ವಿಜಯಪುರ: ಐಸಿಸ್ ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಧರ್ಮಗುರು ಜತೆ ಸಿಎಂ ವೇದಿಕೆ ಹಂಚಿಕೊಂಡಿದ್ದಾರೆ ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಆದರೆ, ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮುಸ್ಲಿಂ ಧರ್ಮಗುರು ಸಯ್ಯದ್ ಮೊಹಮ್ಮದ್ ತನ್ವೀರ್ ಪೀರಾ ಹಾಶ್ಮಿ ಅವರು, ಒಂದು ವೇಳೆ ಬಸನಗೌಡ ಪಾಟೀಲ್ ಯತ್ನಾಳ್ ಆರೋಪ ಸಾಬೀತಾದರೆ ನಾನು ಈ ದೇಶದಿಂದ ಪಲಾಯನ ಮಾಡುತ್ತೇನೆ. ಇಲ್ಲದಿದ್ದರೆ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಾಕಿಸ್ತಾನಕ್ಕೆ ಫಲಾಯನ ಮಾಡಬೇಕೆಂದು ಸವಾಲು ಹಾಕಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಮುಸ್ಲಿಂ ಧರ್ಮಗುರು ಸಯ್ಯದ್ ಮೊಹಮ್ಮದ್ ತನ್ವೀರ್ ಪೀರಾ ಹಾಶ್ಮಿ ಅವರು, ನನ್ನ ವಿರುದ್ಧ ಯತ್ನಾಳ್ ಅವರು ಮಾಡಿರುವ ಆರೋಪಗಳಲ್ಲಿ ಸತ್ಯಾಂಶಗಳಿಲ್ಲ. ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಕ್ಕೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದೆ. ಇದೇ ವೇದಿಕೆಯಲ್ಲಿ ವಿವಿಧ ದರ್ಗಾದ ಮುಖ್ಯಸ್ಥರು, ಸಿಎಂ ಸಿದ್ದರಾಮಯ್ಯ, ಸಚಿವರು, ಶಾಸಕರು ಉಪಸ್ಥಿತರಿದ್ದರು. ಸಿಎಂ ಯಾವುದೇ ಕೋಮಿನವರಿಗೆ ಅಥವಾ ಸಮಾಜದವರಿಗೆ ಸೀಮಿತವಾಗಿಲ್ಲಾ. ರಾಜಕಾರಣದಲ್ಲಿ ಎಲ್ಲಾ ಧರ್ಮ ಮತ್ತು ಜಾತಿಗಳ ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿಎಂ ಅವರ ಜನಪ್ರೀಯತೆಯನ್ನು ನೋಡಲಾರದೆ ಹತಾಶರಾಗಿ ಯತ್ನಾಳ್ ನನ್ನ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | CM Siddaramaiah: ಸಿಎಂ ಪಕ್ಕ ಐಸಿಸ್ ಸಂಪರ್ಕಿತ ತನ್ವೀರ್; NIA ತನಿಖೆಗೆ ವಹಿಸಲು ಶಾಗೆ ಯತ್ನಾಳ್ ಪತ್ರ!
ಯತ್ನಾಳ್ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶ ಇಲ್ಲ. ಅವರು ಮುಸ್ಲಿಂ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ಕೊಟ್ಟಿದ್ದಾರೆ. ಇದರ ಉದ್ದೇಶ ತಮ್ಮ ರಾಜಕೀಯ ಬೇಳೆಯನ್ನು ಬೇಯಿಸುವುದು ಮಾತ್ರ. ನನಗೆ ಐಸಿಸ್ ಉಗ್ರರ ಜತೆ ನಂಟಿದೆ ಎಂಬುದನ್ನು ಕೇಂದ್ರ ಮತ್ತು ರಾಜ್ಯದ ಎಲ್ಲಾ ತನಿಖಾ ಸಂಸ್ಥೆಗಳಿಗೆ ಯತ್ನಾಳ ದಾಖಲೆ ಸಮೇತ ಸಾಬೀತು ಮಾಡಲಿ. ಒಂದು ವೇಳೆ ನಗರ ಶಾಸಕರು ಒಂದು ವಾರದೊಳಗೆ ಐಸಿಸ್ ಉಗ್ರರ ಜತೆ ನನಗೆ ನಂಟಿದೆ ಎಂಬುದನ್ನು ದಾಖಲೆ ಸಮೇತ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಶಾಸಕರ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಪಾಕಿಸ್ತಾನಕ್ಕೆ ಪಲಾಯನ ಮಾಡಬೇಕು ಸವಾಲು ಹಾಕಿದ್ದಾರೆ.
