Site icon Vistara News

ಮರಾಠ ಸಮುದಾಯದ ಮಹನೀಯರ ಸಮಾಧಿ, ಐತಿಹಾಸಿಕ ಕುರುಹು ಅಭಿವೃದ್ಧಿಗೆ ₹10 ಕೋಟಿ; ಸಿಎಂ

cm bommai program

ಬೆಂಗಳೂರು: ಮರಾಠ ಸಮುದಾಯದ ಮಹನೀಯರ ಸಮಾಧಿಗಳು, ಐತಿಹಾಸಿಕ ಕುರುಹುಗಳ ಅಭಿವೃದ್ಧಿಗಾಗಿ ಡಿಪಿಆರ್ ಸಿದ್ಧಪಡಿಸಲು 10 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ಈ ಮೂಲಕ ಮರಾಠ ಸಮುದಾಯದ ಗೌರವ, ಅಸ್ಮಿತೆಯನ್ನು ಉಳಿಸಲಾಗುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಅರಮನೆಯ ತ್ರಿಪುರ ವಾಸಿನಿಯಲ್ಲಿ ಮಂಗಳವಾರ (ಜು.19) ಮರಾಠ ಅಭಿವೃದ್ಧಿ ನಿಗಮ ಹಾಗೂ ಫಲಾನುಭವಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮರಾಠ ಸಮುದಾಯದ 3 ಬಿ ಇಂದ 2 ಎ ಮೀಸಲಾತಿಯ ಬೇಡಿಕೆಗೆ ಸ್ಪಂದಿಸಿ, ಸಮುದಾಯಕ್ಕೆ ನ್ಯಾಯ ಒದಗಿಸುವ ಚಿಂತನೆ ಸರ್ಕಾರಕ್ಕಿದೆ. ಪ್ರಧಾನಿ ಮೋದಿಯವರು ರಾಜ್ಯದ ಹಿಂದುಳಿದ ವರ್ಗದವರಿಗೆ ಸಂವಿಧಾನಾತ್ಮಕ ಸ್ಥಾನಮಾನವನ್ನು ದೊರಕಿಸಿ ಕೊಟ್ಟಿದ್ದಾರೆ. ರಾಜ್ಯದ ಹಿಂದುಳಿದ ವರ್ಗಗಳ ಆಯೋಗದಿಂದ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು. ಮೀಸಲಾತಿಗಾಗಿ ಬೇಡಿಕೆ ಇಟ್ಟಿರುವ ಎಲ್ಲ ಸಮುದಾಯಗಳಿಗೆ ನ್ಯಾಯ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

ಮರಾಠ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಭಾಗಿ

ಗಡಿಭಾಗದ ಗ್ರಾಮ ಪಂಚಾಯಿತಿಗಳ ಸಮಗ್ರ ಅಭಿವೃದ್ಧಿ

ಕಾರವಾರದಿಂದ ಬೀದರ್‌ವರೆಗೂ ಬಹುತೇಕ ಗಡಿ ಭಾಗಗಳಲ್ಲಿ ಮರಾಠಾ ಸಮುದಾಯ ನೆಲೆಸಿದೆ. ಈ ಗಡಿ ಭಾಗಗಳ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಗಡಿಭಾಗದ ಪ್ರತಿಯೊಂದ ಗ್ರಾಮ ಪಂಚಾಯಿತಿಗಳ ಸಮಗ್ರ ಅಭಿವೃದ್ಧಿ ಮಾಡುವ ತೀರ್ಮಾನವನ್ನು ಆಯವ್ಯಯದಲ್ಲಿ ಮಾಡಲಾಗಿದೆ. ಗಡಿಭಾಗದ ಸಂಪರ್ಕ ರಸ್ತೆ ಕಾಮಗಾರಿಗಳನ್ನು , ಗಡಿ ಪ್ರಾಧಿಕಾರಕ್ಕೆ ಹೆಚ್ಚು ಅನುದಾನವನ್ನು ಕೆಲವೇ ದಿನಗಳಲ್ಲಿ ಒದಗಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಭರವಸೆ ನೀಡಿದರು.

