ಚಿಕ್ಕಬಳ್ಳಾಪುರ: ಹಲವು ಕೇಸ್ ಹಾಕಿಸಿ ವಾರಕ್ಕೆ ಐದು ದಿನ ನನ್ನನ್ನು ಕೋರ್ಟ್‌ನಲ್ಲಿ ನಿಲ್ಲಿಸಿದರು. ಅವರ ಊರಿನ ಹುಡುಗ ಎಂದೂ ಅನುಕಂಪ ಇರಲಿಲ್ಲ. ಆ ಅನುಕಂಪ ಇದ್ದಿದ್ದರೆ ನಾನು ಎಂಎಲ್‌ಎ ಆಗುತ್ತಿರಲಿಲ್ಲ. ಯಾರೂ ದ್ವೇಷದ ರಾಜಕಾರಣ ಮಾಡಬಾರದು. ದ್ವೇಷ ರಾಜಕಾರಣ ಮಾಡಿದರೆ ನನ್ನಂತಹವರು ಹುಟ್ಟಿಕೊಳ್ಳುತ್ತಾರೆ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಪರೋಕ್ಷವಾಗಿ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ವಾಗ್ದಾಳಿ ನಡೆಸಿದ್ದಾರೆ.
ತಾಲೂಕಿನ ಪೆರೇಸಂದ್ರ ಗ್ರಾಮದಲ್ಲಿ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅವರ (ಸುಧಾಕರ್) ಊರಿನ ಹುಡುಗ ಎಂದೂ ಅವರಿಗೆ ಅನುಕಂಪ ಇರಲಿಲ್ಲ. ಆ ಅನುಕಂಪ ಇದ್ದಿದ್ದರೆ ನಾನು ಎಂಎಲ್‌ಎ ಆಗುತ್ತಿರಲಿಲ್ಲ. ಹಾಗಂತ ನಾನು ಯಾರ ಮೇಲೂ ಎಫ್‌ಐಆರ್ ಹಾಕಿಸಿಲ್ಲ. ವಾರದಲ್ಲಿ ಐದೈದು ದಿನ ಕೋರ್ಟ್‌ನಲ್ಲಿ ನಿಂತಾಗ ನಾನು ಕಣ್ಣೀರು ಹಾಕಿದ್ದೇನೆ. ಇಷ್ಟು ಕೇಸ್‌ಗಳು ಹಾಕಿಸಿಬಿಟ್ಟರೆ ನನ್ನ ಜೀವನ ಏನಾಗಬೇಕು ಅಂತ ನೊಂದಿದ್ದೇನೆ. ಈ ಬಗ್ಗೆ ಯೋಚಿಸಿ ಯೋಚಿಸಿ ಈ ದಿನ ಶಾಸಕನಾಗಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ | CM Siddaramaiah : ಕಾಂಗ್ರೆಸ್ ಸರ್ಕಾರದ ವಿರುದ್ಧ ಚಾರ್ಜ್‌ಶೀಟ್ ತರಲು ಬಿಜೆಪಿಗೆ ನೈತಿಕ ಹಕ್ಕಿಲ್ಲ ಎಂದ ಸಿದ್ದರಾಮಯ್ಯ
ಶಾಸಕ ಆಗಿದ್ದೀನಿ ಎಂದು ನನಗೆ ಅಹಂಕಾರ ಬಂದಿಲ್ಲ. ಮೊದಲು ಹೀಗೆ ಇದ್ದೆ, ಮುಂದೆಯೂ ಹೀಗೆ ಇರುತ್ತೇನೆ. ಅಧಿಕಾರ ಯಾರಿಗೂ ಶಾಶ್ವತವಲ್ಲ. ಎಷ್ಟು ವರ್ಷ ಶಾಸಕ ಆಗಿರುತ್ತೇನೋ ಅಲ್ಲಿಯವರೆಗೂ ನಿಮ್ಮ ಕಷ್ಟ ಪರಿಹರಿಸುತ್ತೇನೆ. ನೀವು ಎಂಎಲ್‌ಎಗೆ ಗೌರವ ಕೊಡಿ, ಆದರೆ ಭಯ ಬೀಳಬೇಡಿ ಎಂದು ತಿಳಿಸಿದರು.
ನಾವೆಲ್ಲರೂ ಒಂದೇ, ಹೀಗಾಗಿ ಯಾರು ಗಲಾಟೆ ಮಾಡಿಕೊಳ್ಳಬಾರದು. ನಾನು ಡಾ.ಬಿ.ಆರ್.ಅಂಬೇಡ್ಕರ್ ಭಕ್ತ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಗ್ರಾಮಸ್ಥರು ಸಮಸ್ಯೆ ಏನಿದ್ದರೂ ಹೇಳಿ, ಪರಿಹರಿಸುತ್ತೇನೆ. ಮಹಿಳೆಯರಿಗೆ ಅರಿಶಿನ, ಕುಂಕುಮ ಕೊಟ್ಟಿದ್ದೇನೆ, ಮುಂದಿನ 4 ವರ್ಷವೂ ಕೊಡುತ್ತೇನೆ. ಗಣೇಶ ಹಬ್ಬಕ್ಕೆ ಕ್ಷೇತ್ರ 20 ಸಾವಿರ ಬಡ ಮಕ್ಕಳಿಗೆ ಕಲರ್ ಬಟ್ಟೆ ಕೊಡಿಸುತ್ತೇನೆ. ಐದು ಆಂಬ್ಯುಲೆನ್ಸ್ ಖರೀದಿಸಿದ್ದು, ಪೆರೇಸಂದ್ರದಲ್ಲಿ ಒಂದು ಆಂಬ್ಯುಲೆನ್ಸ್ ಇರಲಿದೆ ಎಂದು ತಿಳಿಸಿದರು.
ಸ್ವಗ್ರಾಮದಲ್ಲಿ ಭರ್ಜರಿ ಸ್ವಾಗತ
ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹಾಗೂ ಬಿಜೆಪಿ ಮಾಜಿ ಸಚಿವ ಡಾ.ಕೆ. ಸುಧಾಕರ್ ಅವರ ಸ್ವಗ್ರಾಮವಾದ ಪೆರೇಸಂದ್ರ ಗ್ರಾಮದಲ್ಲಿ ಮಂಗಳವಾರ ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕ ಪ್ರದೀಪ್ ಈಶ್ವರ್‌ಗೆ ಸ್ವಗ್ರಾಮದಲ್ಲಿ ಭರ್ಜರಿ ಸ್ವಾಗತ ದೊರೆಯಿತು. ಬೃಹತ್ ಸೇಬಿನ ಹಾರ ಹಾಕಿ, ಪಟಾಕಿ ಸಿಡಿಸಿ ಗ್ರಾಮಸ್ಥರು ಸ್ವಾಗತ ಕೋರಿದರು.
ಇದನ್ನೂ ಓದಿ | Gruha Lakshmi Scheme: ಗೃಹಲಕ್ಷ್ಮಿ ಯೋಜನೆ ಚಾಲನೆಗೆ ಕೌಂಟ್‌ಡೌನ್ ಸ್ಟಾರ್ಟ್; ನಾಳೆಯೇ ಸಿಗಲಿದೆ 2000 ರೂ.