ನಾನಷ್ಟೇ ಅಲ್ಲಾ ನನ್ನ ಭಕ್ತರು, ಶಿಷ್ಯರಿಗೆ ಐಸಿಸ್‌ಜತೆ ನಂಟಿದೆಯೆಂದು ಸಾಬೀತು ಪಡಿಸಿದರೆ ನಾನು ದೇಶವನ್ನು ತೊರೆಯುತ್ತೇನೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದನೆ ಖಂಡಿಸುವ ಸಮ್ಮೇಳನದಲ್ಲಿ ದೇಶದ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದೇನೆ. ನನಗೆ ಐಸಿಸ್ ಜತೆ ನಂಟಿದೆಯಂದು ಸಾರ್ವಜನಿಕರಿಗೆ ತಪ್ಪು ಸಂದೇಶವನ್ನು ಯತ್ನಾಳ್ ನೀಡುತ್ತಿದ್ದಾರೆ.
ಇದನ್ನೂ ಓದಿ | CM Siddaramaiah: ಮುಸ್ಲಿಂ ಸಮಾವೇಶದಲ್ಲಿ ಸಿಎಂ ಪಕ್ಕ ಕುಳಿತಿದ್ದ ಐಸಿಸ್ ಸಂಪರ್ಕಿತ; ಸಾಕ್ಷಿ ಕೊಡುವೆನೆಂದ ಯತ್ನಾಳ್
ಮಾಧ್ಯಮದಲ್ಲಿ ಬಿಂಬಿಸುವ ಫೋಟೋಗಳು, ನನ್ನದೆ ಆದಂತಹ ಫೇಸ್‌ಬುಕ್ ಖಾತೆಯಲ್ಲಿರುವ ಫೋಟೋಗಳು, ಹತ್ತು ಹನ್ನೆರಡು ವರ್ಷ ಹಿಂದಿನವು. ಅವು ಇರಾಕ್‌ನ ಪ್ರಸಿದ್ಧ ಮಹಾನ್ ಸೂಫಿ ಮಹೆಬೂಬ ಎ ಸುಭಾನಿ ಗೌಸ ಎ ಆಜಮ ಅವರ ದರ್ಶನಕ್ಕೆ ಹೋಗಿದ್ದ ಸಂದರ್ಭದ ಪೋಟೋಗಳು. ಅವು ದರ್ಗಾದ ಪೀಠಾದಿಪತಿ ಖಾಲೀದ ಜಿಲಾನಿ ಅವರ ಆರ್ಶೀವಚನ ಪಡೆಯುವ ಸಂಧರ್ಭದಲ್ಲಿ ತೆಗೆದಂತಹ ಫೋಟೋಗಳಾಗಿದ್ದು, ಮತ್ತೊಂದು ಫೋಟೋದಲ್ಲಿ ಖಾಲೀದ ಜಿಲಾನಿಯವರ ಅಂಗರಕ್ಷಕ ನನ್ನನ್ನು ಅವರ ಪೀಟಕ್ಕೆ ಕರೆದುಕೊಂಡು ಹೋಗುವ ಸಮಯದಲ್ಲಿ ತೆಗೆದ ಫೋಟೊ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