ಬೆಂಗಳೂರು: ಮದುವೆ ಆಗುವಾಗ ರಾಜಕೀಯಕ್ಕೆ ಹೋಗಬಾರದು ಎಂದು ನನಗೆ ಅನಿತಾ ಕುಮಾರಸ್ವಾಮಿ ಕಂಡಿಷನ್ ಹಾಕಿದ್ದರು. ಅಂತಹವಳನ್ನೂ ನಾನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿಕೊಂಡು ಬಂದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಮದುವೆ ಗುಟ್ಟು ಬಿಚ್ಚಿಟ್ಟಿದ್ದಾರೆ.
ಯಶವಂತಪುರದಿಂದಲೇ ನೀವು ಸ್ಪರ್ಧಿಸಿ ಎಂಬ ಕಾರ್ಯಕರ್ತನ ಮನವಿಗೆ ಸೋಮವಾರ ಯಶವಂತಪುರದಲ್ಲಿ ನಡೆದ ಜೆಡಿಎಸ್ ಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಜವರಾಯಿಗೌಡ ನನಗಿಂತಲೂ ಸದೃಢ ಅಭ್ಯರ್ಥಿಯಾಗಿದ್ದಾರೆ. ಈ ಹಿಂದಿನ ಚುನಾವಣೆಗಳಲ್ಲಿ ಅವರಿಗೆ ಅನ್ಯಾಯವಾಗಿದೆ ಎಂದು ಜನರು ಅನುಕಂಪದಿಂದ ಮತ ನೀಡುತ್ತಾರೆ ಎಂದರು.
ಯಾವುದೇ ಕ್ಷೇತ್ರದಲ್ಲಿ ಪಕ್ಷ ಉಳಿಸಬೇಕು ಎಂದಾಗ ನಮ್ಮ ಕುಟುಂಬಸ್ಥರು ಹೋಗಿದ್ದೇವೆ. ಇದರಿಂದ ಕಾರ್ಯಕರ್ತರು ಇಂದಿಗೂ ಉಳಿದಿದ್ದಾರೆ. 2008-09ರಲ್ಲಿ ಆಪರೇಷನ್ ಕಮಲದ ಚುನಾವಣೆಯಾಗಿತ್ತು. ಮಧುಗಿರಿ ಕ್ಷೇತ್ರದಲ್ಲಿ ವೀರಭದ್ರಯ್ಯ ಎಂಬ ಅಧಿಕಾರಿಯನ್ನು ನಿಲ್ಲಿಸಬೇಕು ಎಂದುಕೊಂಡಿದ್ದೆವು. ಆದರೆ, ಅವರಿಗೆ ಸ್ವಯಂ ನಿವೃತ್ತಿಗೆ ಅನುಮತಿ ಸಿಗಲಿಲ್ಲ. ಹೀಗಾಗಿ ಅಂತಿಮವಾಗಿ ರಾಜಕೀಯ ಗಾಳಿ, ಗಂಧ ಗೊತ್ತಿಲ್ಲದ ಅನಿತಾ ಕುಮಾರಸ್ವಾಮಿಐನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿಕೊಂಡು ಬಂದೆವು. ಆದರೆ, ಯಶವಂತಪುರದಲ್ಲಿ ಅಂತಹ ಪರಿಸ್ಥಿತಿ ಇಲ್ಲವೆಂದರು.
