ದಾವಣಗೆರೆ: ರಾಮ ಮಂದಿರ (Ram Mandir) ಲೋಕಾರ್ಪಣೆ ವೇಳೆ ರಾಜ್ಯದಲ್ಲಿ ಗೋಧ್ರಾ ಹತ್ಯಾಕಾಂಡದಂತಹ ದಾಳಿ ನಡೆಯಲಿದೆ ಎಂಬ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರ ವಿವಾದಾತ್ಮಕ ಹೇಳಿಕೆಯನ್ನು ಯತೀಂದ್ರ ಸಿದ್ದರಾಮಯ್ಯ ಸಮರ್ಥಿಸಿಕೊಂಡಿರುವುದು ಕಂಡುಬಂದಿದೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಕೆಲವರು ನಮ್ಮ ದೇಶವನ್ನು ಹಿಂದು ರಾಷ್ಟ್ರ ಮಾಡಲಿಕ್ಕೆ ಹೊರಟಿದ್ದಾರೆ. ಆ ರೀತಿ ಹಿಂದು ರಾಷ್ಟ್ರವಾದರೆ ನಮ್ಮ ದೇಶವು ಪಾಕಿಸ್ತಾನ, ಅಪಘಾನಿಸ್ತಾನದಂತೆ ದಿವಾಳಿಯಾಗುತ್ತದೆ ಎಂದು ಹೇಳಿದ್ದಾರೆ.
ದಾವಣಗೆರೆಯ ರುದ್ರನಕಟ್ಟೆ ಗ್ರಾಮದಲ್ಲಿ ಆಯೋಜಿಸಿದ್ದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಪಾಕಿಸ್ತಾನ ಮತ್ತು ಅಪಘಾನಿಸ್ತಾನಗಳು ಧರ್ಮದ ಹೆಸರಲ್ಲಿ ಸರ್ವಾಧಿಕಾರ ಮಾಡಿ ದಿವಾಳಿಯಾಗಿವೆ. ದೇಶ ಜಾತ್ಯತೀತ ತತ್ವ ಬಿಟ್ಟು ಧರ್ಮದ ಹಿಂದೆ ಹೋದರೆ ಅಭಿವೃದ್ಧಿ ಕಾಣಲ್ಲ. ಇವತ್ತು ಜಾತ್ಯತೀತ ತತ್ವಕ್ಕೆ ಅಪಾಯ ಬಂದಿದೆ. ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನಿಂದ ಜಾತ್ಯತೀತ ತತ್ವಕ್ಕೆ ಆಪಾಯ ಬಂದಿದೆ. ಧರ್ಮದ ಮೇಲೆ ರಾಜಕೀಯ ಮಾಡುವ ಪಕ್ಷಗಳ ಬಗ್ಗೆ ನಾವು ಹುಷಾರಾಗಿರಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ | Ram Janmabhoomi : ಬಿ.ಕೆ. ಹರಿಪ್ರಸಾದ್ ಹೊರಗೆ ಬಂದರೆ ರಾಮ ಭಕ್ತರು ಕೈ ಕಾಲು ಮುರೀತಾರೆ: ಡಿ.ವಿ. ಸದಾನಂದಗೌಡ
ಧರ್ಮದಿಂದ ಹಿಂದುಳಿದವರು ಮೇಲೇಳೋಕೆ ಸಾಧ್ಯವಾಗುತ್ತಿಲ್ಲ. ಇತಿಹಾಸ ನೋಡಿ ನಾವು ಪಾಠ ಕಲಿಯಬೇಕು. ಇತಿಹಾಸ ನೋಡಿ ನಾವು ದೇಶವನ್ನ ಕಟ್ಟಬೇಕು, ದೇಶಕ್ಕೆ ಉಜ್ವಲ ಭವಿಷ್ಯವಿದೆ. ಹೈ ಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಯಾರು ಹಿಂದುಳಿದವರು, ಅಲ್ಪಸಂಖ್ಯಾತ ನ್ಯಾಯಮೂರ್ತಿಗಳು ಎಷ್ಟು ಜನರಿದ್ದಾರೆ. ಮೇಲ್ವರ್ಗದವರೇ ಸಮಾಜವನ್ನು ನಿಯಂತ್ರಣ ಮಾಡುತ್ತಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ನಮಗೂ ಕೂಡ ಸಮಾಜದಲ್ಲಿ ಉನ್ನತ ಸ್ಥಾನಗಳು ಸಿಗಬೇಕು ಎಂದಿದ್ದಾರೆ.
