ಚಿಕ್ಕಮಗಳೂರು: ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ (MP Kumaraswamy) ಮೇಲೆ ನಡೆದ ದಾಳಿಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಇದು ಆನೆ ದಾಳಿಯಲ್ಲ. ರಾಜಕೀಯ ದಾಳಿ ಎಂದು ಸ್ವತಃ ಕುಮಾರಸ್ವಾಮಿಯವರೇ ಸ್ಪಷ್ಟಪಡಿಸಿದ್ದಾರೆ. ಕಳ್ಳ, ಹುಚ್ಚು ನಾಯಿಯಂತೆ ಅಟ್ಟಾಡಿಸಿಕೊಂಡು ಬಂದರು ಎಂದು ಸ್ವತಃ ಶಾಸಕರೇ ಅಸಹಾಯಕತೆ ಹೊರಹಾಕಿದ್ದಾರೆ.
ಅಲ್ಲದೆ, ಚಪ್ಪಲಿಯಲ್ಲಿ ಹೊಡೆದು ಬಟ್ಟೆ ಹರಿದು ಹಾಕಿದರು. ಎಲ್ಲರ ಕೈಯಲ್ಲೂ ಕಲ್ಲು, ದೊಣ್ಣೆ ಇತ್ತು. ಕಣ್ಣು ಅಥವಾ ಕೈ-ಕಾಲಿಗೆ ಏನಾದರೂ ಆಗಿದ್ದರೆ ಜವಾಬ್ದಾರಿ ಯಾರು? ಈ ಬಗ್ಗೆ ಪಕ್ಷದ ವರಿಷ್ಠರ ಗಮನಕ್ಕೂ ದೂರು ನೀಡಲು ಮುಂದಾಗಿದ್ದಾಗಿ ಶಾಸಕ ಎಂ.ಪಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಏನಿದು ಪ್ರಕರಣ?
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕುಂದೂರು ಬಳಿ ಆನೆ ದಾಳಿಗೆ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಮಧ್ಯಾಹ್ನದ ನಂತರ ಸ್ಥಳಕ್ಕೆ ಬಂದ ಶಾಸಕ ಕುಮಾರಸ್ವಾಮಿಗೆ ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದರು. ಕಾಡಾನೆ ದಾಳಿಗೆ ಮೂರು ತಿಂಗಳಲ್ಲಿ ಮೂರು ಜನ ಮೃತಪಟ್ಟಿದ್ದಾರೆ. ನೀವು ಏನು ಮಾಡುತ್ತಿದ್ದೀರಾ ಎಂದು ಜನ ಪ್ರಶ್ನೆ ಮಾಡಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಸ್ಥಳೀಯರು ಶಾಸಕ ಕುಮಾರಸ್ವಾಮಿ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ | ಮಂಗಳೂರು ಸ್ಫೋಟ | ಶಾರಿಕ್ ವಿಚಾರಣೆಗೆ ಕಾಯುತ್ತಿದೆ ಎನ್‌ಐಎ ತಂಡ, ಚಾಲಕ ಪುರುಷೋತ್ತಮ್ ಆರೋಗ್ಯದಲ್ಲಿ ಚೇತರಿಕೆ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರು ನನಗೆ ಚಪ್ಪಲಿಯಲ್ಲಿ ಹೊಡೆದು ಹುಚ್ಚು ನಾಯಿಯಂತೆ ಅಟ್ಟಿಸಿಕೊಂಡು ಬಂದರು. ಇದು ರಾಜಕೀಯ ಪ್ರೇರಿತ ದಾಳಿಯಾಗಿದೆ. ನನಗೆ ಟಿಕೆಟ್ ಸಿಗಬಾರದು. ನಾನು ಗೆಲ್ಲಬಾರದು. ಕೈ ಕಾಲು ಮುರಿದು ಮನೆಯಲ್ಲಿ ಕೂರಬೇಕು ಎಂದು ದಾಳಿ ಮಾಡಿದ್ದಾರೆ. ಇದರಲ್ಲಿ ಊರಿನವರ ತಪ್ಪಿಲ್ಲ. ನಾನು ಸೋಮವಾರ (ನ.೨೧) ಮತ್ತೆ ಕುಂದೂರಿಗೆ ಹೋಗಿ ಎಲ್ಲರಿಗೂ ಸಾಂತ್ವನ ಹೇಳಿದ್ದೇನೆ. ನನ್ನ ಮೇಲೆ ಬೇಕೆಂದೇ ದಾಳಿ ನಡೆದಿದೆ ಎಂದು ಹೇಳಿದ್ದಾರೆ.
ಪೊಲೀಸರ ಮೇಲೂ ದಾಳಿ
ಕುಂದೂರು ಗ್ರಾಮದಲ್ಲಿ ಕೇವಲ ಶಾಸಕರ ಮೇಲೆ ಮಾತ್ರವಲ್ಲ, ಪೊಲೀಸರ ಮೇಲೂ ಹಲ್ಲೆ ನಡೆದಿದೆ ಎಂದು ಹೇಳಲಾಗಿದೆ. ಉದ್ರಿಕ್ತರು ಪೊಲೀಸರ ಮೇಲೂ ಕಲ್ಲು ತೂರಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಟಿ ಚಾರ್ಜ್ ಕೂಡ ಮಾಡಿದ್ದಾರೆ. ಪ್ರಕರಣ ಸಂಬಂಧ ಎಂಟು ಜನರ ಮೇಲೆ ಪ್ರಕರಣ ಕೂಡ ದಾಖಲಿಸಿದ್ದಾರೆ. ಆದರೆ, ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಮೃತ ಶೋಭಾರ ಶವವಿಟ್ಟು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಭಾನುವಾರ ಅಂತ್ಯಕ್ರಿಯೆ ಮಾಡಿರಲಿಲ್ಲ. ಸೋಮವಾರ ಪರಿಸ್ಥಿತಿ ತಿಳಿಗೊಂಡಿದ್ದು, ಅಂತ್ಯಕ್ರಿಯೆಯನ್ನು ನೆರವೇರಿಸಲಾಗಿದೆ.
