್ಳೆಯದಲ್ಲ. ಯಾವ ದೇವರೂ ಸಹ ಬೇರೆಯಾಗಲಿ ಎಂದು ಹೇಳುವುದಿಲ್ಲ ಎಂಬ ರೀತಿಯಲ್ಲಿ ಬುದ್ಧಿವಾದ ಹೇಳಿ ಅವರನ್ನು ಒಪ್ಪಿಸಿದ್ದಾರೆ.
ಇದನ್ನೂ ಓದಿ: Union Budget 2023: ದೇಶದ ಅಭಿವೃದ್ಧಿ ಪಥಕ್ಕೆ ಹೊಸ ಶಕ್ತಿ ತುಂಬುವ ಬಜೆಟ್ ಇದು ಎಂದ ಪ್ರಧಾನಿ ಮೋದಿ
ಬಳಿಕ ನ್ಯಾಯಾಲಯದಲ್ಲಿಯೇ ಹಾರ ತರಿಸಲಾಗಿದೆ. ದಂಪತಿಗಳಿಂದ ಹಾರ ವಿನಿಮಯ ಮಾಡಿಸಿ ಹಳೆಯ ಕಹಿಯನ್ನು ಮರೆತು ಹೊಸ ಜೀವನವನ್ನು ಪ್ರಾರಂಭಿಸುವಂತೆ ಶುಭ ಹಾರೈಸಲಾಗಿದೆ.