ಧರ್ಮಕ್ಕಾಗಿ ಇನ್ನೊಬ್ಬರ ಜತೆ ಹೋರಾಟ ಮಾಡಲು ಹೋದರೆ ನಮ್ಮ ಹಕ್ಕು ಕಳೆದುಕೊಳ್ಳಬೇಕಾಗುತ್ತದೆ. ಇದಕ್ಕಾಗಿ ನಾವು ಬದಲಾಗಬೇಕು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕಾದರೆ ನಾವು ಹೋರಾಟ ಮಾಡಬೇಕಿದೆ. ಈ ಮೂಲಕ ಯತೀಂದ್ರ ಅವರು ತಮ್ಮ ತಂದೆ ಸಿದ್ದರಾಮಯ್ಯ ಎರಡೂವರೆ ವರ್ಷ ಅಷ್ಟೆ ಮುಖ್ಯಮಂತ್ರಿ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಚುನಾವಣೆ ಬಂದಾಗ ಗಿಮಿಕ್ ಮಾಡ್ತಾರೆ
ಬಿಜೆಪಿಯವರು ಪ್ರತಿ ಚುನಾವಣೆ ಬಂದಾಗ ಏನಾದರೂ ಒಂದು ಗಿಮಿಕ್ ಮಾಡುತ್ತಾರೆ, ಈಗ ರಾಮ ಮಂದಿರ ಮುಂದಿಟ್ಟುಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಫುಲ್ವಮಾ ದಾಳಿ, ಅದರ ಹಿಂದೆ ಗೋಧ್ರಾ ಹತ್ಯಾಕಾಂಡ ಲಾಭ ಪಡೆದುಕೊಂಡು 2014ಕ್ಕೆ ಅಧಿಕಾರಕ್ಕೆ ಬಂದಿದ್ದರು. ಈಗ ರಾಮ ಮಂದಿರ ಮುಂದಿಟ್ಟುಕೊಂಡಿದ್ದಾರೆ. ಬಿಜೆಪಿಯವರು ಎಷ್ಟೇ ಕೆಳಮಟ್ಟಕ್ಕೆ ಇಳಿಯುವುದಕ್ಕೂ ಹೇಸೋದಿಲ್ಲ. ಅದನ್ನು ನೋಡಿಕೊಂಡು ಬಿ.ಕೆ. ಹರಿಪ್ರಸಾದ್ ಅವರು ಹೇಳಿಕೆ ನೀಡಿದ್ದಾರೆ ಎಂಬುವುದಾಗಿ ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ | Congress Guarantee Scheme: ನಮ್ಮ ಗ್ಯಾರಂಟಿ ಯೋಜನೆಗಳೇ ಜನರ ಕಷ್ಟ ನಿವಾರಣೆಯ ಮಂತ್ರಾಕ್ಷತೆ: ಡಿ.ಕೆ. ಶಿವಕುಮಾರ್
ರಾಮ ಮಂದಿರ ಯಾವುದೇ ಪಕ್ಷಕ್ಕೆ ಸೇರಿದ್ದು ಅಲ್ಲ. ಆದರೆ, ಬಿಜೆಪಿಗರು ಬಿಜೆಪಿಗೆ ಸೇರಿದೆ ಎಂದು ಬಿಂಬಿಸುತ್ತಿದ್ದಾರೆ. ಧರ್ಮ, ದೇವರನ್ನು ರಾಜಕೀಯಕ್ಕೆ ಯಾವತ್ತೂ ಬಳಸಬಾರದು, ಅದು ಬಿಜೆಪಿಗರು ಮಾಡುತ್ತಿದ್ದಾರೆ. ಹಾಗಾಗಿ ಎಲ್ಲರೂ ಟೀಕೆ ಮಾಡ್ತಾ ಇದಾರೆ. ಅಯೋಧ್ಯೆ ವಿಷಯವನ್ನು ರಾಜಕೀಯವಾಗಿ ಬಳಸಿಕೊಂಡು ಅವರಿಗೆ ಬೇಕಾದವರಿಗೆ ಮಾತ್ರ ಆಹ್ವಾನ ಮಾಡಿದ್ದಾರೆ. ಸರ್ಕಾರ ಇರೋದು ಧರ್ಮಕ್ಕಾಗಿ ಅಲ್ಲ, ಜನರಿಗಾಗಿ ಕೆಲಸ ಮಾಡಬೇಕಿದೆ ಎಂದು ಹೇಳಿದರು.