ಬೆಂಗಳೂರು: ಟಿಪ್ಪುವಿನ ಕ್ರೌರ್ಯವನ್ನು ಇತಿಹಾಸಕಾರರು ಉದ್ದೇಶಪೂರ್ವಕವಾಗಿ ಮರೆಮಾಚಿದ್ದಾರೆ. ನಾವೀಗ ಆತನ ಕರಾಳ ಮುಖವನ್ನು ಬೆಳಕಿಗೆ ತರಬೇಕಾಗಿದೆ. ನಾನು ಯಾರಿಗೂ ಹೆದರುವುದಿಲ್ಲ ಎಂದು “ಟಿಪ್ಪು ನಿಜ ಕನಸುಗಳುʼ ನಾಟಕ ರಚನೆಕಾರ ಮತ್ತು ರಂಗಾಯಣ ನಿರ್ದೇಶಕರಾದ ಅಡ್ಡಂಡ ಸಿ ಕಾರ್ಯಪ್ಪ ಹೇಳಿದ್ದಾರೆ.
ಟಿಪ್ಪು ನಾಟಕ ಕುರಿತು ಎದ್ದಿರುವ ವಿವಾದದ ಕುರಿತು ವಿಸ್ತಾರ ನ್ಯೂಸ್ ಜತೆ ಮುಕ್ತವಾಗಿ ಮಾತನಾಡಿರುವ ಅವರು, ಟಿಪ್ಪುವಿನ ಬಗ್ಗೆ ಗಿರೀಶ್ ಕಾರ್ನಾಡ್ ನಾಟಕ ಬರೆಯಬಹುದಾದರೆ ನಾನೇಕೆ ಬರೆಯಬಾರದು? ಇದರಲ್ಲಿ ನನ್ನ ವೈಯಕ್ತಿಕ ಅಜೆಂಡಾ ಏನೂ ಇಲ್ಲ. ಟಿಪ್ಪುವಿನ ಬಗ್ಗೆ ಅಸಲಿ ಸಂಗತಿಯನ್ನು ಬರೆಯಲು ನನಗೆ ಯಾವ ಅಂಜಿಕೆಯೂ ಇಲ್ಲ ಎಂದರು.
ಢೋಂಗಿ ಸೆಕ್ಯೂಲರ್ ಸೋಗಿನಲ್ಲಿ ಈ ಹಿಂದಿನ ಇತಿಹಾಸಕಾರರು ಟಿಪ್ಪುವಿನ ಬಗ್ಗೆ ಸುಳ್ಳಿನ ಕತೆಗಳನ್ನು ಪೋಣಿಸಿದ್ದಾರೆ. ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಶುರುವಾಗಿದ್ದೇ 1857ರಲ್ಲಿ. ಹೀಗಿರುವಾಗ ಅದಕ್ಕೂ ಹಿಂದಿದ್ದ ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಆಗುವುದು ಹೇಗೆ? ಆತನ ಹೋರಾಟ ಸ್ವಂತ ಅಧಿಕಾರಕ್ಕೆ ಸೀಮಿತವಾಗಿತ್ತೇ ಹೊರತು ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವುದು ಆಗಿರಲಿಲ್ಲ ಎಂದು ಕಾರ್ಯಪ್ಪ ವಾದಿಸಿದರು.
ಉತ್ತರ ಭಾರತವನ್ನು ಮುಸ್ಲಿಮರು ಆಳುತ್ತಿದ್ದಾರೆ. ದಕ್ಷಿಣ ಭಾರತವನ್ನು ತಾನು ಆಳಬೇಕು. ಉತ್ತರ ಭಾರತದ ಮುಸ್ಲಿಂ ದೊರೆಗಳ ಜತೆ ಸೇರಿ ಇಡೀ ಭಾರತವನ್ನು ಇಸ್ಲಾಂಮಯಗೊಳಿಸಬೇಕು ಎನ್ನುವುದು ಟಿಪ್ಪುವಿನ ಹುನ್ನಾರವಾಗಿತ್ತು. ಇಂಥ ಮತಾಂಧನನ್ನು ನಮ್ಮ ಇತಿಹಾಸಕಾರರು ಜಾತ್ಯತೀತ ಎಂದು ಬಣ್ಣಿಸಿರುವುದು ಹಾಸ್ಯಾಸ್ಪದ ಎಂದು ಕಾರ್ಯಪ್ಪ ವಿವರಿಸಿದರು.
ಟಿಪ್ಪು ಒಬ್ಬ ವೀರನಲ್ಲ, ಮಹಾ ಮೋಸಗಾರ. ಒಡೆಯರ್‌ರನ್ನು ಆತನ ಅಪ್ಪ ವಿಷ ಹಾಕಿ ಕೊಂದು ಅಧಿಕಾರ ಹಿಡಿದ. ಆತನ ಮಗ ಟಿಪ್ಪು ಕೂಡ ಸಹೋದರರನ್ನು ಹತ್ತಿಕ್ಕಿ ಅಧಿಕಾರ ಗಿಟ್ಟಿಸಿದ. ಶ್ರೀರಂಗಪಟ್ಟಣದ ಆಂಜನೇಯ ಸ್ವಾಮಿ ದೇವಸ್ಥಾನ ಒಡೆದು ಮಸೀದಿ ನಿರ್ಮಿಸಿದ. ಅಲ್ಲಿ ಈಗಲೂ ದೇವಾಲಯ ಬಳಿ ಇರುವಂಥ ಪುಷ್ಕರಣಿ ಇದೆ. ಚಿತ್ರದುರ್ಗದ ಉಚ್ಚಮ್ಮನ ದೇವಸ್ಥಾನ ಕೆಡವಿ ಮಸೀದಿ ನಿರ್ಮಿಸಿದ. ಕೊಡಗಿನ ಮೇಲೆ ದಾಳಿ ಸಾವಿರಾರು ಕುಟುಂಬಗಳನ್ನು ಮತಾಂತರ ಮಾಡಿದ. ಯಾರೊ ಒಬ್ಬರ ದ್ವೇಷದ ಕಾರಣ ಸುಮಾರು 700 ಬ್ರಾಹ್ಮಣರನ್ನು ಮರಕ್ಕೆ ನೇಣು ಹಾಕಿದ. ಇಂಥವನು ಜಾತ್ಯತೀತ ಹೇಗಾಗುತ್ತಾನೆ? ಟಿಪ್ಪುವಿನ ಇಂಥ ಕರಾಳ ಕಥನವನ್ನು ಇತಿಹಾಸಕಾರರು ಮುಚ್ಚಿಟ್ಟಿದ್ದೇಕೆ ಎಂದು ಕಾರ್ಯಪ್ಪ ಅವರು ಪ್ರಶ್ನಿಸಿದರು.
ಇದನ್ನೂ ಓದಿ | ಟಿಪ್ಪು ವಿವಾದ | ಗಿರೀಶ್ ಕಾರ್ನಾಡ್ ಬರೆದ ಪುಸ್ತಕದಲ್ಲೇನಿದೆ? ಅದರಲ್ಲಿ ಮಹಾರಾಜರ ಬಗ್ಗೆ ಏನು ಹೇಳಲಾಗಿದೆ?