ಹಾಸನ: ಮೂರು ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ಮಾತನಾಡಿ ಕಾಂಗ್ರೆಸ್ ಹೈಕಮಾಂಡ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ಇದೀಗ ಮತ್ತೆ ಹೈಕಮಾಂಡ್ ಕುರಿತು ಮಾತನಾಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಯಾರಿಗೆ ಗೌರವ ಕೊಡಬೇಕೋ ಕೊಡುತ್ತೇವೆ. ನನಗೆ ನಾನೇ ಹೈಕಮಾಂಡ್, ನನಗೆ ಯಾರೂ ಹೈಕಮಾಂಡ್ ಇಲ್ಲ. ನಾನು ಯಾರಿಗೂ ಗುಲಾಮನಲ್ಲ ಎಂದು ಹೇಳಿರುವುದು ಕಂಡುಬಂದಿದೆ.
ಹೈಕಮಾಂಡ್‌ಗೆ ಹೆದರುವವರಿಗೆ ನಾವೇನು ಹೇಳಲು ಆಗುತ್ತೆ ಎಂಬ ಬಿ.ಶಿವರಾಂ ಹೇಳಿಕೆಗೆ ಬೇಲೂರಿನಲ್ಲಿ ಪ್ರತಿಕ್ರಿಯಿಸಿ, ನನಗೆ ನಾನೇ ಹೈಕಮಾಂಡ್, ನನಗೆ ಯಾರೂ ಹೈಕಮಾಂಡ್ ಇಲ್ಲ. ನಮ್ಮ ಊರಿನ ಮತದಾರರಿದ್ದಾರಲ್ಲ ಅವರು ನನಗೆ ಹೈಕಮಾಂಡ್. ರಾಜ್ಯಾಧ್ಯಕ್ಷರು, ರಾಷ್ಟ್ರಾಧ್ಯಕ್ಷರು ಎಲ್ಲಾ ಇದ್ದಾರೆ. ಅವರಿಗೆ ಕೊಡಬೇಕಾದ ಗೌರವ ಕೊಡುತ್ತೇವೆ. ಅವರ ಮಾತು ಯಾವುದು ಕೇಳಬೇಕು, ಅದನ್ನು ಕೇಳುತ್ತೇವೆ. ಅವರ ಮಾತನ್ನು ನಾನು ಧಿಕ್ಕರಿಸಲ್ಲ ಎಂದು ಹೇಳಿದ್ದಾರೆ.
ಮುಖಂಡರನ್ನು ಮೆಚ್ಚಿಸುವ ನಡವಳಿಕೆ ನನಗೆ ಬೇಕಿಲ್ಲ. ಅದು ನನ್ನ ಇಷ್ಟ, ನಾನು ಯಾರಿಗೆ ಹೆದರಬೇಕು ಹೆದರುತ್ತೀನಿ. ನಾನು ನಿಷ್ಠಾವಂತ, ಹೈಕಮಾಂಡ್‌ಗೆ ವಿಧೇಯನಾಗಿದ್ದೇನೆ. ಯಾರಿಗೂ ಗುಲಾಮನಲ್ಲ ಎಂದು ರಾಜಣ್ಣ ಹೇಳಿದ್ದಾರೆ.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸರ್ಕಾರದ ವಿರುದ್ಧ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಯಾರು ಕೇಳ್ತಿದ್ದಾರೆ ಅಂತ ದೂರು ಕೊಡಬೇಕಲ್ಲ ಅವರು. ಪ್ರಧಾನಮಂತ್ರಿ ಮೋದಿಯವರು ರಾತ್ರಿ ಫೋನ್ ಮಾಡಿದ್ರು, ಏನೋ ಹೇಳಿದ್ರು ಅಂತ ನಾನು ಹೇಳಲು ಆಗುತ್ತಾ? ದೂರು ಕೊಡಬೇಕಲ್ಲ? ಯಾವ ಅಧಿಕಾರಿಗಳು ಕೇಳಿದ್ದಾರೆ ಎಷ್ಟು ಕೇಳಿದ್ದಾರೆ, ಏನಾದರೂ ಹೇಳಬೇಕಲ್ಲ? ಕೆಂಪಣ್ಣನ ಬಗ್ಗೆ ಗೌರವವಿದೆ, ಸತ್ಯ ಹೇಳ್ತಾರೆ ಅಂತ ನಾನು ನಂಬುತ್ತೀನಿ. ನಿರ್ದಿಷ್ಟವಾಗಿ ಅವರು ಹೇಳಬೇಕು. ಯಾವ ಅಧಿಕಾರಿ ದುಡ್ಡು ಕೇಳ್ತಾರೆ, ಯಾರ ಪರವಾಗಿ ಕೇಳ್ತಾರೆ, ಯಾವ ವಿಚಾರಕ್ಕೆ ಕೇಳ್ತಾರೆ ಅಂತ ಹೇಳಿದರೆ ಅವರ ಬಗ್ಗೆ ಇರುವ ಗೌರವ ಇನ್ನೂ ಹೆಚ್ಚುತ್ತೆ ಎಂದರು.
