ಬೆಂಗಳೂರು: ಕಾಂಗ್ರೆಸ್ ಸರ್ಕಾರಕ್ಕೆ ಗ್ಯಾರಂಟಿ ಅಸ್ತ್ರ ತಲೆನೋವಾಗಿದೆ. 200 ಯುನಿಟ್ ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೇರಿ 5 ಗ್ಯಾರಂಟಿಗಳನ್ನು (Congress Guarantee) ಸರ್ಕಾರ ಜಾರಿ ಮಾಡಬೇಕು ಎಂದು ವಿರೋಧ ಪಕ್ಷಗಳ ಜತೆಗೆ ಸಾರ್ವಜನಿಕರು ಕೂಡಾ ಒತ್ತಾಯಿಸುತ್ತಿದ್ದಾರೆ. ಅಲ್ಲದೆ ಕೆಲವೆಡೆ ಜನರು ಕರೆಂಟ್ ಬಿಲ್ ಕಟ್ಟಲು ಹಾಗೂ ಸಾರಿಗೆ ಬಸ್‌ಗಳಲ್ಲಿ ಟಿಕೆಟ್ ಪಡೆಯಲು ನಿರಾಕರಿಸುತ್ತಿರುವ ಘಟನೆಗಳು ನಡೆಯುತ್ತಿವೆ. ಇಂತಹ ಘಟನೆಗಳು ಶುಕ್ರವಾರವೂ ಕಂಡುಬಂದಿದೆ.
ಮಹದೇವಪ್ಪ ನಿಂಗೂ ಫ್ರೀ, ನಂಗೂ ಫ್ರೀ, ಎಲ್ಲರಿಗೂ ಫ್ರೀ
ಮಂಡ್ಯ: ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಉಚಿತ ಭಾಗ್ಯಗಳ ಪೇಚಿಗೆ ಚೆಸ್ಕಾಂ ಸಿಬ್ಬಂದಿ ಸಿಲುಕಿದ್ದಾರೆ. ವಿದ್ಯುತ್ ಬಿಲ್ ಕಟ್ಟಿ ಎಂದು ಹೋದರೆ ಜನರು ನಿರಾಕರಿಸುತ್ತಿರುವುದು ಕಂಡುಬಂದಿದೆ. ಹೀಗಾಗಿ ಬಾಕಿ ವಿದ್ಯುತ್ ಬಿಲ್ ವಸೂಲಿ ಮಾಡುವುದು ಚೆಸ್ಕಾಂ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ.
ಕರೆಂಟ್ ಬಿಲ್ ಕಟ್ಟಿ ಎಂದಿದ್ದಕ್ಕೆ ವ್ಯಕ್ತಿಯೊಬ್ಬ, ಸಿದ್ದರಾಮಯ್ಯರಂತೆ ಡೈಲಾಗ್ ಹೊಡೆದಿರುವ ಘಟನೆ ನಡೆದಿದೆ.
ಮಂಡ್ಯ ಕೆರಗೊಡಿನಲ್ಲಿ ವ್ಯಕ್ತಿಯೊಬ್ಬರು, ಮಹದೇವಪ್ಪ ನಿಂಗೂ ಫ್ರೀ, ನಂಗೂ ಫ್ರೀ ಎಲ್ಲರಿಗೂ ಫ್ರೀ ಕಣಪ್ಪ. ಮಾತಿಗೆ ತಪ್ಪಲ್ಲಪ್ಪ, ನಮ್ಮ ಸರ್ಕಾರ ಬಂದ 24 ಗಂಟೆಯೊಳಗೆ ಯಾರೂ ಕರೆಂಟ್ ಬಿಲ್ ಕಂಟ್ಟಂಗಿಲ್ಲ, ಉಚಿತ ವಿದ್ಯುತ್ ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದರಲ್ಲ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಈಗ ಯಾವುದೇ ಬಿಲ್ ಕಟ್ಟಲ್ಲ ಎಂದಿದ್ದಾರೆ. ಈ ವೇಳೆ ಹಳೆ ಬಿಲ್ ಕಟ್ಟಣ್ಣ ಎಂದು ಚೆಸ್ಕಾಂ ಸಿಬ್ಬಂದಿ ಕೇಳಿದಾಗ, ಹಳೆ ಬಿಲ್ ಕಟ್ಟುತ್ತೇವೆ ಎಂದು ವ್ಯಕ್ತಿ ತಿಳಿಸಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ಇದನ್ನೂ ಓದಿ | Congress Guarantee: ನಾನು ಕರೆಂಟ್ ಬಿಲ್ ಕಟ್ಟಲ್ಲ: ಮಾಜಿ ಸಚಿವ ಆರ್. ಅಶೋಕ್ ಘೋಷಣೆ
ಫ್ರೀ ಕೊಡ್ತೀವಿ ಅಂತ ಹೇಳಿದ್ದಾರೆ, ಕೊಡದಿದ್ದರೆ ಜನ ಬಿಡಲ್ಲ
ಹಾವೇರಿ: ಮಹಿಳೆಯವರಿಗೆ ಬಸ್ ಪ್ರಯಾಣ ಉಚಿತ ವಿಚಾರದಲ್ಲಿ ಸರ್ಕಾರದ ವಿರುದ್ಧ ಮಹಿಳೆಯರು ಆಕ್ರೋಶ ಹೊರಹಾಕಿರುವ ಘಟನೆ ನಗರದಲ್ಲಿ ನಡೆದಿದೆ.