ಕಾಡಾನೆ ಸೆರೆಗೆ ಸರ್ಕಾರದ ಆದೇಶ
ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿನಿಂದ ಕಾಡಾನೆ ಉಪಟಳ ಹೆಚ್ಚಾಗಿ ಭಾನುವಾರ ಮಹಿಳೆಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಉಂಟಾದ ಸಾರ್ವಜನಿಕರ ಆಕ್ರೋಶಕ್ಕೆ ಮಣಿದಿರುವ ರಾಜ್ಯ ಸರ್ಕಾರವು ಮಹತ್ವದ ಆದೇಶವೊಂದನ್ನು ನೀಡಿದ್ದು, ತೊಂದರೆ ನೀಡುತ್ತಿರುವ ಮೂರು ಕಾಡಾನೆಯನ್ನು ಸೆರೆಹಿಡಿಯಲು (Elephant combing) ಸೂಚನೆ ನೀಡಿದೆ.
ಇದನ್ನೂ ಓದಿ | ಮಂಗಳೂರು ಸ್ಫೋಟ | ಮೊದ್ಲು ಗೃಹ ಖಾತೆ ನಿಭಾಯಿಸೋದು ಕಲೀಲಿ: ಆರಗ ಜ್ಞಾನೇಂದ್ರಗೆ ರಾಮಲಿಂಗಾ ರೆಡ್ಡಿ ತರಾಟೆ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹುಲ್ಲೆಮನೆ ಕುಂದೂರಿನಲ್ಲಿ ಕಾಡಾನೆ ದಾಳಿಗೆ ಭಾನುವಾರ (ನ.೨೦) ಮಹಿಳೆಯೊಬ್ಬರು ಮೃತಪಟ್ಟಿದ್ದರು. ಇದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿತ್ತು. ಆದರೆ, ಶಾಸಕ ಎಂ.ಪಿ. ಕುಮಾರಸ್ವಾಮಿ ಸ್ಥಳಕ್ಕೆ ತಡವಾಗಿ ಬಂದಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಜನರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವೇಳೆ ಮಾತಿನ ಚಕಮಕಿ ನಡೆದು ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ನಡೆಸಿದ್ದರು. ಅಲ್ಲದೆ, ಜನರು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಶಾಸಕ ಕುಮಾರಸ್ವಾಮಿ ಆರೋಪವನ್ನೂ ಮಾಡಿದ್ದರು. ಈಗ ಈ ಎಲ್ಲ ಬೆಳವಣಿಗೆಯ ಮಧ್ಯೆ ಉಪಟಳ ನೀಡುತ್ತಿರುವ ಕಾಡಾನೆಗಳ ಸೆರೆಗೆ ಆದೇಶ ನೀಡಲಾಗಿದೆ.
ಕಳೆದ ಮೂರು ತಿಂಗಳಲ್ಲಿ ಕಾಡಾನೆ ದಾಳಿಯಲ್ಲಿ ಮೂವರು ಮೃತಪಟ್ಟಿದ್ದಾರೆ. ಈ ಕುರಿತು ಸಾರ್ವಜನಿಕವಾಗಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಲೇ ಇತ್ತು. ಈಗ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ಸರ್ಕಾರದ ಗಮನಕ್ಕೆ ತಂದಿದ್ದಾರೆ. ಮೂರು ಕಾಡಾನೆಗಳನ್ನು ಹಿಡಿಯಲು ಸರ್ಕಾರ ಆದೇಶ ನೀಡಿದ್ದು, ಸೆರೆ ಹಿಡಿಯಲಾದ ಆನೆಗಳನ್ನು ಸೂಕ್ತ ರಕ್ಷಿತ ಪ್ರದೇಶಕ್ಕೆ ಅಥವಾ ಇಲಾಖಾ ಆನೆ ಶಿಬಿರಕ್ಕೆ ಸ್ಥಳಾಂತರ ಮಾಡಬೇಕು ಎಂದು ಉಲ್ಲೇಖಿಸಲಾಗಿದೆ.
ಅಲ್ಲದೆ, ಈ ಕಾಡಾನೆಗಳ ಸೆರೆ ಕಾರ್ಯಾಚರಣೆಯಲ್ಲಿ ವನ್ಯಜೀವಿ ಕಾಯ್ದೆಯು ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದಲ್ಲದೆ, ಕಾಲ ಕಾಲಕ್ಕೆ ನೀಡಿದ ನಿರ್ದೇಶನವನ್ನು ಪಾಲಿಸಬೇಕೆಂದು ಸಹ ಆದೇಶದಲ್ಲಿ ಉಲ್ಲೇಖ ಮಾಡಲಾಗಿದೆ.
ಇದನ್ನೂ ಓದಿ | ಮಂಗಳೂರು ಸ್ಫೋಟ | ಕೆ.ಜಿ. ಹಳ್ಳಿಯಲ್ಲಿ ನಾಲ್ವರು ವಶಕ್ಕೆ; ಹೆಚ್ಚಿನ ತನಿಖೆಗೆ ಮಂಗಳೂರು ಪೊಲೀಸರ ಸುಪರ್ದಿಗೆ