Site icon Vistara News

Lok Sabha Election: ಇಂದೇ ಎಲೆಕ್ಷನ್ ನಡೆದ್ರೆ ಎನ್‌ಡಿಎಗೆ ಅಧಿಕಾರ, ‘ಇಂಡಿಯಾ ಕೂಟ’ಕ್ಕೆ ಸೋಲು! ಯಾರಿಗೆ ಎಷ್ಟು ಸೀಟು?

Modi and Rahul

ನವದೆಹಲಿ: 2024ರ ಲೋಕಸಭೆ ಚುನಾವಣೆಗೆ (Lok Sabha Election 2024) ಇನ್ನು 9ರಿಂದ 10 ತಿಂಗಳಷ್ಟೇ ಬಾಕಿ ಉಳಿದಿವೆ. ಈ ಹಂತದಲ್ಲಿ, ಮತದಾರರು ಸಂಪೂರ್ಣವಾಗಿ ಯಾರ ಕಡೆಗೆ ವಾಲಿದ್ದಾರೆಂದು ಹೇಳುವುದು ಕಷ್ಟ. ಆದರೂ, ಅವರು ಯಾರ ಕಡೆಗೆ ನೋಡುತ್ತಿದ್ದಾರೆಂಬ ಸಂಗತಿಯನ್ನು ಸಮೀಕ್ಷೆ ಮೂಲಕ ಕಂಡುಕೊಳ್ಳಬಹುದು. ಇಂಡಿಯಾ ಟುಡೇ- ಸಿವೋಟರ್ ಕೈಗೊಂಡಿರುವ ಮೂಡ್ ಆಫ್ ನೇಷನ್ ಸಮೀಕ್ಷೆ (India Today-CVoter Mood of the Nation survey) ಪ್ರಕಾರ, ಇಂದೇ ಲೋಕಸಭೆ ಚುನಾವಣೆ (Lok Sabha Election) ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎ (NDA) ಮೂರನೇ ಬಾರಿಗೆ ಅಧಿಕಾರಕ್ಕೇರುವುದು ಪಕ್ಕಾ. ಬಿಜೆಪಿಯನ್ನು ಸೋಲಿಸುವುದಕ್ಕಾಗಿ ‘ಇಂಡಿಯಾ’ ಹೆಸರಿನಡಿ ಒಂದಾಗಿರುವ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಕೂಟ (India Bloc) ಈ ಬಾರಿಯೂ ನಿರಾಸೆ. ಇನ್ನು, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದ ಕಾಂಗ್ರೆಸ್ (Congress Party) ಅದೇ ಗೆಲುವನ್ನು ಲೋಕಸಭೆ ಚುನಾವಣೆಯಲ್ಲಿ ಮುಂದುವರಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಇಂದೇ ಚುನಾವಣೆ ನಡೆದರೆ, ರಾಜ್ಯದಲ್ಲಿ ಬಿಜೆಪಿ 23 ಮತ್ತು ಕಾಂಗ್ರೆಸ್ 5 ಸ್ಥಾನಗಳನ್ನು ಗೆಲ್ಲಲಿದೆ. ಅದೇ ರೀತಿ, ದೇಶದಲ್ಲಿ ಎನ್‌ಡಿಎ 306, ಇಂಡಿಯಾ 193 ಹಾಗೂ ಇತರರು 44 ಲೋಕಸಭೆ ಕ್ಷೇತ್ರಗಳನ್ನು ಗೆಲ್ಲಲಿದ್ದಾರೆ.

ಮೋದಿ ಎಲ್ಲರಿಗಿಂತ ಮುಂದೆ

ಇಂಡಿಯು ಟುಡೇ ಸಿವೋಟರ್ ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜನಪ್ರಿಯತೆಯಲ್ಲಿ ಎಲ್ಲ ನಾಯಕರಿಗಿಂತ ಮುಂದೆ ಇದ್ದಾರೆ. ಶೇ.52 ಜನರು ಮೋದಿ ಮೂರನೇ ಅವಧಿಗೆ ಪ್ರಧಾನಿಯಾಗಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಶೇ.63 ಜನರು ನರೇಂದ್ರ ಮೋದಿ ಅವರ ಪ್ರಧಾನಿಯಾಗಿ ನೀಡಿದ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಕೆಲವು ತಿಂಗಳ ಹಿಂದೆ ನಡೆಸಿದ ಸಮೀಕ್ಷೆಗೆ ಹೋಲಿಸಿದರೆ ಆಗಸ್ಟ್ ತಿಂಗಳ ಸಮೀಕ್ಷೆಯಲ್ಲಿ ಕೊಂಚ ಇಳಿಕೆಯಾಗಿದೆ. ಈ ಹಿಂದೆ ಶೇ.72 ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇನ್ನು ಇಂಡಿಯಾ ಕೂಟವನ್ನು ಮುನ್ನಡೆಸಲು ರಾಹುಲ್ ಗಾಂಧಿ ಸೂಕ್ತ ಎಂಬ ಅಭಿಪ್ರಾಯ ಈ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.

ರಾಜ್ಯದಲ್ಲಿ ಈಗ್ಲೇ ಎಲೆಕ್ಷನ್ ನಡೆದ್ರೆ ಯಾರಿಗೆ ಎಷ್ಟು ಸೀಟು?

