ಬೆಳಗಾವಿ: ಉತ್ತರ ಕರ್ನಾಟಕದ ಸಮಸ್ಯೆಗಳು ಸೇರಿ ರಾಜ್ಯ ಎದುರಿಸುತ್ತಿರುವ ತೀವ್ರ ಬರದ ಬಗ್ಗೆ ಕಲಾಪದಲ್ಲಿ ಚರ್ಚೆ ಮಾಡುವುದು ನನ್ನ ಉದ್ದೇಶ. ಆದರೆ, ನನ್ನನ್ನು ವೈಯಕ್ತಿಕವಾಗಿ ಕೆಣಕಿದರೆ ನಾನು ಸುಮ್ಮನಿರುವ ಪ್ರಶ್ನೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
ಸುವರ್ಣಸೌಧದಲ್ಲಿ ಕಲಾಪದಲ್ಲಿ ಭಾಗಿಯಾಗುವ ಮುನ್ನ ಮಾತನಾಡಿದ ಅವರು, ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚಿಸುವುದು ನನ್ನ ಆದ್ಯತೆ. ಬರ, ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ನನ್ನ ಮಹತ್ವ ಇರುತ್ತದೆ. ಈ ಚಳಿಗಾಲ ಅಧಿವೇಶನದಲ್ಲಿ ಆ ಬಗ್ಗೆ ಚರ್ಚೆ ಮಾಡುತ್ತೇನೆ. ಈ ಭಾಗದ ಜನರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎಂದರು.
ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ನಾವು ಮತ್ತು ಬಿಜೆಪಿ ಜಂಟಿಯಾಗಿ ಹೋರಾಟ ಮಾಡುತ್ತೇವೆ. ಬಿಜೆಪಿ ಅಧಿಕೃತವಾದ ವಿರೋಧ ಪಕ್ಷ. ಜನವರಿಯಲ್ಲಿ ಜಂಟಿ ಅಧಿವೇಶನ ನಡೆಯಲಿದೆ, ಅಲ್ಲಿ ಬೇರೆ ಬೇರೆ ವಿಚಾರಗಳ ಬಗ್ಗೆ ಮಾತನಾಡುತ್ತೇನೆ. ವರ್ಗಾವಣೆ ದಂಧೆ ಸೇರಿದಂತೆ ಬೇರೆ ಬೇರೆ ವಿಚಾರಗಳ ಬಗ್ಗೆ ಅವತ್ತು ಮಾತನಾಡುತ್ತೇನೆ, ಒಂದು ವೇಳೆ ಏನಾದರೂ ವೈಯಕ್ತಿಕವಾಗಿ ಕೆಣಕಿದರೆ ನಾನು ಸುಮ್ಮನೆ ಇರಲ್ಲ ಎಂದು ಅವರು ತಿಳಿಸಿದರು.
ಇದನ್ನೂ ಓದಿ | Belagavi Winter Session: ಸಿದ್ದರಾಮಯ್ಯಗೆ ಮಾಟ – ಮಂತ್ರ; ಗಾಳಿ ಬಿಡಿಸಲು ರೇವಣ್ಣಗೆ ಅಶೋಕ್ ಮನವಿ!
ಈ ಸರ್ಕಾರ ಬಂದು ಆರು ತಿಂಗಳು ಆಗಿದೆ. ಇನ್ನು ನಾಲ್ಕೂವರೆ ವರ್ಷ ಸರ್ಕಾರ ಇರುತ್ತದೆ. ಹಂತ ಹಂತವಾಗಿ ಎಲ್ಲ ವಿಚಾರದ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದರು.
ಸಿಎಂ ಓಲೈಕೆ ರಾಜಕಾರಣ ಸರಿ ಅಲ್ಲ
ನಿರ್ದಿಷ್ಟ ಒಂದು ಸಮುದಾಯವನ್ನು ಓಲೈಸುವ ನಿಟ್ಟಿನಲ್ಲಿ ಸಿದ್ದರಾಮಯ್ಯನವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ಸಿಎಂ ಹೇಳಿಕೆ ಮುಸ್ಲಿಂ ಓಲೈಕೆ ಅಲ್ಲದೇ ಮತ್ತೇನು? ಒಂದು ಸಮುದಾಯವನ್ನು ಓಲೈಕೆ ಮಾಡಲು ಸರ್ಕಾರ ಇರೋದಲ್ಲ. ಎಲ್ಲರನ್ನೂ ಸಮಾನವಾಗಿ ನೋಡಬೇಕು. ಅಧಿವೇಶನದಲ್ಲಿ ಬಿಜೆಪಿ ಜತೆ ಜಂಟಿಯಾಗಿ ಹೋರಾಟ ಮಾಡುತ್ತೇನೆ, ಜನಪರ ವಿಚಾರಗಳ ಬಗ್ಗೆ ಸದನದಲ್ಲಿ ಚರ್ಚೆ ಮಾಡಲಾಗುವುದು. ರಾಜ್ಯಪಾಲರಿಗೆ ದೂರು ಕೊಟ್ಟ ವಿಚಾರದ ಬಗ್ಗೆ ಮುಂದೆ ಹೇಳುತ್ತೇನೆ. ಮುಂದೆ ಎಲ್ಲವೂ ನಿಮಗೇ ಗೊತ್ತಾಗುತ್ತದೆ ಎಂದು ಕುಮಾರಸ್ವಾಮಿ ಅವರು ಮಾರ್ಮಿಕವಾಗಿ ಹೇಳಿದರು.
ಇದನ್ನೂ ಓದಿ | 5 ಕೋಟಿ ವೆಚ್ಚದಲ್ಲಿ ಇಟಗಿ-ಸಾಸಲವಾಡ ಏತ ನೀರಾವರಿ ಯೋಜನೆ ಪೂರ್ಣ: ಸಚಿವ ರಾಮಲಿಂಗಾ ರೆಡ್ಡಿ
ಇದೇ ವೇಳೆ ದೆಹಲಿ ಪ್ರವಾಸ ಮತ್ತು ಪಂಚರಾಜ್ಯ ಚುನಾವಣೆ ಬಗ್ಗೆ ಕುಮಾರಸ್ವಾಮಿ ಮಾತನಾಡಿದ್ದು, ಮೂರು ರಾಜ್ಯಗಳ ಬಿಜೆಪಿ ಮುಖ್ಯಮಂತ್ರಿಗಳ ಆಯ್ಕೆಯಲ್ಲಿ ವರಿಷ್ಠರು ತೊಡಗಿದ್ದಾರೆ. ಅದಾದ ಬಳಿಕ ದೆಹಲಿಗೆ ತೆರಳುವ ಬಗ್ಗೆ ಯೋಚನೆ ಮಾಡುತ್ತೇನೆ. ಮುಂದಿನ ಲೋಕಸಭಾ ಚುನಾವಣೆಗೆ ಈ ಫಲಿತಾಂಶ ದಿಕ್ಸೂಚಿಯಾಗಿದೆ. ಅನೇಕರು ಈ ಬಗ್ಗೆ ಹೇಳಿದ್ದಾರೆ. ಬಲಿಷ್ಠ ನಾಯಕತ್ವ ಬೇಕು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ ಎಂದು ತಿಳಿಸಿದರು.