ಸೊರಬ: ಬಿಜೆಪಿ ಸರ್ಕಾರದ ಆಡಳಿತ ವೈಖರಿಯಿಂದ ಬೇಸತ್ತು, ಕ್ಷೇತ್ರದಲ್ಲಿ ಮಾತ್ರವಲ್ಲದೇ ರಾಜ್ಯ ಮಟ್ಟದಲ್ಲೂ ಅನೇಕ ನಾಯಕರು ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸವನ್ನಿಟ್ಟು ಪಕ್ಷ ಸೇರ್ಪಡೆಯಾಗುತ್ತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ (Karnataka Election 2023) ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ಎಐಸಿಸಿ ಸದಸ್ಯ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಎಸ್. ಮಧು ಬಂಗಾರಪ್ಪ ಹೇಳಿದರು.
ತಾಲೂಕಿನ ಹೆಗ್ಗೋಡು ಗ್ರಾಮದಲ್ಲಿ ಕಾಂಗ್ರೆಸ್‌ನಿಂದ ಚುನಾವಣಾ ಪ್ರಚಾರ ಸಭೆಯನ್ನು ಆಯೋಜಿಸಲಾಗಿತ್ತು. ಈ ವೇಳೆ ವಿವಿಧ ಪಕ್ಷದವರನ್ನು ಕಾಂಗ್ರೆಸ್ ಬರಮಾಡಿಕೊಂಡು ಮಾತನಾಡಿದ ಮಧು ಬಂಗಾರಪ್ಪ, ಕ್ಷೇತ್ರದಲ್ಲಿ ಬಗರ್‌ಹುಕುಂ ಜಮೀನನ್ನು ನಂಬಿಕೊಂಡು ಸಾವಿರಾರು ರೈತರು ಬದುಕು ಕಟ್ಟಿಕೊಂಡಿದ್ದಾರೆ. ಎಸ್. ಬಂಗಾರಪ್ಪ ಅವರು ಸಾಗುವಳಿದಾರರಿಗೆ ರಕ್ಷಣೆ ನೀಡುವ ಕೆಲಸ ಮಾಡಿದ್ದರು. ಆದರೆ, ಈಗಿನ ಶಾಸಕರಿಗೆ ಹಾಗೂ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿಯಿಲ್ಲವಾಗಿದೆ. ಕಾಂಗ್ರೆಸ್ ಪಕ್ಷ ಸದಾ ರೈತರ ಪರವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಬಗರ್‌ಹುಕುಂ ಸಾಗುವಳಿದಾರರಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಕಾನೂನಿನಲ್ಲಿರುವ ಕೆಲ ತೊಡಕುಗಳನ್ನು ನಿವಾರಿಸಿ ಸಾಗುವಳಿದಾರರಿಗೆ ಭೂ ಹಕ್ಕು ನೀಡುವುದಕ್ಕೆ ಆದ್ಯತೆ ನೀಡಲಾಗುವುದು ಎಂದರು.
