Site icon Vistara News

Hindu Vs Hindutva : ಹಿಂದುತ್ವ ನಂಬಲ್ಲ ಎಂದರೆ ನೀನು ಮುಸಲ್ಮಾನನಾ?; ಸಿದ್ದರಾಮಯ್ಯಗೆ ಈಶ್ವರಪ್ಪ ತರಾಟೆ

kseshwarappa siddaramaih ಕೆ.ಎಸ್.‌ ಈಶ್ವರಪ್ಪ ಸಿದ್ದರಾಮಯ್ಯ

ಶಿವಮೊಗ್ಗ: ʻʻನಾನು ಹಿಂದು. ಆದರೆ, ಹಿಂದುತ್ವ ನಂಬಲ್ಲ ಅಂತ ಹೇಗೆ ಹೇಳ್ತಾರೆ? ನಾನು ಮುಸಲ್ಮಾನ. ಮುಸಲ್ಮಾನತ್ವವನ್ನು ನಂಬಲ್ಲ ಎಂದು ಹೇಳಲಿ ನೋಡೋಣ. ಹಿಂದುತ್ವ ನಂಬಲ್ಲ ಎಂದರೆ ನೀನು ಮುಸಲ್ಮಾನನಾ?ʼ ಹೀಗೆಂದು ಖಾರವಾಗಿ ಪ್ರಶ್ನಿಸಿದ್ದಾರೆ (Hindu Vs Hindutva) ಮಾಜಿ ಸಚಿವ ಕೆಎಸ್ ಈಶ್ವರಪ್ಪ.

ಶಿವಮೊಗ್ಗದಲ್ಲಿ ಸಿದ್ದರಾಮಯ್ಯ ವಿರುದ್ದ ಹರಿಹಾಯ್ದ ಕೆ ಎಸ್ ಈಶ್ವರಪ್ಪ ಅವರು, ʻʻಸೈದ್ಧಾಂತಿಕವಾಗಿ ಅವರ ವಿಚಾರ ಏನು ಅಂತ ಗೊತ್ತಾಗುತ್ತಿಲ್ಲ. ಸುಪ್ರೀಂಕೋರ್ಟ್‌ ಹಿಂದುತ್ವ ಎನ್ನುವ ಪದದಲ್ಲಿ ಎಲ್ಲ ಜಾತಿ ಧರ್ಮಗಳು ಸೇರಿವೆ ಎಂದು ಹೇಳಿದೆ. ಹಾಗಾದರೆ ಸಿದ್ದರಾಮಯ್ಯನವರು ಸುಪ್ರೀಂ ಕೋರ್ಟ್ ಮಾತನ್ನು ಮೀರುತ್ತಾರಾ?ʼʼ ಎಂದು ಅವರು ಕೇಳಿದರು.

ಕಾನೂನನ್ನು ಗೌರವಿಸುತ್ತೇನೆ ಎಂದು ಹೇಳಲಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರಿಗೆ ಇ.ಡಿ‌ ನೋಟಿಸ್ ನೀಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಡಿ.ಕೆ. ಶಿವಕುಮಾರ್‌ ಪ್ರತಿ ಸಲವೂ ಇ.ಡಿ ನೋಟಿಸ್ ಕೊಡ್ತಾ ಇದಾರೆ, ಟಾರ್ಚರ್ ಕೊಡ್ತಾ ಇದಾರೆ ಅಂತ ಗೊಣಗಾಡುವುದನ್ನು ಬಿಡಲಿ. ಕಾನೂನಿಗೆ ಗೌರವ ಕೊಡ್ತೀನಿ ಅಂತ ಒಂದು ಮಾತನ್ನು ಹೇಳಲಿ ನೋಡೋಣ. ಇ.ಡಿ, ಸಿಬಿಐ ಏನ್ ಮಾಡುತ್ತೆ ಅಂತ ಹೇಳೋದಕ್ಕಿಂತ, ಅದನ್ನು ಎದುರಿಸುತ್ತೇನೆ ಎಂದು ಹೇಳಲಿʼʼ ಎಂದರು.

ಜಾತಿಯ ವಿಷ ಬೀಜ ಬಿತ್ತುತ್ತಿರುವ ಕಾಂಗ್ರೆಸ್‌, ಜೆಡಿಎಸ್‌

ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ಪ್ರಸ್ತಾಪಿಸಿದ ಬ್ರಾಹ್ಮಣ ಸಿಎಂ ವಿಚಾರಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ ಕಾಂಗ್ರೆಸ್‌ ಮತ್ತು ಜೆಡಿಎಸ್‌ಗಳು ಜಾತಿಯ ವಿಷ ಬೀಜ ಬಿತ್ತುತ್ತಿವೆ ಎಂದರು.

ʻʻಯಾರನ್ನು ಸಿಎಂ ಮಾಡಬೇಕು ಎನ್ನುವುದು ಶಾಸಕಾಂಗಕ್ಕೆ, ಹೈಕಮಾಂಡ್ ಗೆ ಬಿಟ್ಟ ವಿಚಾರ. ಯಾವನ್ ಹೇಳಿದ ಇವರಿಗೆ ಅವರನ್ನೇ ಸಿಎಂ ಮಾಡ್ತೀವಿ ಅಂತ. ಬಾಯಿಗೆ ಬಂದಂತೆ ಮಾತನಾಡುವುದು ಸಿಎಂ‌ ಆಗಿದ್ದ ಕುಮಾರಸ್ವಾಮಿ ಅವರಿಗೆ ಶೋಭೆಯಲ್ಲʼʼ ಎಂದರು.

ʻʻಬಿಜೆಪಿಗೆ ಈ ಬಾರಿ ಪೂರ್ಣ ಬಹುಮತ ಬರುತ್ತದೆ ಅಂತ ಕುಮಾರಸ್ವಾಮಿಗೆ ಗೊತ್ತಿದೆ. ಅದನ್ನಾದರೂ ಜನರ ಮುಂದೆ ಹೇಳಲಿʼʼ ಎಂದರು ಈಶ್ವರಪ್ಪ.

ಇದನ್ನೂ ಓದಿ : Hindu Vs Hindutva : ನಾನು ಹಿಂದು ಧರ್ಮದ ಬಗ್ಗೆ ಮಾತನಾಡಿಯೇ ಇಲ್ಲ, ಅದಕ್ಕೆ ನನ್ನ ವಿರೋಧವೇ ಇಲ್ಲ: ಸಿದ್ದರಾಮಯ್ಯ ಯು ಟರ್ನ್

Exit mobile version