ಬೆಂಗಳೂರು: ಅನಾರೋಗ್ಯದ ಹಿನ್ನೆಲೆಯಲ್ಲಿ ಕೊನೆಯ ಕ್ಷಣದಲ್ಲಿ ದೆಹಲಿಗೆ (Karnataka CM) ಹೋಗುವುದನ್ನು ರದ್ದುಗೊಳಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾತ್ರೋರಾತ್ರಿ ಸುದ್ದಿಗೋಷ್ಠಿ ನಡೆಸಿ, ಮಂಗಳವಾರ ದೆಹಲಿಗೆ ಹೋಗುತ್ತೇನೆ ಎಂದು ತಿಳಿಸಿದ್ದಾರೆ. “ಅನಾರೋಗ್ಯದ ಕಾರಣ ಸೋಮವಾರ ದೆಹಲಿಗೆ ಹೋಗಲು ಆಗಲಿಲ್ಲ. ಮಂಗಳವಾರ ಹೋಗುತ್ತೇನೆ” ಎಂದು ಸ್ಪಷ್ಟಪಡಿಸಿದರು.
“ಸೋಮವಾರ ಸಾಯಂಕಾಲವೇ ನಾನು ದೆಹಲಿಗೆ ಹೋಗಬೇಕು ಎಂದಿದ್ದೆ. ವಿಮಾನದ ಟಿಕೆಟ್ ಕೂಡ ಬುಕ್ ಆಗಿತ್ತು. ಆದರೆ, ನನಗೆ ಬಿಪಿ, ಜ್ವರದ ಸಮಸ್ಯೆ ಇದೆ. ನನಗೆ ನಡೆದಾಡಲು ಕೂಡ ಆಗಲಿಲ್ಲ. ಹಾಗಾಗಿ, ನಾನು ಮಂಗಳವಾರ ಬೆಳಗ್ಗೆ ದೆಹಲಿಗೆ ಹೋಗುತ್ತೇನೆ. ನನ್ನನ್ನು ಸೋನಿಯಾ ಗಾಂಧಿ ಅವರೇ ಕೆಪಿಸಿಸಿ ಅಧ್ಯಕ್ಷನನ್ನಾಗಿ ಮಾಡಿದ್ದಾರೆ. ಅವರು ಕೂಡ ಮಂಗಳವಾರ ದೆಹಲಿಗೆ ಆಗಮಿಸಲಿದ್ದಾರೆ. ಮೊದಲು ಅವರನ್ನು ಭೇಟಿಯಾಗುತ್ತಾನೆ” ಎಂದು ತಿಳಿಸಿದರು.
“ನನ್ನ ಆರೋಗ್ಯದ ಕುರಿತು ಹೈಕಮಾಂಡ್‌ನ ಎಲ್ಲರೂ ಕರೆ ಮಾಡಿ ವಿಚಾರಣೆ ನಡೆಸಿದ್ದಾರೆ. ಪ್ರಧಾನ ಕಾರ್ಯದರ್ಶಿಯವರೇ ಕರೆ ಮಾಡಿ, ಮೊಬೈಲ್ ಸ್ವಿಚ್ ಆಫ್ ಮಾಡಿ, ವಿಶ್ರಾಂತಿ ತೆಗೆದುಕೊಳ್ಳಿ ಎಂಬುದಾಗಿ ಹೇಳಿದ್ದಾರೆ. ಹಾಗಾಗಿ, ನಾನು ಯಾವುದೇ ವದಂತಿಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನನಗೆ ಆರೋಗ್ಯದ ಸಮಸ್ಯೆ ಇರುವುದರಿಂದ ದೆಹಲಿಗೆ ಹೋಗಲು ಆಗಿಲ್ಲ. ಹಾಗಾಗಿ, ದೆಹಲಿಯ ಬೆಳವಣಿಗೆಗಳ ಬಗ್ಗೆ ನನಗೆ ಗೊತ್ತಿಲ್ಲ” ಎಂದರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಎಲ್ಲ ಶಾಸಕರು ಯಾರು ಮುಖ್ಯಮಂತ್ರಿಯಾಗಬೇಕು ಎಂಬ ಕುರಿತು ಅವರ ಅಭಿಪ್ರಾಯ ತಿಳಿಸಿದ್ದಾರೆ. ಈಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಯಾರು ಮುಖ್ಯಮಂತ್ರಿಯಾಗಬೇಕು ಎಂಬ ಕುರಿತು ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಅದಕ್ಕಾಗಿ, ದೆಹಲಿಯಲ್ಲಿ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಡಿಕೆಶಿ ಹೋಗದ ಕಾರಣ ಸಭೆಯನ್ನು ರದ್ದುಗೊಳಿಸಲಾಗಿದೆ.
ಇದನ್ನೂ ಓದಿ: Karnataka CM: ದೆಹಲಿಗೆ ತೆರಳದ ಡಿಕೆಶಿ, ಖರ್ಗೆ ಜತೆಗಿನ ಸಭೆ ರದ್ದು; ಮಂಗಳವಾರವೂ ಡಿಕೆಶಿ ಹೋದರಷ್ಟೇ ಸಭೆ?