ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿಯಾಗಿ ಕಾಂಗ್ರೆಸ್‌ನ ಲಕ್ಷ್ಮೀ ಹೆಬ್ಬಾಳ್ಕರ್ ನಾಮಪತ್ರ ಸಲ್ಲಿಸುವ ಜತೆಗೆ ಬೃಹತ್ ರೋಡ್ ಶೋ (Karnataka Election 2023) ನಡೆಸುವ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ದಾರೆ. ನಗರದ ಸಿಪಿಇಡಿ ಮೈದಾನದಿಂದ ತಹಸೀಲ್ದಾರ್ ಕಚೇರಿವರೆಗೆ ರೋಡ್ ಶೋ ನಡೆಸಿ ಅವರು ನಾಮಪತ್ರ ಸಲ್ಲಿಸಿದರು. ಇದಾದ ಬಳಿಕ ಮಾತನಾಡಿದ ಅವರು, “ಕಳೆದ ಬಾರಿಯ ಚುನಾವಣೆಯಲ್ಲಿ 52 ಸಾವಿರ ಮತಗಳ ಲೀಡ್‌ನಿಂದ ಗೆಲುವು ಸಾಧಿಸಿದೆ. ಈ ಬಾರಿ 52 ಸಾವಿರಕ್ಕಿಂತ ಅಧಿಕ ಮತಗಳ ಲೀಡ್ ಪಡೆಯುತ್ತೇನೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹಾಗೆಯೇ, ರಮೇಶ್ ಜಾರಕಿಹೊಳಿ ಆಪ್ತ ನಾಗೇಶ್ ಮುನ್ನೋಳ್ಕರ್ ಅವರಿಗೆ ಪರೋಕ್ಷವಾಗಿ ಸವಾಲು ಹಾಕಿದರು.
“ನಾನು ನಾಮಪತ್ರ ಸಲ್ಲಿಸುವ ವೇಳೆ ಅಪಾರ ಸಂಖ್ಯೆಯ ಜನ ಭಾಗವಹಿಸಿರುವುದು, ರೋಡ್ ಶೋಗೆ ಸಾಥ್ ನೀಡಿರುವುದು ಸಂತಸ ತಂದಿದೆ. ಇದು ನನ್ನ ಅಣ್ಣ-ತಮ್ಮಂದಿರು, ತಾಯಂದಿರು ಇಟ್ಟ ಪ್ರೀತಿ-ವಿಶ್ವಾಸದ ಪ್ರದರ್ಶನ ಇದು. ಇಷ್ಟೊಂದು ಜನ ಕೂಡಿರುವುದು ನನ್ನ ವಿಜಯದ ಸಂಕೇತವಾಗಿದೆ. ರಾಜಕೀಯದ ಹಿನ್ನೆಲೆಯೇ ಇಲ್ಲದ ಒಬ್ಬ ಹೆಣ್ಣುಮಗಳನ್ನು ಕ್ಷೇತ್ರದ ಜನ ಅಭೂತಪೂರ್ವ ಲೀಡ್‌ನಲ್ಲಿ ಗೆಲ್ಲಿಸಿದರು. ಈ ಬಾರಿಯೂ ಉತ್ತಮ ಲೀಡ್‌ನಲ್ಲಿಯೇ ಗೆಲುವು ಸಾಧಿಸುತ್ತೇನೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಕ್ತಿ ಪ್ರದರ್ಶನ
“ಐದು ವರ್ಷದ ಹಿಂದೆ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಿದ್ದೇನೆ. ಈಗ ಮತ್ತೆ ಅವರ ಮುಂದೆ ಹೋಗಿ ನಿಂತಿದ್ದೇನೆ. ನನಗೆ ರಾಜಕೀಯವಾಗಿ ವಿರೋಧಿಗಳು ಇರಬಹುದು. ಆದರೆ, ವೈಯಕ್ತಿಕವಾಗಿ ಯಾರೂ ವಿರೋಧಿಗಳಿಲ್ಲ. ಹಾಗೆಯೇ, ಬೇರೆಯವರ ಆರೋಪಗಳಿಗೆ ನಾನು ಉತ್ತರ ಕೊಡಲು ಕೂಡ ಹೋಗುವುದಿಲ್ಲ. ನಮ್ಮ ಮತದಾರರು, ಹಿರಿಯರ ಆಶೀರ್ವಾದದಿಂದ ಚುನಾವಣೆ ಗೆಲ್ಲುತ್ತೇನೆ. ಮತದಾರರ ಇಷ್ಟೊಂದು ಪ್ರೀತಿ-ವಿಶ್ವಾಸ ಪಡೆದ ನಾನೇ ಭಾಗ್ಯವಂತೆ. ಸರ್ವ ಧರ್ಮದವರು ಕೂಡ ನನ್ನ ಜತೆಗಿದ್ದಾರೆ” ಎಂದು ಹೇಳಿದರು.
ಉಮೇದುವಾರಿಕೆಗೂ ಮೊದಲು ದೇವಸ್ಥಾನಕ್ಕೆ ಭೇಟಿ
ಉಮೇದುವಾರಿಕೆ ಸಲ್ಲಿಸುವ ಮೊದಲು ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಾಲೂಕಿನ ಸುಳೆಭಾವಿಯ ಲಕ್ಷ್ಮೀ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಮಾಡಿದರು. ನಾಮಪತ್ರ ದೇವರ ಎದುರಿಟ್ಟು ಅವರು ಪೂಜೆ ಮಾಡಿದರು. ಹೆಬ್ಬಾಳ್ಕರ್ ಅವರಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ, ಪುತ್ರ ಮೃಣಾಲ್ ಸಾಥ್ ನೀಡಿದರು.
ಇದನ್ನೂ ಓದಿ: Karnataka Election 2023: ಬಿ.ಎಲ್. ಸಂತೋಷ್ ಬಗ್ಗೆ ಮಾತನಾಡುವ ನೈತಿಕತೆ ಶೆಟ್ಟರ್‌ಗಿಲ್ಲ; ಕರಂದ್ಲಾಜೆ ತಿರುಗೇಟು