ಬೆಳಗಾವಿ: ಪಂಚಮಸಾಲಿಗಳ ಮೀಸಲಾತಿ ಹೋರಾಟ (Panchamasali Reservation) ಒಂದು ನಿರ್ಣಾಯಕ ಘಟ್ಟ ತಲುಪಿದಂತೆ ಕಾಣುತ್ತಿದೆ. ಪಂಚಮಸಾಲಿಗಳನ್ನು ೨ಎ ವರ್ಗಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿ ಕಳೆದ ಒಂದು ವರ್ಷದಿಂದಲೇ ಹೋರಾಟ ತೀವ್ರವಾಗಿ ನಡೆಯುತ್ತಿದ್ದು, ಹಲವು ಗಡುವುಗಳನ್ನು ದಾಟಿ ಬಂದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಂತಿಮವಾಗಿ ಡಿ.೧೯ರ ಗಡುವನ್ನು ನೀಡಿದ್ದು ಅದು ಕೂಡಾ ಪಾಲನೆಯಾಗಿಲ್ಲ ಎಂದು ಪಂಚಮಸಾಲಿ ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ಕೂಡಲ ಸಂಗಮ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಅವರು ಸಿಟ್ಟಿಗೆದ್ದಿದ್ದಾರೆ. ಈ ನಿಟ್ಟಿನಲ್ಲಿ ಗುರುವಾರ ಬೆಳಗಾವಿಯಲ್ಲಿ ಪಂಚಮಸಾಲಿ ವಿರಾಟ್ ಸಮಾವೇಶವನ್ನು ಆಯೋಜಿಸಿದೆ.
ಗುರುವಾರ ಬೆಳಗಾವಿಯ ಸುವರ್ಣ ಸೌಧ ಬಳಿಯ ರಾಘವೇಂದ್ರ ಬಡಾವಣೆ ಪ್ರದೇಶದಲ್ಲಿ ಬೃಹತ್ ಸಮಾವೇಶ ಅಯೋಜಿಸಲಾಗಿದೆ ಎಂದು ಕೂಡಲಸಂಗಮ ಪೀಠದ ಶ್ರೀ ಜಯ ಮೃತುಂಜಯ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ʻʻಸಮುದಾಯಕ್ಕೆ ಮೀಸಲಾತಿ ಕಲ್ಪಿಸುವುದಕ್ಕಾಗಿ ಶ್ರೀಪೀಠ ಬಿಟ್ಟು ಕಳೆದ ಎರಡು ವರ್ಷದಿಂದ ಹೋರಾಟ ಮಾಡಿಕೊಂಡು ಬಂದಿದ್ದೇವೆ. ನಮ್ಮ ಹೋರಾಟ ಈಗ ತಾರ್ಕಿಕ ಅಂತ್ಯಕ್ಕೆ ಬಂದಿದೆ. ನಾಳೆ (ಡಿಸೆಂಬರ್ ೨೨) ನಮಗೆ ಜಯ ಸಿಗುವ ಸಾಧ್ಯತೆ ಇದೆʼʼ ಎಂದು ಅವರು ಹೇಳಿದ್ದಾರೆ.
ʻʻಕೆಲವು ದಿನಗಳ ಹಿಂದೆ ಮುಖ್ಯಮಂತ್ರಿಗಳ ಮನೆಯಲ್ಲಿ ಸಭೆ ನಡೆಸಲಾಗಿತ್ತು. ಆಗ ನೀವು ಬೆಂಗಳೂರಿಗೆ ಬಂದು ಹೋರಾಟ ಮಾಡೋದು ಬೇಡ, ಡಿಸೆಂಬರ್ 19ರೊಳಗೆ ಮೀಸಲಾತಿ ನೀಡುವ ಗಡುವು ಕೊಟ್ಟಿದ್ದರು. ನಾಳೆ (ಡಿಸೆಂಬರ್ ೨೨) ಬೆಳಗಾವಿಯಲ್ಲಿ 25 ಲಕ್ಷ ಜನರೊಂದಿಗೆ ಬೃಹತ್ ಸಮಾವೇಶ ನಡೆಯಲಿದೆ. ಒಂದು ವೇಳೆ ಮುಖ್ಯಮಂತ್ರಿಗಳು ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕೊಟ್ಟಿರೆ ಇದೇ ವೇದಿಕೆಯಲ್ಲಿ ಮುಖ್ಯಮಂತ್ರಿಗಳಿಗೆ ಸನ್ಮಾನ ನಡೆಯಲಿದೆ. ಡೈಮಂಡ್ ಕಲ್ಲು ಸಕ್ಕರೆಯ ತುಲಾಭಾರ ಮಾಡುತ್ತೇವೆ. ವಿಜಯಪುರ ಪೇಟ ತೊಡಿಸಿ ಸನ್ಮಾನ ಮಾಡುತ್ತೇವೆ. ಅದೇ ಹೊತ್ತಿಗೆ ಮೀಸಲಾತಿ ಘೋಷಣೆ ಮಾಡದೆ ಹೋದರೆ ಹರಹರ ಮಹಾದೇವ ಎಂದು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ಮೀಸಲಾತಿ ಸಿಗುವವರೆಗೆ ಸೌಧದ ಎದುರು ಧರಣಿ ಕುಳಿತುಕೊಳ್ಳುತ್ತೇವೆʼʼ ಎಂದು ಸ್ವಾಮೀಜಿ ಹೇಳಿದರು.
