ಹಾವೇರಿ: ಚರ್ಮ ಗಂಟು ಬೇನೆಯಿಂದ ಮೃತಪಟ್ಟ ಎತ್ತುಗಳಿಗೆ ತಲಾ 30 ಸಾವಿರ ರೂ. ಹಾಗೂ ಹಸುವಿಗೆ ತಲಾ 20 ಸಾವಿರ ರೂ. ಪರಿಹಾರ ನೀಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಂದು ತಿಳಿಸಿದರು. ಗುರುವಾರ ಕೆ.ಎಂ.ಎಫ್ ಹಾಗೂ ಹಾವೇರಿ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ವತಿಯಿಂದ ಆಯೋಜಿಸಿರುವ ಅರಬಗೊಂಡ ಗ್ರಾಮದಲ್ಲಿ ಹಾವೇರಿ ಜಿಲ್ಲಾ ಸಹಕಾರ ಹಾಲು ಒಕ್ಕೂಟದ “ಮೆಗಾ ಡೈರಿ ” (Mega Dairy) ನಿರ್ಮಾಣಕ್ಕೆ ಭೂಮಿ ಪೂಜಾ ಕಾರ್ಯವನ್ನು ನೆರವೇರಿಸಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಹಾಲು ಉತ್ಪಾದನೆ ಹೆಚ್ಚಾಗಲು ಹಣ ಹೂಡಿಕೆ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ದೇಶದಲ್ಲಿಯೇ ಪ್ರಥಮ ಬಾರಿಗೆ ಕರ್ನಾಟಕದಲ್ಲಿ ಹಾಲು ಉತ್ಪಾದಕರಿಂದ ಹಾಲು ಉತ್ಪಾದಕರಿಗೋಸ್ಕರ ಕ್ಷೀರ ಸಮೃದ್ಧಿ ಬ್ಯಾಂಕ್ ನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು ಎಂದರು
ಹಾವೇರಿ ಜಿಲ್ಲೆಯ ರಜತ ಮಹೋತ್ಸವವನ್ನು ಸರ್ಕಾರ ಅದ್ದೂರಿಯಾಗಿ ಆಚರಿಸಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ರೈತ ಮಳೆಯನ್ನು ಆಶ್ರಯಿಸುತ್ತಾನೆ. ಹತ್ತು ಹಲವು ಸಮಸ್ಯೆಗಳನ್ನು ರೈತ ಎದುರಿಸುತ್ತಾನೆ. ರೈತರಿಗೆ ಕೊಳವೆ ಬಾವಿ, ಪಂಪ್ ಅಳವಡಿಕೆ, ವಿದ್ಯುತ್ ಸಂಪರ್ಕಗಳಿಗೆ ಧನಸಹಾಯ ನೀಡಲಾಗುವುದು. ಇದರಲ್ಲಿ ಯಾವುದೇ ಮಧ್ಯವರ್ತಿಗಳು, ಗುತ್ತಿಗೆದಾರರ ಹಾವಳಿ ಇರುವುದಿಲ್ಲ. 5 ಲಕ್ಷ ಹೆಚ್ಚಿನ ಸಂಖ್ಯೆಯ ಕಾರ್ಮಿಕರ ಕಲ್ಯಾಣಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಸಹಾಯ, ಮನೆ ನಿರ್ಮಿಸಲಾಗಿದೆ. ದುಡಿಯುವ ವರ್ಗ ದೇಶ ನಿರ್ಮಾಣ ಮಾಡುತ್ತಾರೆ. ದುಡಿಮೆಯೇ ದೊಡ್ಡಪ್ಪ ಎನ್ನುವ ಕಾಲವಿದು. ಪೌರಕಾರ್ಮಿಕರ ನೌಕರಿಯನ್ನು ಖಾಯಂಗೊಳಿಸಲು ತೀರ್ಮಾನಿಸಲಾಗಿದೆ. ಹಾಲು ಒಕ್ಕೂಟದಿಂದ ಸಹಸ್ರಾರು ಹಾಲು ಉತ್ಪಾದಕರಿಗೆ ಅನುಕೂಲವಾಗಲಿ ಎಂದು ಹಾರೈಸಿದರು.