ಕರ್ನಾಟಕದಲ್ಲಿ ಎನ್‌ಡಿಎ 23 ಮತ್ತು ಇಂಡಿಯಾ ಕೂಟ 5 ಲೋಕಸಭಾ ಸ್ಥಾನಗಳನ್ನು ಗೆಲ್ಲಲಿದೆ. ಎನ್‌ಡಿಎ ಶೇ.44 ಹಾಗೂ ಇಂಡಿಯಾ ಕೂಟ ಶೇ.34 ಮತ್ತು ಇತರರ ಶೇ.22 ಮತಗಳನ್ನು ಪಡೆಯಲಿದ್ದಾರೆ. ಕರ್ನಾಟಕದಲ್ಲಿ ಒಟ್ಟು 28 ಲೋಕಸಭೆ ಸ್ಥಾನಗಳಿದ್ದು, 2019ರ ಲೋಕಸಭೆಯಲ್ಲಿ ಬಿಜೆಪಿ ಭರ್ಜರಿ 25 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟರೆ, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಗೆದ್ದಿದ್ದರು.

ಯಾವ ಕೂಟಕ್ಕೆ ಎಷ್ಟು ಸೀಟು?

ಇಂಡಿಯಾ ಟುಡೇ-ಸಿವೋಟರ್ ಮೂಡ್ ಆಫ್ ನೇಷನ್ ಪ್ರಕಾರ, ಇಂದೇ ಲೋಕಸಭೆ ಎಲೆಕ್ಷನ್ ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎ 306 ಕ್ಷೇತ್ರಗಳನ್ನು ಗೆದ್ದುಕೊಂಡು, ಮೂರನೇ ಬಾರಿಗೆ ಅಧಿಕಾರಕ್ಕೇರಲಿದೆ. ಹೊಸದಾಗಿ ರಚನೆಯಾಗಿರುವ ಪ್ರತಿಪಕ್ಷಗಳ ಕೂಟ ಇಂಡಿಯಾ 193 ಕ್ಷೇತ್ರಗಳನ್ನು ಗೆದ್ದುಕೊಳ್ಳಲಿದೆ. ಆದರೆ, ಅಧಿಕಾರಕ್ಕೇರಲು ಈ ಸೀಟುಗಳು ಸಾಕಾಗುವುದಿಲ್ಲ. ಇನ್ನು ಇತರರು ಅಂದರೆ ಯಾವುದೇ ಕೂಟಕ್ಕೆ ಸೇರದ ಹಾಗೂ ಸ್ವತಂತ್ರ ಅಭ್ಯರ್ಥಿಗಳು 44 ಸ್ಥಾನಗಳನ್ನು ಗೆಲ್ಲಲಿದ್ದಾರೆ.

ಇನ್ನು ಎನ್‌ಡಿಎ ಶೇ.43 ಹಾಗೂ ಇಂಡಿಯಾ ಕೂಟ ಶೇ.41 ಮತ್ತು ಇತರರು ಶೇ.16ರಷ್ಟು ಮತಗಳನ್ನು ಪಡೆಯಲಿದ್ದಾರೆ. ಎನ್‌ಡಿಎ ಹಾಗೂ ಇಂಡಿಯಾ ಕೂಟ ಮಧ್ಯೆ ಮತ ಪ್ರಮಾಣದಲ್ಲಿ ಶೇ.2ರಿಂದ 3ರಷ್ಟೇ ವ್ಯತ್ಯಾಸವಿದ್ದರೂ, ಇಂಡಿಯಾ ಕೂಟಕ್ಕೆ ಹೆಚ್ಚಿನ ಸೀಟುಗಳನ್ನು ಗೆಲ್ಲಲು ಸಾಧ್ಯವಾಗುವುದಿಲ್ಲ.

ಈ ಸುದ್ದಿಯನ್ನೂ ಓದಿ: Congress Meeting : ಲೋಕಸಭೆ ಚುನಾವಣೆಗೆ ಬ್ಲೂಪ್ರಿಂಟ್‌ ರೆಡಿ, 20 ಸ್ಥಾನ ಗೆಲ್ತೀವಿ ಎಂದು ವರಿಷ್ಠರಿಗೆ ಕಾಂಗ್ರೆಸ್‌ ಅಭಯ

ಕಾಂಗ್ರೆಸ್, ಬಿಜೆಪಿಗೆ ಎಷ್ಟು ಸೀಟು?

ಇಂದೇ ಲೋಕಸಭೆ ಚುನಾವಣೆ ನಡೆದರೆ, ಬಿಜೆಪಿ 287 ಸ್ಥಾನಗಳನ್ನು ಗೆಲ್ಲಲಿದ್ದರೆ, ಕಾಂಗ್ರೆಸ್ 74 ಕ್ಷೇತ್ರಗಳನ್ನು ಗೆಲ್ಲಲಿದೆ ಮತ್ತು 182 ಸ್ಥಾನಗಳನ್ನು ಗೆಲ್ಲಬಹುದು ಎಂದು ಇಂಡಿಯಾ ಟುಡೇ- ಸಿವೋಟರ್ ಮೂಡ್ ಆಫ್ ನೇಷನ್ ಸಮೀಕ್ಷೆ ಹೇಳಿದೆ. 2019ರ ಲೋಕಸಭೆ ಚುನಾವಣೆಗೆ ಹೋಲಿಸಿದರೆ, ಬಿಜೆಪಿ ಸೀಟುಗಳ ಸಂಖ್ಯೆ ಕಡಿಮೆಯಾಗಿ ಕಾಂಗ್ರೆಸ್ ಪಕ್ಷದ ಗೆಲುವಿನ ಪ್ರಮಾಣ ಹೆಚ್ಚಾಗುವ ಮುನ್ಸೂಚನೆಯನ್ನು ಈ ಸಮೀಕ್ಷೆ ಹೊರ ಹಾಕಿದೆ.

Exit mobile version