ಮೀಸಲಾತಿ ಕೊಟ್ಟರೆ ಸನ್ಮಾನ ಇಲ್ಲದಿದ್ದರೆ ಅಪಮಾನ
ಪಂಚಮಸಾಲಿ ಮೀಸಲಾತಿ ಹೋರಾಟದ ಮುಂಚೂಣಿಯಲ್ಲಿರುವ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್, ನಾಳೆ ಸಮಾವೇಶ ನಡೆಯುವ ಮುನ್ನ ನಮಗೆ ಮೀಸಲಾತಿ ಸಿಗುವ ವಿಶ್ವಾಸವಿದೆ. ಮೀಸಲಾತಿ ಕೊಟ್ಟರೆ ಸನ್ಮಾನದ ಜೊತೆ ಗೌರವ, ಇಲ್ಲ ಅಂದ್ರೆ ಅಪಮಾನ ಎಂದರು.
ʻʻಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೇ ಡಿ.19ರ ಗಡುವು ಕೊಟ್ಟಿದ್ದರು. ಡಿ. 19ರ ಒಳಗೆ ಹಿಂದುಳಿದ ವರ್ಗಗಳ ಆಯೋಗದ ವರದಿ ತರೆಸಿಕೊಳ್ಳುತ್ತೇನೆ ಅಂದಿದ್ದರು. ಅವರೇ ಕೊಟ್ಟ ಮಾತನ್ನು ತಿರುಚಿದ್ದಕ್ಕೆ ವಿಷಾದವಿದೆ. ನಿರಾಸೆ ಆದರೂ ಶಾಸಕ ಯತ್ನಾಳ ಮಾತು ಕೇಳಿ ಸರ್ಕಾರದ ಮೇಲೆ ವಿಶ್ವಾಸ ಉಳಿಸಿಕೊಂಡಿದ್ದೇವೆ. ಬೊಮ್ಮಾಯಿ ಅವರ ಮೇಲೆ ವಿಶ್ವಾಸ ಇಟ್ಟುಕೊಂಡಿದ್ದೇವೆ. ಈ ಸಮಾಜದ ಋಣವನ್ನ ತೀರಿಸುತ್ತಾರೆ ಅನ್ನೋ ಭರವಸೆಯಲ್ಲಿ ನಾವಿದ್ದೇವೆ. ಮೀಸಲಾತಿ ಕೊಟ್ಟರೆ ಸನ್ಮಾನ ಇಲ್ಲವಾದರೆ ಅವಮಾನʼʼ ಎಂದು ಹೇಳಿದರು ಕಾಶಪ್ಪನವರ್.
ಸಮಾವೇಶ ವಿಫಲಕ್ಕೆ ಸಂಚು?
ʻʻನಾಳೆ ಸಮಾವೇಶಕ್ಕೆ ಜನರು ಬಾರದಂತೆ ತಡೆಯುವ ಪ್ರಯತ್ನ ನಡೆಯುತ್ತಿರುವ ಮಾಹಿತಿ ಬಂದಿದೆ. ಪೊಲೀಸರು ಟೋಲ್ ಬ್ಲಾಕ್ ಮಾಡಲಿದ್ದಾರೆ ಎನ್ನುವ ಸುದ್ದಿ ಇದೆ. ಸಮಾವೇಶಕ್ಕೆ ಹೋಗಬೇಡಿ ಎಂದು ಕೆಲವರು ಹೇಳುತ್ತಿದ್ದಾರಂತೆ. ಅದರೆ, ನೆನಪಿರಲಿ, ಯಾರನ್ನಾದರೂ ಅಡ್ಡಿಪಡಿಸಿದರೆ ಜನರು ಸಹನೆಯನ್ನು ಕಳೆದುಕೊಂಡು ಉಗ್ರ ರೂಪಕ್ಕೆ ತಿರುಗುವ ಸಾಧ್ಯತೆ ಇದೆ. ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡಿದರೆ, ಏನಾದ್ರೂ ಅನಾಹುತ ಆದರೆ ಅದಕ್ಕೆ ಸರ್ಕಾರವೇ ಹೊಣೆʼʼ ಎಂದು ಕಾಶಪ್ಪನವರ್ ಎಚ್ಚರಿಕೆ ನೀಡಿದ್ದಾರೆ.
ಹಿಂದೆ ಡಿಸಿಎಂ ಆಗಿದ್ದವರಿಂದಲೇ ಅಡ್ಡಿ?
ʻʻಹಿಂದೆ ಡಿಸಿಎಂ ಆಗಿದ್ದವರು ಈಗ ಮೀಸಲಾತಿಗೆ ಅಡ್ಡಿ ಪಡೆಸುತ್ತಿದ್ದಾರೆ. ಸಮಯ ಬಂದಾಗ ಅವರು ಯಾರು ಅಂತ ಹೇಳ್ತೀನಿʼʼ ಎಂದ ಕಾಶಪ್ಪನವರು. ʻʻಮೀಸಲಾತಿ ಕೊಡದೇ ಎಲ್ಲಿ ಹೋಗ್ತಾರೆ, ಹೋಗಲಿ ನೋಡೋಣ. ಮುಂದೆ ಕೆಲವೇ ತಿಂಗಳಲ್ಲಿ ಚುನಾವಣೆ ಇದೆʼʼ ಎಂದು ಎಚ್ಚರಿಕೆ ನೀಡಿದರು ಕಾಶಪ್ಪನವರ್.
ಇದನ್ನೂ ಓದಿ | Panchamasali Reservation | ಸವದತ್ತಿಯಲ್ಲಿ ಬೃಹತ್ ಪಂಚಮಸಾಲಿ ಪಾದಯಾತ್ರೆಗೆ ಚಾಲನೆ; ಸುವರ್ಣಸೌಧ ಮುತ್ತಿಗೆಗೆ ನಿರ್ಧಾರ