ಬಿಜೆಪಿಯವರು ಇದನ್ನು ಅಸ್ತ್ರವಾಗಿ ಬಳಸಿಕೊಳ್ಳಲಿ , ಯಾರು ಬೇಡ ಅಂತಾರೆ. ಯಾರೂ ಸನ್ಯಾಸಿಗಳಲ್ಲಾ, ಎಲ್ಲರೂ ರಾಜಕೀಯ ಮಾಡುವವರೇ. ಯಾವ ಅಂಶಗಳು ಅವರಿಗೆ ಬೆಂಬಲವಾಗಿರುತ್ತೆ ಅದನ್ನು ಬಳಸಿಕೊಂಡು ಮಾಡಲಿ ಎಂದು ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ | Amit Shah: ರಾಜ್ಯದಿಂದ ಹೋಗುವ ಮುನ್ನ ಬರ ಪರಿಹಾರ ಘೋಷಿಸಿ; ಅಮಿತ್ ಶಾಗೆ ಸಚಿವ ಕೃಷ್ಣಬೈರೇಗೌಡ ಆಗ್ರಹ
ಲೋಕಸಭಾ ಚುನಾವಣೆ ತಯಾರಿ ಕುರಿತು ಮಾತನಾಡಿರುವ ಅವರು, ಕಾಂಗ್ರೆಸ್ ಲೋಕಸಭಾ ಚುನಾವಣೆಗೆ ತಯಾರಿ ಮಾಡಿಕೊಳ್ಳುತ್ತಿದೆ. ಯಾರು ಅಭ್ಯರ್ಥಿ ಆಗಬೇಕು ಎಂದು ದೆಹಲಿ ಮಟ್ಟದಲ್ಲಿ ಕೂಡಾ ಚರ್ಚೆ ಆಗಿದೆ. ಸುರ್ಜೇವಾಲ ಅವರು ಬೆಂಗಳೂರಿಗೆ ಬರುತ್ತಾರೆ. ಎಲ್ಲರೊಟ್ಟಿಗೆ ಚರ್ಚೆ ಮಾಡಿ, ಅಂತಿಮವಾಗಿ ಹೈಕಮಾಂಡ್ ತೀರ್ಮಾನದಂತೆ ಅಭ್ಯರ್ಥಿಗಳ ಆಯ್ಕೆ ಆಗುತ್ತದೆ. ಹಾಸನ ಜಿಲ್ಲೆಯಲ್ಲೂ ನಾಲ್ಕೈದು ಜನ ಆಕಾಂಕ್ಷಿಗಳು ಇದ್ದಾರೆ. ಮಾಜಿ ಸಚಿವ ದಿ. ಶ್ರೀಕಂಠಯ್ಯ ಅವರ ಮಗ ವಿಜಯ್‌ಕುಮಾರ್, ಶ್ರೇಯಸ್ ಪಟೇಲ್, ಬಿ.ಶಿವರಾಂ, ಬಾಗೂರು ಮಂಜೇಗೌಡ, ಗೋಪಾಲಸ್ವಾಮಿ ಹೀಗೆ ಹಲವರು ಇದ್ದಾರೆ ಎಂದು ಸುಳಿವು ನೀಡಿದ್ದಾರೆ.