ಮರಾಠ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ರೂ. ಅನುದಾನ

ಕರ್ನಾಟದಲ್ಲಿ ಈ ಸಮುದಾಯ ಮುಖ್ಯವಾಹಿನಿಯಲ್ಲಿ ಬೆರೆತಿದೆ. ಕರ್ನಾಟಕದ ಮರಾಠಾ ಸಮುದಾಯ ಕನ್ನಡಿಗರಾಗಿ ಮುಂದುವರಿಯುತ್ತದೆ ಎನ್ನುವ ಬಗ್ಗೆ ಎರಡು ಮಾತಿಲ್ಲ. ಮರಾಠ ಅಭಿವೃದ್ಧಿ ನಿಗಮದಿಂದ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ರೈತರಿಂದ ಹಿಡಿದು, ಯುವಕರಿಗೆ ಸ್ವಯಂ ಉದ್ಯೋಗ, ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಸಮಗ್ರ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ರೂಪಿಸಿ 100 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ. ಈ ಮೊತ್ತವನ್ನು ಸಮರ್ಪಕವಾಗಿ, ನ್ಯಾಯಸಮ್ಮತವಾಗಿ ಸಮುದಾಯದ ಬಡ ವಿದ್ಯಾರ್ಥಿಗಳು, ರೈತರು ಹಾಗೂ ಮಕ್ಕಳಿಗೆ ವಿನಿಯೋಗಿಸಬೇಕು. ಇದನ್ನು ಪೂರ್ಣಪ್ರಮಾಣದಲ್ಲಿ ಬಳಸಿ ಪುನಃ ಹೆಚ್ಚಿನ ಅನುದಾನವನ್ನು ನೀಡಲು ಸರ್ಕಾರ ಸಿದ್ಧವಿದೆ ಎಂದರು.

ಸಿಎಂ ಬಸವರಾಜ ಬೊಮ್ಮಾಯಿ

ಛತ್ರಪತಿ ಶಿವಾಜಿಯವರು ಇತಿಹಾಸದ ಶ್ರೇಷ್ಠ ಮಿನುಗು ತಾರೆ

ಉತ್ತಮ ಚರಿತ್ರೆ ಇರುವ ದೇಶಕ್ಕೆ ಉತ್ತಮ ಭವಿಷ್ಯವಿರುತ್ತದೆ. ಐದು ಸಾವಿರ ವರ್ಷಗಳ ದೇಶದ ಇತಿಹಾಸದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಶ್ರೇಷ್ಠ ಮಿನುಗು ತಾರೆ. ಅಂದಿನ ರಾಜಕೀಯ ಚರಿತ್ರೆಯನ್ನು ಬದಲಾಯಿಸಿದ ಶಿವಾಜಿ ಮಹಾರಾಜರು ಧೈರ್ಯ, ಶೌರ್ಯವಂತರಾಗಿದ್ದರು. ಮೊಘಲ್ ಸಾಮ್ರಾಜ್ಯವನ್ನು ಹೊಡೆದೋಡಿಸಿ, ಹಿಂದು ಸಾಮ್ರಾಜ್ಯ ಸ್ಥಾಪಿಸಿದ ಶ್ರೇಯಸ್ಸು ಶಿವಾಜಿ ಮಹಾರಾಜ್ ಅವರಿಗೆ ಸೇರುತ್ತದೆ. ಚರಿತ್ರೆಯಲ್ಲಿ ಅವರಿಗೆ ವಿಶಿಷ್ಟ ಸ್ಥಾನವಿದೆ. ಅಂತಹ ಸಮುದಾಯಕ್ಕೆ ಸೇರಿದವರು ಭಾಗ್ಯವಂತರು ಎಂದರು.

