Site icon Vistara News

2nd PUC Supplementary Result: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟ; ಶೇ.35.21 ವಿದ್ಯಾರ್ಥಿಗಳು ಪಾಸ್‌

Students appearing for exams

ಬೆಂಗಳೂರು: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶ (2nd PUC Supplementary Result) ಬಿಡುಗಡೆಯಾಗಿದೆ. ಆಗಸ್ಟ್‌ 22ರಿಂದ ಸೆಪ್ಟೆಂಬರ್ 2ರವರೆಗೂ ನಡೆದಿದ್ದ ಪೂರಕ ಪರೀಕ್ಷೆಯ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಂಗಳವಾರ ಬಿಡುಗಡೆ ಮಾಡಿದ್ದು, 41,961 (ಶೇ.35.21) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ವಿದ್ಯಾರ್ಥಿಗಳು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವೆಬ್‌ಸೈಟ್‌ನಲ್ಲಿ ಫಲಿತಾಂಶ ವೀಕ್ಷಿಸಬಹುದು. ಕಾಲೇಜುಗಳಲ್ಲಿ ಬುಧವಾರ ಬೆಳಗ್ಗೆ 10 ಗಂಟೆಗೆ ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿ | KSET 2023: ಕೆಸೆಟ್ ಪರೀಕ್ಷೆಗೆ ಅರ್ಜಿ ಆಹ್ವಾನ, ಆನ್‌ಲೈನ್ ಮೂಲಕ ಅಪ್ಲೈ ಮಾಡಲು ಸೆ.30 ಕೊನೆ ದಿನ

ರಾಜ್ಯದ ಒಟ್ಟು 274 ಪರೀಕ್ಷಾ ಕೇಂದ್ರದಲ್ಲಿ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ನಡೆದಿತ್ತು. 1.21 ಲಕ್ಷ ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ ನೋಂದಾಯಿಸಿದ್ದರು. ಈ ಪೈಕಿ 1.19 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷೆಗೆ ಹಾಜರಾಗಿದ್ದ 75,967 ಬಾಲಕರ ಪೈಕಿ 24,845 (ಶೇ 32.7) ಬಾಲಕರು ತೇರ್ಗಡೆ ಹೊಂದಿದ್ದಾರೆ. ಪರೀಕ್ಷೆ ಎದುರಿಸಿದ 43,216 ಬಾಲಕಿಯರಲ್ಲಿ 17,116 (ಶೇ 39.61) ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದಾರೆ.

ಕಲಾ ವಿಭಾಗದಲ್ಲಿ 61,184 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ 22,409 (36.63) ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 36,279 ವಿದ್ಯಾರ್ಥಿಗಳು ಹಾಜರಾಗಿದ್ದು, ಇದರಲ್ಲಿ 10,093 (ಶೇ.27.82) ವಿದ್ಯಾರ್ಥಿಗಳು ಪಾಸ್‌ ಆಗಿದ್ದಾರೆ. ಇನ್ನು ವಿಜ್ಞಾನ ವಿಭಾಗದಲ್ಲಿ 21,720 ವಿದ್ಯಾರ್ಥಿಗಳು ಹಾಜರಾಗಿದ್ದು, ಈ ಪೈಕಿ 9,459 ವಿದ್ಯಾರ್ಥಿಗಳು (ಶೇ.43.55) ತೇರ್ಗಡೆಯಾಗಿದ್ದಾರೆ. ಈ ಮೂಲಕ ಒಟ್ಟು 41,961 (ಶೇ 35.21) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಇದನ್ನೂ ಓದಿ | SBI PO Recruitment 2023: 2000 ಪ್ರೊಬೇಷನರಿ ಹುದ್ದೆ ನೇಮಕಕ್ಕೆ ಎಸ್‌ಬಿಐ ಅರ್ಜಿ ಆಹ್ವಾನ, ಸೆ.27 ಅಪ್ಲೈಗೆ ಕೊನೆ ದಿನ

ಉತ್ತರ ಪತ್ರಿಕೆಯ ಸ್ಕ್ಯಾನಿಂಗ್‌ ಪ್ರತಿಗಾಗಿ ಅರ್ಜಿ ಸಲ್ಲಿಸಲು ಸೆ.12ರಿಂದ 15ವರೆಗೆ ಅವಕಾಶವಿದೆ. ಈ ಸ್ಕ್ಯಾನಿಂಗ್‌ ಪ್ರತಿಯನ್ನು ಸೆ.16ರಿಂದ 17ರವರೆಗೆ ಕೆಎಸ್‌ಇಎಬಿ ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಕಡ್ಡಾಯವಾಗಿ ಸ್ಕ್ಯಾನಿಂಗ್‌ ಪ್ರತಿ ತೆಗೆದುಕೊಂಡವರಿಗೆ ಮಾತ್ರ ಮರು ಮೌಲ್ಯಮಾಪನ ಹಾಗೂ ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಸ್ಕ್ಯಾನಿಂಗ್‌ ಪ್ರತಿ ಪಡೆಯಲು ಪ್ರತಿ ವಿಷಯಕ್ಕೆ 530 ರೂ. ಇರಲಿದೆ. ಇನ್ನು ಮರು ಮೌಲ್ಯಮಾಪನದ ಶುಲ್ಕ ಪ್ರತಿ ವಿಷಯಕ್ಕೆ 1,670 ರೂ. ಇರುತ್ತದೆ.

Exit mobile version