ಹುಬ್ಬಳ್ಳಿ: ಕರ್ನಾಟಕದಲ್ಲಿ ಪೇಶ್ವೆ ಬ್ರಾಹ್ಮಣ ಮೂಲದವರನ್ನು ಮುಖ್ಯಮಂತ್ರಿ ಮಾಡಲು ಬಿಜೆಪಿ ಹೊರಟಿದೆ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರ ಅಪ್ರಬುದ್ಧ ಹೇಳಿಕೆಗಳಿಗೆ ನಾನು ಉತ್ತರಿಸಲ್ಲ. ಪ್ರಧಾನಿ ನರೇಂದ್ರ ಮೋದಿ (PM Modi) ಅವರ ಕೈಕೆಳಗೆ ಕೆಲಸ ಮಾಡಲು ನನಗೆ ಅತ್ಯಂತ ಖುಷಿಯಿದೆ. ನಾನು ಮುಖ್ಯಮಂತ್ರಿ ಆಕಾಂಕ್ಷಿ ಅಲ್ಲ. ನಾನು ರಾಜ್ಯ ರಾಜಕಾರಣದತ್ತ ಬರುವುದಿಲ್ಲ. ಮುಖ್ಯಮಂತ್ರಿಯಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಪ್ರತಿಕ್ರಿಯೆ ನೀಡಿದ್ದಾರೆ.
ಅವರು ಇಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಪ್ರಧಾನಿ ಮೋದಿ ಅವರ ಜತೆಗೆ ಕೆಲಸ ಮಾಡುವುದು ನನ್ನ ಸೌಭಾಗ್ಯವೂ ಹೌದು. ಮೋದಿಯವರಂತಹ ನಾಯಕರು ಸಿಗುವುದು ಶತಮಾನಕ್ಕೊಬ್ಬರು. ಮೋದಿ ನೇತೃತ್ವದಲ್ಲಿ ಭಾರತ ವಿಶ್ವದ ನಂಬರ್ ಒನ್ ಆಗುವತ್ತ ದಾಪುಗಾಲು ಹಾಕುತ್ತಿದೆ. ಕಲ್ಲಿದ್ದಲು ಉತ್ಪಾದನೆಯಲ್ಲಿ ನಾವು ಸ್ವಾವಲಂಬಿಗಳಾಗಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: Ram Mandir: ರಾಮ ಮಂದಿರ ನಿರ್ಮಾಣಕ್ಕೆ ಸ್ಥಳ ಗುರುತಿಸಿಲ್ಲ; ಇದು ಚುನಾವಣಾ ಗಿಮಿಕ್ ಅಷ್ಟೇ: ಎಚ್.ಡಿ. ಕುಮಾರಸ್ವಾಮಿ
ಇಡೀ ವಿಶ್ವವೇ ಮೋದಿ ಅವರನ್ನು ನಿಬ್ಬೆರಗಾಗಿ ನೋಡುತ್ತಿದೆ. ಹೀಗಿರುವಾಗ ನಾನು ರಾಜ್ಯ ರಾಜಕಾರಣದತ್ತ ಬರುವುದಿಲ್ಲ. ಮುಖ್ಯಮಂತ್ರಿಯಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಜೋಶಿ ಉತ್ತರಿಸಿದರು.
ಬಜೆಟ್ ವೇಳೆ ಕಾಂಗ್ರೆಸ್‌ನವರು ಕಿವಿ ಮೇಲೆ ಹೂವನ್ನು ಇಟ್ಟುಕೊಂಡು ಬಂದಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೋಶಿ, ಇನ್ನು ಮುಂದೆ ಕಾಂಗ್ರೆಸ್‌ನವರು ಕಿವಿ ಮೇಲೆ ಹೂವಿಟ್ಟುಕೊಂಡೇ ಅಡ್ಡಾಡಬೇಕಾಗುತ್ತದೆ. ಇಡೀ ದೇಶದಲ್ಲಿ ಕಾಂಗ್ರೆಸ್ ಜನರಿಂದ ತಿರಸ್ಕೃತಗೊಂಡಿದೆ. ಅಷ್ಟಿದ್ದರೂ ಕಾಂಗ್ರೆಸ್‌ನವರು ಬಜೆಟ್ ಮಂಡನೆ ವೇಳೆ ಕಿವಿಯಲ್ಲಿ ಹೂವಿಟ್ಟುಕೊಂಡು ಸದನಕ್ಕೆ ಬಂದಿದ್ದಾರೆ. ಎಲ್ಲ ಕಡೆ ಜನ ಈಗಾಗಲೇ ಅವರಿಗೆ ಹೂವಿಟ್ಟಿದ್ದಾರೆ. ತಾವಾಗಿಯೇ ಹೂವಿಟ್ಟುಕೊಂಡು ಅಡ್ಡಾಡುವ ಪರಿಸ್ಥಿತಿ ಈಗ ಅವರಿಗೆ ನಿರ್ಮಾಣ ಆಗಿದೆ ಎಂದು ಕಿಡಿಕಾರಿದರು.
ಇದನ್ನೂ ಓದಿ: PM Modi: ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಕಾಡಾನೆ ರಕ್ಷಿಸಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ಪಶುವೈದ್ಯರ ಶ್ಲಾಘಿಸಿದ ಮೋದಿ
ನೆಹರೂ ನಿಧನದ ನಂತರ ಅವರ ಹೆಸರಲ್ಲಿ ಇಂದಿರಾ ಅಧಿಕಾರಕ್ಕೆ ಬಂದರು. ಇಂದಿರಾಗಾಂಧಿ ಸಾವಿನ ನಂತರ ಅವರ ಹೆಸರಲ್ಲಿ ಗದ್ದುಗೆ ಹಿಡಿದರು. ಸ್ವಂತ ಶಕ್ತಿಯ ಮೇಲೆ ಎಂದೂ ಕಾಂಗ್ರೆಸ್ ಅಧಿಕಾರಕ್ಕೆ ಬಂದಿಲ್ಲ. ಈಗ ಅಧಿಕಾರ ಕಳೆದುಕೊಂಡು ಪರಿತಪಿಸುತ್ತಾ ಇದ್ದು, ಇಂತಹ ಅನಗತ್ಯ ವಿಚಾರಗಳನ್ನು ಮಾಡುತ್ತಾ ಬಂದಿದೆ ಎಂದು ಕಾಂಗ್ರೆಸ್ ವಿರುದ್ಧ ಜೋಶಿ ಹರಿಹಾಯ್ದರು.