ಉಡುಪಿ: ಕಾಂಗ್ರೆಸ್ ಪಕ್ಷ (Congress party) ಅಧಿಕಾರಕ್ಕೆ ಬಂದರೆ ವಿದ್ಯುತ್ ಬಿಲ್ ಬಿಲ್ (Electricity bill) ಕಟ್ಟಬೇಕಾಗಿಲ್ಲ ಎಂಬ ಪ್ರಣಾಳಿಕೆ ಘೋಷಣೆ (Congress manifesto) ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಹಲವಾರು ಮಂದಿ ಈ ಬಾರಿ ಕರೆಂಟ್ ಬಿಲ್ ಕಟ್ಟುವುದಿಲ್ಲ ಎಂದು ಹೇಳಿದರೆ, ನಮಗೆ ಬಿಲ್ಲೇ ಕೊಡಬೇಡಿ ಎಂದು ಕೆಲವರು ಮೀಟರ್ ರೀಡರ್‌ಗೆ ಹೇಳುತ್ತಿದ್ದಾರೆ, ಈ ನಡುವೆ ಉಡುಪಿಯ ಸಾಮಾಜಿಕ ಕಾರ್ಯಕರ್ತರೊಬ್ಬರು ತಮ್ಮ ಮನೆಯ ವಿದ್ಯುತ್ ಮೀಟರ್ ಮೇಲೆ ʻಕರೆಂಟ್ ಬಿಲ್ ಕಟ್ಟುವುದಿಲ್ಲʼ ಎಂಬ ಬೋರ್ಡ್ ಅಳವಡಿಸಿದ್ದಾರೆ!
ಉಡುಪಿಯ ಪೆರಂಪಳ್ಳಿ ನಿವಾಸಿಯಾಗಿರುವ ಸಾಮಾಜಿಕ ಕಾರ್ಯಕರ್ತರ ವಾಸುದೇವ ಭಟ್ (Vasudeva Bhat perampally) ಅವರು ಮೀಟರ್ ಬೋರ್ಡ್‌ಗೆ ಚೀಟಿ ಅಂಟಿಸಿ ತಾವು ಬಿಲ್ ಕಟ್ಟುವುದಿಲ್ಲ ಎಂದಿದ್ದಾರೆ!
ʻʻʻಕಾಂಗ್ರೆಸ್ ಸರಕಾರ ಬಂದರೆ ಹಲವಾರು ಉಚಿತ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಘೋಷಣೆ ಮಾಡಿದೆ. ಜೂನ್ ತಿಂಗಳಿಂದಲೇ ಉಚಿತ ವಿದ್ಯುತ್ ಕೊಡುವ ಯೋಜನೆ ಘೋಷಣೆಯಾಗಿದೆ. ತಾನು ಸೇರಿದಂತೆ ಯಾರೂ ವಿದ್ಯುತ್ ಬಿಲ್ ಪಾವತಿ ಮಾಡಬೇಕಾಗಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಶೇಕಡಾ 95 ಜನತೆ ಇದರ ಲಾಭ ಪಡೆಯಬಹುದು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಡಿಕೆ ಶಿವಕುಮಾರ್ ಹೇಳಿರುವ ಶೇಕಡಾ 95ರ ಒಳಗೆ ನಾನು ಕೂಡ ಬರುತ್ತೇನೆ. ನಾನು ಕೂಡ ಒಬ್ಬ ಫಲಾನುಭವಿ ಎಂಬುದು ದೃಢ ಆಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿರುವುದರಿಂದ ನಾನು ವಿದ್ಯುತ್ ಬಿಲ್ ಕಟ್ಟೋದಿಲ್ಲʼʼ ಎಂದು ಅವರು ಹೇಳಿದ್ದಾರೆ.