ಎಸ್. ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅನೇಕ ಜನಪ್ರಿಯವಾದ ಯೋಜನೆಗಳನ್ನು ಜಾರಿಗೆ ತಂದರು. ಆದರೆ, ಬಿಜೆಪಿ ಸರ್ಕಾರ ಅವುಗಳನ್ನು ಮೊಟಕುಗೊಳಿಸುವ ಯತ್ನಕ್ಕೆ ಕೈ ಹಾಕುತ್ತಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ದಾಖಲಾತಿಗೆ ಮಾತ್ರ ಮನೆಗಳನ್ನು ಮಂಜೂರು ಮಾಡಿದೆಯೇ ವಿನಃ, ಬಡವರಿಗೆ ಸೂರು ಕಲ್ಪಿಸಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಸಾಮಾನ್ಯ ಜನ ಬದುಕು ಸಾಗಿಸುವುದೇ ಕಷ್ಟವಾಗಿದೆ. ಕಾಂಗ್ರೆಸ್ ನುಡಿದಂತೆ ನಡೆಯುವ ಪಕ್ಷವಾಗಿದ್ದು, ಜನತೆಗೆ ನೀಡಿದ ಗ್ಯಾರೆಂಟಿ ಕಾರ್ಡ್‍ನಲ್ಲಿ ತಿಳಿಸಿದಂತೆ ಯೋಜನೆಗಳನ್ನು ಜಾರಿಗೆ ತರುವುದು ಶತಸಿದ್ಧ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳಿಂದ ಅನೇಕ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು ಮಧು ಬಂಗಾರಪ್ಪ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಜಿಪಂ ಮಾಜಿ ಸದಸ್ಯ ತಬಲಿ ಬಂಗಾರಪ್ಪ, ತಾಪಂ ಮಾಜಿ ಸದಸ್ಯ ನಾಗರಾಜ ಚಿಕ್ಕಸವಿ, ಬೂತ್ ಅಧ್ಯಕ್ಷ ಗೋಪಾಲ್ ವಕೀಲ, ಪ್ರಮುಖರಾದ ಎಂ.ಡಿ. ಶೇಖರ್, ಜಗದೀಶ್ ಕುಪ್ಪೆ, ಪ್ರಭಾಕರ ಶಿಗ್ಗಾ, ಪ್ರಭು ಹೆಗ್ಗೋಡು, ಸಂಜಯ್ ದೇವತಿಕೊಪ್ಪ, ಪ್ರವೀಣ್, ಸುನೀಲ್, ವಸಂತ್ ಕುಮಾರ್ ಸೇರಿದಂತೆ ಮತ್ತಿತರರಿದ್ದರು.
ಇದನ್ನೂ ಓದಿ: Karnataka Election 2023 : ಸಿಎಂ ಬೊಮ್ಮಾಯಿ ವಿರುದ್ಧದ ಅಭ್ಯರ್ಥಿಯನ್ನೇ ಬದಲಾಯಿಸಿದ ಕಾಂಗ್ರೆಸ್
ಕುಮಾರ್ ಬಂಗಾರಪ್ಪ ಹೋರಾಟವೇನು?: ಮಧು ಪ್ರಶ್ನೆ
ಕ್ಷೇತ್ರದಲ್ಲಿ ತಾವು ಪ್ರಚಾರ ಕೈಗೊಂಡ ವೇಳೆಯಲ್ಲಿ ಜನತೆಯಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ. ತಾಳಗುಪ್ಪ ಪ್ರಕರಣಕ್ಕೆ ಸಂಬಂಧಿಸಿದಂತೆ ರೈತರಿಗೆ ರಕ್ಷಣೆ ನೀಡುವಲ್ಲಿ ಕ್ಷೇತ್ರದ ಶಾಸಕರು ಹಾಗೂ ಸರ್ಕಾರ ವಿಫಲವಾಗಿದೆ. 30 ವರ್ಷ ಬೆಳೆದು ನಿಂತಿದ್ದ ಅಡಿಕೆ ಮರಗಳನ್ನು ಧರೆಗೆ ಉರುಳಿಸಲಾಗಿದೆ. ನಾನು ರೈತರ ಪರವಾಗಿ ಗಟ್ಟಿ ಧ್ವನಿ ಎತ್ತಿದ್ದೇನೆ. ಅನೇಕ ಹೋರಾಟಗಳ ಮೂಲಕ ರೈತರಿಗೆ ರಕ್ಷಣೆ ಒದಗಿಸುವ ಕೆಲಸ ಮಾಡಿದ್ದೇನೆ. ಈಗಿನ ಶಾಸಕರು ಯಾವುದಾರರೂ ಹೋರಾಟದಲ್ಲಿ ಭಾಗಿಯಾಗಿದ್ದಾರೆಯೇ ಎಂದು ಮಧು ಬಂಗಾರಪ್ಪ ಪ್ರಶ್ನಿಸಿದರು.