ಚುನಾವಣೆಗೆ ಮೊದಲು ಮಹಿಳೆಯರಿಗೆ ಬಸ್ ಪ್ರಯಾಣ ಎಂದು ಹೇಳಿದ್ದರು, ಇನ್ನೂ ಫ್ರೀ ಕೊಟ್ಟಿಲ್ಲ. ಹಣ ಕೊಟ್ಟು ಟಿಕೆಟ್ ಪಡೆದು ಪ್ರಯಾಣ ಮಾಡುತ್ತಿದ್ದೇವೆ. ಫ್ರೀ ಕೊಡುತ್ತೇವೆ ಅಂತ ಹೇಳಿದ್ದಾರೆ, ಕೊಡದಿದ್ದರೆ ಜನ ಬಿಡಲ್ಲ ಎಂದು ಬಸ್ ಪ್ರಯಾಣ ಉಚಿತ ಮಾಡದಿದ್ದಕ್ಕೆ ಮಹಿಳೆಯರು ಆಕ್ರೋಶ ಹೊರಹಾಕಿದ್ದಾರೆ.
ಕಾಂಗ್ರೆಸ್‌ಗೆ ಮತಹಾಕಿದ್ದೇವೆ, ಬಿಲ್ ಕಟ್ಟಲ್ಲ
ಗದಗ: ಕಾಂಗ್ರೆಸ್ ಸರ್ಕಾರ ಉಚಿತ ವಿದ್ಯುತ್ ಭರವಸೆ ನೀಡಿದೆ. ಹೀಗಾಗಿ ನಾವು ವಿದ್ಯುತ್ ಬಿಲ್ ಕಟ್ಟಲ್ಲ ಎಂದು ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಪುಟಗಾಂವ್ ಬಡ್ನಿ ಗ್ರಾಮಸ್ಥರು ಹೇಳಿದ್ದಾರೆ.
ವಿದ್ಯುತ್ ಬಿಲ್ ವಸೂಲಿಗೆ ಬಂದಿದ್ದ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿರುವ ಜನರು, ಕಾಂಗ್ರೆಸ್‌ನವರು ನಮಗೆ ಉಚಿತ ಭರವಸೆ ನೀಡಿ ಓಟು ಹಾಕಿಸಿಕೊಂಡಿದ್ದಾರೆ. ಐದು ಗ್ಯಾರಂಟಿ ಭರವಸೆ ನೀಡಿದ್ದಾರೆ. ಅದರಂತೆ ಕಾಂಗ್ರೆಸ್‌ಗೆ ಮತ ಹಾಕಿ ಸರ್ಕಾರ ರಚನೆಗೆ ಅವಕಾಶ ಕೊಟ್ಟಿದ್ದೇವೆ. ನೀವು ಏನು ಮಾಡಿದರೂ ನಾವು ಬಿಲ್ ಕಟ್ಟಲ್ಲ ಎಂದು ವ್ಯಕ್ತಿಯೊಬ್ಬರು ಹೇಳಿದ್ದರಿಂದ ಬಂದ ದಾರಿಗೆ ಸುಂಕ ಇಲ್ಲ ಎಂದು ಕೆಇಬಿ ವಿದ್ಯುತ್ ಸಿಬ್ಬಂದಿ ಮರಳಿದ್ದಾರೆ.
ಇದನ್ನೂ ಓದಿ | Karnataka Politics: ಕುಮಾರಸ್ವಾಮಿಯವರನ್ನೇ ಬಿಜೆಪಿ ನಾಯಕನಾಗಿಸಿ ಎಂದ ಕಾರ್ಯಕರ್ತರು; ಕೊನೆಗೂ ಫೀಲ್ಡಿಗಿಳಿದ ಬಿಜೆಪಿ !
ಬೆಂಗಳೂರಿನಲಿ ಬಸ್ ಫ್ರೀ ಯಾವಾಗ ಎಂದ ಮಹಿಳೆಯರು
ಬೆಂಗಳೂರು: ಸರ್ಕಾರ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ ಎಂದಿದ್ದೇ ತಡ ಕೆಲಕಡೆಗಳಲ್ಲಿ ಮಹಿಳೆಯರು ಟಿಕೆಟ್ ತೆಗೆದುಕೊಳ್ಳದೇ ಕಂಡಕ್ಟರ್ ಜತೆ ಜಗಳಕ್ಕಿಳಿದಿದ್ದ ಘಟನೆ ನಡೆದಿದ್ದವು. ಇದೀಗ ಸಿಲಿಕಾನ್ ಸಿಟಿಯ ಮಹಿಳೆಯರು ಕೂಡ ಸರ್ಕಾರ ಕೊಟ್ಟ ಮಾತನ್ನು ಆದಷ್ಟು ಬೇಗ ಜಾರಿಗೆ ತರಲಿ ಎನ್ನುತ್ತಿದ್ದಾರೆ.
ಇನ್ನು ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಎಂದು ಕಾಂಗ್ರೆಸ್ ಹೇಳಿತ್ತು. ಜಾರಿ ಮಾಡಲು ಸಾಧ್ಯವಿಲ್ಲದಿದ್ದರೆ ಯಾಕೆ ಭರವಸೆ ನೀಡಬೇಕು ಎಂದು ಪ್ರಶ್ನಿಸಿರುವ ಮಹಿಳೆಯರು, ಸರ್ಕಾರದ ದೃಷ್ಟಿಯಲ್ಲಿ ಯೋಚಿಸಿದರೆ ಇದು ಅಸಾಧ್ಯ ಅಂತ ಕೂಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.