ಪಶು ಆಹಾರ ಘಟಕ
ಪೇಡೆ, ಮೊಸರು, ತುಪ್ಪ ಎಲ್ಲವನ್ನೂ ಉತ್ಪಾದಿಸುವ ಘಟಕದ ಜೊತೆಗೆ ನಮ್ಮ ಹಸುಗಳಿಗೆ ಪಶುಆಹಾರ ಘಟಕವನ್ನೂ ಇಲ್ಲಿಯೇ ನಿರ್ಮಾಣ ಮಾಡಲಾಗುವುದು. ಆಗ ರೈತರಿಗೆ ಕಡಿಮೆ ದರ ದಲ್ಲಿ ಪಶು ಆಹಾರ ನೀಡಿ ಹೆಚ್ಚಿನ ದರದಲ್ಲಿ ಹಾಲು ಮಾರಲು ಅವಕಾಶ ಮಾಡಿಕೊಡುವ ತೀರ್ಮಾನವನ್ನು ಮಾಡಬಹುದಾಗಿದೆ ಎಂದರು.
ಹಾಲು ಉತ್ಪಾದಿಸುವ ರೈತ ಬಾಂಧವರು ಹೋರಾಟ ಹಾಗೂ ಒಗ್ಗಟ್ಟು ಪ್ರದರ್ಶನ ಮಾಡಿ ಸರ್ಕಾರಗಳ ಮೇಲೆ ಪ್ರಭಾವ ಬೀರಿ ಹಾಲು ಒಕ್ಕೂಟ ಮಂಜೂರು ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಧಾರವಾಡ ಸಂಘದಲ್ಲಿ ಹಾವೇರಿ ಜಿಲ್ಲೆ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡುವ ಜಿಲ್ಲೆ. ನಮ್ಮದೇ ಹಾಲು ಒಕ್ಕೂಟವಿದ್ದರೆ, ಹಾಲು ಉತ್ಪಾದನೆಗೆ ಮೌಲ್ಯ ವೃದ್ಧಿಯಾಗಿ, ಹೆಚ್ಚಿನ ಹಾಲು ಉತ್ಪಾದನೆ ಹಾಗೂ ಬೇರೆ ಬೇರೆ ಪದಾರ್ಥಗಳನ್ನು ತಯಾರಿಸುವ ಮೂಲಕ ಹೆಚ್ಚಿನ ಲಾಭವನ್ನು ದೊರೆಯಲು ಪ್ರತ್ಯೇಕ ಹಾಲು ಒಕ್ಕೂಟ ಅವಶ್ಯಕ ಎಂದು ಮನಗಂಡು ಹಾಲು ಒಕ್ಕೂಟವನ್ನು ಹಾಗೂ ಮೆಗಾ ಡೈರಿಯ ಅನುಮೋದನೆ ನೀಡಿ ಅನುದಾನ ಒದಗಿಸಿ ಮೆಗಾ ಡೈರಿಗೆ ಅಡಿಗಲ್ಲು ಹಾಕಲು ಕಾರಣವಾಗಿದೆ ಎಂದರು.
ಹೈನುಗಾರಿಕೆಗೆ ಪ್ರೋತ್ಸಾಹ
ರೈತರ ಆದಾಯ ಹೆಚ್ಚಾದರೆ ದೇಶದ ಆದಾಯವೂ ಹೆಚ್ಚಾಗುತ್ತದೆ. ಪ್ರಧಾನಿ ಮೋದಿಯವರು ಸಂಕಷ್ಟದಲ್ಲಿರುವ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ, ಕೃಷಿ ಸಿಂಚಯಿ ಯೋಜನೆ, ಜಲಾನಯನ ಯೋಜನೆಗಳಿಗೆ ಹಣಕಾಸಿನ ನೆರವು ನೀಡಿದ್ದಾರೆ. ಇದರೊಂದಿಗೆ ರಾಜ್ಯ ಸರ್ಕಾರವೂ 4 ಸಾವಿರ ರೂ.ಗಳನ್ನು ಸೇರಿಸಿ ಒದಗಿಸುತ್ತದೆ. ಒಟ್ಟು 10 ಸಾವಿರ ರೂ.ಗಳು 58 ಲಕ್ಷ ರೈತರಿಗೆ ಕರ್ನಾಟಕದಲ್ಲಿ ಪ್ರತಿ ವರ್ಷ ದೊರೆಯುತ್ತಿದೆ. ರೈತರ ಆದಾಯ ದ್ವಿಗುಣಗೊಳ್ಳುವ ಕಾರ್ಯಕ್ರಮಕ್ಕೆ ಹೈನುಗಾರಿಕೆ ಪೂರಕವಾಗಿದೆ. ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ಕೆಲಸ ಹಾವೇರಿ ಜಿಲ್ಲೆಯಲ್ಲಿ ಆಗುತ್ತಿದೆ ಎಂದರು.