ಮರಾಠ ಸಮಾಜದ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ

ಮರಾಠ ಸಮುದಾಯಕ್ಕೆ ಚರಿತ್ರೆ ಇದೆ. ಆಧುನಿಕ ಸವಾಲುಗಳನ್ನು ಈ ದೇಶದ ಅಖಂಡತೆ, ಏಕತೆಯಿಂದ ದೇಶವನ್ನು , ಶಕ್ತಿ ಪರ್ವವಾಗಿ ಪರಿವರ್ತನೆ ಮಾಡುವ ಕಾಲದಲ್ಲಿ ಮರಾಠಿಗರ ಪಾತ್ರ ದೊಡ್ಡದಿದೆ. ಪ್ರಧಾನಿ ಮೋದಿಯವರು 75 ವರ್ಷ ಅಮೃತ ಮಹೋತ್ಸವದ ಕಾಲದಲ್ಲಿ ಇಡೀ ದೇಶವನ್ನು ಒಂದುಗೂಡಿಸಿದ್ದಾರೆ. ಜಗತ್ತಿನಲ್ಲಿ ಶ್ರೇಷ್ಠ ದೇಶವನ್ನಾಗಿ ಮಾಡಿದ್ದಾರೆ. ಮುಂದಿನ 25 ವರ್ಷಗಳಲ್ಲಿ ಅಂದರೆ ಸ್ವತಂತ್ರ ದೊರಕಿ 100 ವರ್ಷಗಳಾಗುವ ಸಂದರ್ಭವನ್ನು ಅಮೃತ ಕಾಲವೆಂದು ಕರೆದಿದ್ದಾರೆ. ಅಮೃತ ಕಾಲವನ್ನು ಸೃಷ್ಟಿಸುವಲ್ಲಿ ನಿಮ್ಮ ನಮ್ಮೆಲ್ಲರ ಪಾತ್ರ ದೊಡ್ಡದಿದೆ. ಈ ಸಮಾಜದ ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿಯಾದಂತೆ. ಈ ಧ್ಯೇಯದಿಂದ ನಾವು ಕೆಲಸ ಮಾಡುತ್ತಿದ್ದೇವೆ. ಈ ವಿಚಾರಗಳಿಂದಲೇ ನಮ್ಮ ನಾಯಕರಾದ ಬಿ.ಎಸ್.ಯಡಿಯೂರಪ್ಪನವರು ಮರಾಠಾ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದ್ದರು ಎಂದರು.

ಮರಾಠ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಮತ್ತು ಬಿ.ಎಸ್ ಯಡಿಯೂರಪ್ಪ

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮಾತನಾಡಿ, ನಾನು ಮತ್ತು ಬೊಮ್ಮಾಯಿ ಸಿಎಂ ಆಗಲು ಮರಾಠ ಸಮುದಾಯದವರ ಕೊಡುಗೆಯೂ ಸಾಕಷ್ಟು ಇದೆ. ಮರಾಠ ಸಮುದಾಯವನ್ನು ಪ್ರವರ್ಗ 2ಎಗೆ ಸೇರಿಸುವುದು ಅತ್ಯಂತ ಮುಖ್ಯವಾಗಿದೆ. ಹಿಂದುಳಿದ ವರ್ಗಗಳ ಆಯೋಗದಿಂದ ವರದಿ ಪಡೆದು ಸಿಎಂ ಬೊಮ್ಮಾಯಿ ಮರಾಠ ಸಮುದಾಯವನ್ನು 3ಬಿ ಯಿಂದ 2ಎಗೆ ಸೇರಿಸುವ ಕ್ರಮ ತೆಗೆದುಕೊಳ್ಳುತ್ತಾರೆ. ಈ ಮೂಲಕ ಮರಾಠ ಸಮುದಾಯದವರು ಹೋರಾಟ ಮಾಡಲು ಅವಕಾಶವನ್ನು ಕೊಡುವುದಿಲ್ಲ. ಮರಾಠ ಸಮುದಾಯದವರ ಎಲ್ಲ ಬೇಡಿಕೆಗಳನ್ನು ಸಿಎಂ ಬೊಮ್ಮಾಯಿ ಈಡೇರಿಸುತ್ತಾರೆ ಎಂದಿದ್ದಾರೆ.

Exit mobile version