ʻʻನಾನು ತಿಂಗಳಿಗೆ 200 ಯೂನಿಟ್ ಖರ್ಚು ಮಾಡುತ್ತಿಲ್ಲ. ನಾನು ಫಲಾನುಭವಿ ಆಗಿರುವುದರಿಂದ ಮೀಟರ್ ಬೋರ್ಡಿನಲ್ಲಿ ಫಲಕ ಹಾಕಿದ್ದೇನೆ. ನಾನು ಇಲ್ಲದಿರುವಾಗ ಮೆಸ್ಕಾಂನವರು ಬಂದರೆ ಅವರಿಗೆ ಗೊತ್ತಾಗಲಿ ಎಂದು ಬೋರ್ಡ್ ಅಳವಡಿಸಿದ್ದೇನೆ. ನನಗೆ ಮೆಸ್ಕಾಂನವರು ಕರೆಂಟ್ ಬಿಲ್ ಕೊಡಬೇಕಾಗಿಲ್ಲ. ನಾನು ಸರಕಾರಕ್ಕೆ ತೆರಿಗೆ ಕಟ್ಟುತ್ತಿರುವುದರಿಂದ ಈ ಯೋಜನೆಗೆ ಅರ್ಹ ಫಲಾನುಭವಿ ಆಗಿದ್ದೇನೆʼʼ ಎಂದು ಉಡುಪಿಯ ವಾಸುದೇವ ಭಟ್ ಪೆರಂಪಳ್ಳಿ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಐದು ಪ್ರಮುಖ ಯೋಜನೆಗಳನ್ನು ಘೋಷಿಸಿದೆ. ಅದರಲ್ಲಿ ತಿಂಗಳಿಗೆ 200 ಯುನಿಟ್‌ನ ಒಳಗೆ ವಿದ್ಯುತ್ ಬಳಸುವ ಕುಟುಂಬಗಳಿಗೆ ಉಚಿತ ವಿದ್ಯುತ್ ಒದಗಿಸಲಾಗುವುದು ಎಂಬ ಪ್ರಮುಖ ಭರವಸೆಯೂ ಸೇರಿದೆ. ಉಳಿದಂತೆ ಮನೆಯ ಯಜಮಾನಿಗೆ ತಿಂಗಳಿಗೆ 2000 ರೂ. ನಿರುದ್ಯೋಗಿ ಪದವೀಧರರಿಗೆ, ಡಿಪ್ಲೊಮಾ ಮಾಡಿದವರಿಗೆ 3,000/1,500 ರೂ., ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಅವಕಾಶ ಮತ್ತು ತಿಂಗಳಿಗೆ 10 ಕೆಜಿ ಅಕ್ಕಿಯನ್ನು ಉಚಿತ ನೀಡುವ ಯೋಜನೆಗಳನ್ನು ಜಾರಿ ಮಾಡುವ ಭರವಸೆ ನೀಡಲಾಗಿದೆ.
ಜನರು ಈ ಯೋಜನೆಗಳನ್ನು ಗಮನಿಸಿ ಮತ ನೀಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಉಚಿತ ವಿದ್ಯುತ್ ವಿಚಾರದಲ್ಲಂತೂ ಜನ ಜೋರಾಗಿ ಮಾತನಾಡುತ್ತಿದ್ದಾರೆ.
ಈಗ ಬೋರ್ಡ್ ಹಾಕಿರುವ ವಾಸುದೇವ ಭಟ್ ಪೆರಂಪಳ್ಳಿ ಅವರು ಪೇಜಾವರ ಶ್ರೀಗಳ ಆತ್ಮೀಯ ಒಡನಾಡಿಯಾಗಿದ್ದು, ಉಡುಪಿ ಕೃಷ್ಣ ಮಠ, ಸಂಘ ಪರಿವಾರದ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುತ್ತಾರೆ. ಜತೆಗೆ ಪ್ರತಿಯೊಂದು ವಿಚಾರವನ್ನು ವಿಮರ್ಶಾತ್ಮಕವಾಗಿ ಗಮನಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಇದನ್ನೂ ಓದಿ : Chitradurga News: ಕಾಂಗ್ರೆಸ್ ಸರ್ಕಾರ ಬಂದಿದೆ, ನಾವು ಕರೆಂಟ್ ಬಿಲ್ ಕಟ್ಟಲ್ಲ ಎಂದ ಜನ; ವಿಡಿಯೊ ವೈರಲ್