ಇದನ್ನೂ ಓದಿ | Karnataka Election: ಈ ಬಾರಿಯೂ ಯಶವಂತಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ: ಎಚ್‌ಡಿಕೆ ಘೋಷಣೆ
ಮದುವೆ ಆಗುವಾಗ ರಾಜಕೀಯಕ್ಕೆ ಹೋಗಬಾರದು ಎಂದು ನನಗೆ ಅನಿತಾ ಕುಮಾರಸ್ವಾಮಿ ಕಂಡಿಷನ್ ಹಾಕಿದ್ದರು. ಅಂತಹವಳನ್ನೂ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿಕೊಂಡು ಬಂದೆ. ನಾನು ರಾಮನಗರದ ಶಾಸಕನಾಗಿದ್ದೆ. ಬಳಿಕ ಚನ್ನಪಟ್ಟಣದಲ್ಲಿ ನಾಮಪತ್ರ ಸಲ್ಲಿಸಲು ಕಾರಣ 25 ವರ್ಷಗಳಿಂದ ನಮ್ಮ ಪಕ್ಷದ ಅಭ್ಯರ್ಥಿ ಅಲ್ಲಿ ಗೆದ್ದಿರಲಿಲ್ಲ. ಕಾರ್ಯಕರ್ತರು ನೊಂದಿದ್ದರಿಂದ ಅಲ್ಲಿ ಸ್ಪರ್ಧಿಸಿ ಗೆದ್ದೆ. ಚನ್ನಪಟ್ಟಣಕ್ಕೆ ಅಂದು ನನ್ನ ಅವಶ್ಯಕತೆ ಇತ್ತು. ಹಾಗಾಗಿ ನಾನು ಕಾರ್ಯಕರ್ತರಿಗಾಗಿ ಚುನಾವಣೆ ಎದುರಿಸಿದೆ ಎಂದು ಹೇಳಿದರು.
ಬಹುಶಃ ರಾಜ್ಯ ಹಾಗೂ ದೇಶದ ರಾಜಕಾರಣದಲ್ಲಿ ಅಕ್ಕಪಕ್ಕದ ಕ್ಷೇತ್ರಗಳಲ್ಲಿ ಚುನಾವಣೆಗೆ ನಿಲ್ಲುವ ಧೈರ್ಯ ಯಾವ ಗಂಡೆದೆ ಇರುವವನೂ ಮಾಡಲ್ಲ. ಚನ್ನಪಟ್ಟಣದಲ್ಲಿ ಸಮರ್ಥ ಅಭ್ಯರ್ಥಿ ಇದ್ದಿದ್ದರೆ ನಾನು ಯಶವಂತಪುರ ಕ್ಷೇತ್ರದಲ್ಲಿ ನಿಲ್ಲಲು ಒಪ್ಪಿಕೊಳ್ಳುತ್ತಿದ್ದೆ. ನನಗೆ ಗೊತ್ತಿದೆ ನಾನು, ರಾಜ್ಯದಲ್ಲಿ ಎಲ್ಲಿ ಬೇಕಾದರೂ ಹೋಗಿ ನಿಂತು ಗೆಲ್ಲಬಲ್ಲೆ. ಆದರೆ, ಚನ್ನಪಟ್ಟಣದಲ್ಲಿ ನನಗೆ ಸಮರ್ಥ ಅಭ್ಯರ್ಥಿ ಇಲ್ಲ. ಈಗ ನಾನು ಇಲ್ಲೂ ನಿಂತು, ಅಲ್ಲೂ ನಿಂತರೇ ತಪ್ಪು ಸಂದೇಶ ಹೋಗುತ್ತದೆ ಎಂದರು.
ಇದನ್ನೂ ಓದಿ | ಬ್ರಾಹ್ಮಣರು ಯಾಕೆ ಸಿಎಂ ಆಗಬಾರದು; ಅವರು ಭಾರತದ ಪ್ರಜೆಗಳಲ್ಲವೇ: ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರಶ್ನೆ
ಚನ್ನಪಟ್ಟಣದಲ್ಲಿ ಮುಂದಿನ (2028) ಚುನಾವಣೆಯಲ್ಲಿ ನನ್ನ ಪಕ್ಷದ ಕಾರ್ಯಕರ್ತನನ್ನೇ ಅಭ್ಯರ್ಥಿ ಮಾಡುತ್ತೇನೆ. ಆಗ ನನಗೆ ಯಾವುದೇ ಸಮಸ್ಯೆಯಿಲ್ಲ. ಹೀಗಾಗಿ ಈ ಬಾರಿ ನಾನೇ ಮುಂದೆ ನಿಂತು ಯಶವಂತಪುರ ಕ್ಷೇತ್ರದಲ್ಲಿ ಜವರಾಯಿಗೌಡರನ್ನು ಗೆಲ್ಲಿಸಲು ಶ್ರಮಿಸುತ್ತೇನೆ ಎಂದು ಕಾರ್ಯಕರ್ತರಿಗೆ ಭರವಸೆ ನೀಡಿದರು.