ಔದ್ಯೋಗೀಕರಣಕ್ಕೆ ಮಹತ್ವ
ರೈತರಿಗೆ ವರದಾನವಾಗಿರುವ ಮೆಗಾಡೈರಿ ಇಲ್ಲಿ ಆಗುತ್ತಿದ್ದು, ಹಾವೇರಿಯಲ್ಲಿ ಕೈಗಾರಿಕಾ ಟೌನ್‍ಶಿಪ್ ನಿರ್ಮಾಣವಾಗುತ್ತಿದೆ. ಯುವಕರಿಗೆ ಕೆಲಸ ದೊರೆಯಲು ಹಾವೇರಿಯಲ್ಲಿ ಒಂದು ಸಾವಿರ ಎಕರೆ ಪಡೆದು ಕೈಗಾರಿಕಾ ಪ್ರದೇಶ ನಿರ್ಮಿಸಲು ತೀರ್ಮಾನಿಸಲಾಗಿದೆ. ಹಾವೇರಿ ಜಿಲ್ಲೆಯಾಗಿ 25 ವರ್ಷಗಳಾಗಿವೆ. ಇಲ್ಲಿ ಔದ್ಯೋಗೀಕರಣವಾಗಬೇಕು. ವೈದ್ಯಕೀಯ, ಕಾನೂನು ಕಾಲೇಜು, ತೋಟಗಾರಿಕೆ, ಕೃಷಿ ಕಾಲೇಜುಗಳು ಸ್ಥಾಪನೆಯಾಗಿವೆ. ರಾಣೇಬೆನ್ನೂರು, ಹಿರೇಕೆರೂರು, ಹಾನಗಲ್, ಶಿಗ್ಗಾಂವಿ, ಸವಣೂರು ತಾಲ್ಲೂಕುಗಳಲ್ಲಿ ನೀರಾವರಿ ಯೋಜನೆಗಳನ್ನು ಇದೇ ವರ್ಷ ಪೂರ್ಣ ಮಾಡಿ ರೈತರಿಗೆ ಸಮರ್ಪಿಸಲಾಗುವುದು. ಭದ್ರಾ ಮೇಲ್ದಂಡೆ ಯೋಜನೆ 2002 ರಲ್ಲಿ ಮುಗಿಯಬೇಕಿತ್ತು. ಆದರೆ 2008-09 ರಲ್ಲಿ ನೀರಾವರಿ ಸಚಿವನಾಗಿ ಸವಾಲುಗಳನ್ನು ಮೆಟ್ಟಿ ಭದ್ರಾ ನೀರನ್ನು ಹಾವೇರಿ ಜಿಲ್ಲೆಗೆ ಹರಿಸಿದ್ದು ನಮ್ಮ ಸರ್ಕಾರ. ಏತ ನೀರಾವರಿ ಯೋಜನೆಗಳನ್ನು 4-5 ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು. ಕೃಷಿ, ನೀರಾವರಿ, ಔದ್ಯೋಗೀಕರಣ, ಶಿಕ್ಷಣ ಎಲ್ಲಾ ರಂಗಗಳಲ್ಲಿ ಹಾವೇರಿ ಮುಂದೆ ಬರಬೇಕೆಂಬ ಸದಿಚ್ಛೆ ನಮ್ಮದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಚಿವರಾದ ಶಿವರಾಂ ಹೆಬ್ಬಾರ್, ಬಿ.ಸಿ. ಪಾಟೀಲ್, ಸಂಸದ ಶಿವಕುಮಾರ್ ಉದಾಸಿ, ಶಾಸಕ ನೆಹರೂ ಓಲೇಕಾರ್,ಕೆ.ಎಂ.ಎಫ್ ಅಧಿಕಾರಿಗಳು ಹಾಗೂ ಪದಾಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ |ಜಾನುವಾರುಗಳಿಗೆ ಕಾಡುತ್ತಿದೆ ಚರ್ಮ, ಗಂಟು ರೋಗ: ಅನ್ನದಾತರಿಗೆ ಮತ್ತೊಂದು ಸಂಕಷ್ಟ