Site icon Vistara News

ಸಿದ್ದರಾಮೋತ್ಸವದ ಬಗ್ಗೆ ನಂಗೆ ಆಸಕ್ತಿ ಇಲ್ಲ, ಇದು ಜಲಧಾರೆಯ 50% ಕೂಡಾ ಇಲ್ಲ ಎಂದ ಎಚ್‌ಡಿಕೆ

Siddaramaiah and HD Kumaraswamy

ಬೆಂಗಳೂರು: ಸಿದ್ದರಾಮೋತ್ಸವದ ಬಗ್ಗೆ ನನಗೆ ಹೆಚ್ಚು ಆಸಕ್ತಿ ಇಲ್ಲ. ಇದು ಜೆಡಿಎಸ್‌ ಮಾಡಿದ ಜಲಧಾರೆ ಕಾರ್ಯಕ್ರಮದ ಶೇಕಡಾ ೫೦ರಷ್ಟು ದೊಡ್ಡ ಸಮಾವೇಶ ಅಲ್ಲ: ಹೀಗೆಂದು ಹೇಳಿದ್ದಾರೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ನಾಯಕ ಎಚ್.ಡಿ ಕುಮಾರಸ್ವಾಮಿ.

ʻʻನಮ್ಮ ಕಾರ್ಯಕ್ರಮದ ಮುಂದೆ ಇದು ಏನೂ ಅಲ್ಲ. 7 ಲಕ್ಷ, 8 ಲಕ್ಷ, 20 ಲಕ್ಷ ಅಂತೆಲ್ಲ ಹೇಳ್ತಾರೆ. ಅವರ ಲೆಕ್ಕಕ್ಕೆ ಅರ್ಥವೇ ಇಲ್ಲ. ನಮಗೂ ಎಲ್ಲಾ ಮಾಹಿತಿ ಇದೆ. ಅಡುಗೆ ಮಾಡಿರೋದು, ಶಾಮಿಯಾನ ಹಾಕಿರೋದು ಎಲ್ಲದರ ಮಾಹಿತಿ ನನಗೆ ಇದೆ. ಎಷ್ಟೇ ಆರ್ಭಟ ಮಾಡಿದರೂ ನಮ್ಮ ಕಾರ್ಯಕ್ರಮಕ್ಕೆ ಅವರ ಕಾರ್ಯಕ್ರಮ ಸರಿಸಾಟಿ ಆಗೊಲ್ಲʼʼ ಎಂದರು.

ʻʻಸಿದ್ದರಾಮೋತ್ಸವದಿಂದ ಕಾಂಗ್ರೆಸ್‌ನಲ್ಲಿ ಭಿನ್ನ ಮತ ಆಗುತ್ತದೆ ಅನ್ನುವುದರ ಬಗ್ಗೆ ನಾನು ಮಾತನಾಡುವುದಿಲ್ಲ. ಇನ್ನೊಬ್ಬರ ರಾಜಕೀಯ ದೌರ್ಬಲ್ಯಗಳ ಮೇಲೆ ನಾನು ರಾಜಕೀಯ ಮಾಡುವುದಿಲ್ಲʼʼ ಎಂದು ಹೇಳಿದರು ಎಚ್‌ಡಿಕೆ. ʻʻಸಿದ್ದರಾಮೋತ್ಸವಕ್ಕೆ ಬರುವಾಗ ಅವರದೇ ಕ್ಷೇತ್ರದ ಒಬ್ಬ ಕಾರ್ಯಕರ್ತ ಅಪಘಾತದಲ್ಲಿ ಸತ್ತು ಹೋದ. ಆ ಕಾರ್ಯಕ್ರಮದಲ್ಲಿ ಒಂದು ಶ್ರದ್ಧಾಂಜಲಿ ಕೂಡಾ ಸಲ್ಲಿಕೆ‌‌ ಮಾಡಲಾಗಿಲ್ಲ. ಇದು ಇದು ಅವರು ಕಾರ್ಯಕರ್ತರನ್ನು ಉಳಿಸಿಕೊಳ್ಳುವ ರೀತಿ. ಕಾರ್ಯಕರ್ತ ಸತ್ತರೂ ಯಾರು ಕೇಳಲಿಲ್ಲ. ಕಾರ್ಯಕರ್ತನಿಗೆ ಬೆಲೆ ಕೊಡದೆ ಎಲ್ಲರೂ ವೀರಾವೇಶದಲ್ಲಿ ಮಾತಾಡಿದರುʼʼ ಎಂದು ಕಾಂಗ್ರೆಸ್‌ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಎಲ್ಲರಿಗೂ ಸಿಎಂ ಆಗಬೇಕು ಅಂತ ಆಸೆ ಇರುತ್ತೆ. ಇದೇ ಆಸೆ ಸಿದ್ದರಾಮಯ್ಯ ಅವರಿಗೂ ಇದ್ದೀತು. ಇದೇ ಸಿದ್ದರಾಮಯ್ಯ ಅವರು ಹಿಂದೆ ʻಕುಮಾರಸ್ವಾಮಿ, ಯಡಿಯೂರಪ್ಪ ಅವರ ಅಪ್ಪನ ಆಣೆ ಸಿಎಂ ಆಗೊಲ್ಲʼ ಅಂದಿದ್ದರು. ಆದರೆ, ಇಬ್ಬರೂ ಮುಖ್ಯಮಂತ್ರಿ ಆದ್ವಿ. ಸಿದ್ದರಾಮಯ್ಯ ಅವರ ಆಸೆ ಈಡೇರಬೇಕಾದರೆ, ೧೧೩ ಸೀಟು ಬರಬೇಕು. ಇದನ್ನು ತೀರ್ಮಾನ ಮಾಡೋರು ಜನ. ಈಗ ಅವರು ನಾನೇ ಸಿಎಂ ಆಗ್ತೀನಿ ಅಂತ ಆಶಾಗೋಪುರ ಕಟ್ಟುತ್ತಿದ್ದಾರೆ. ಕಟ್ಟಲಿ ಎಂದರು ಎಚ್‌ಡಿ ಕುಮಾರಸ್ವಾಮಿ.

ʻʻ ಇವರು ಏನು ಬೇಕಾದರೂ ಮಾಡಿಕೊಳ್ಳಲಿ. ಮೊದಲು ರಾಜ್ಯ ಸರ್ಕಾರ ಅಧಿವೇಶನ ಕರೆಯಬೇಕು. ರಾಜ್ಯದಲ್ಲಿ‌ ಮಳೆ ಬಂದು ದೊಡ್ಡ ಅನಾಹುತ ಆಗಿದೆ. ಅನೇಕ ಸಮಸ್ಯೆಗಳಾಗಿವೆ. ಈ ಬಗ್ಗೆ ಚರ್ಚೆ ಆಗಬೇಕುʼʼ ಎಂದು ಕುಮಾರಸ್ವಾಮಿ ಆಗ್ರಹಿಸಿದರು.

ಇದನ್ನೂ ಓದಿ| ಸಿದ್ದರಾಮೋತ್ಸವ: ಸಿದ್ದು ಪವರ್‌ ಶೋ ಸಕ್ಸಸ್‌, ಜೈ ಎಂದ ಡಿಕೆಶಿ, ಬಿಜೆಪಿಗೂ ಬಿಸಿ

Exit mobile version